ಎಚ್.ಕೆ.ಬಿ. ಸ್ವಾಮಿ
ಕನ್ನಡಪ್ರಭ ವಾರ್ತೆ ಸೊರಬತಾಲೂಕಿನ ಶಿಗೇಹಳ್ಳಿ ಗ್ರಾಮದ ಸಂಪರ್ಕ ರಸ್ತೆ ಒಂದೇ ಮಳೆಗೆ ಕೆಸರು ಗದ್ದೆಯಾಗಿ ಪರಿವರ್ತನೆಯಾಗಿದೆ. ಈ ಮೂಲಕ ₹20 ಲಕ್ಷ ವೆಚ್ಚ ನೀರಿನಲ್ಲಿ ಹೋಮ ಮಾಡಿದಂತಾಗಿದೆ. 600 ಮೀ. ರಸ್ತೆ ಅವೈಜ್ಞಾನಿಕ ಕಾಮಗಾರಿಯಿಂದ ಭಾರೀ ಮಳೆಗೆ ಸಂಪೂರ್ಣ ಹಾಳಾಗಿದೆ.
ಸೊರಬ ಪುರಸಭೆ ವ್ಯಾಪ್ತಿಗೆ ಸೇರುವ ಪಟ್ಟಣದಿಂದ 5ಕಿ.ಮೀ. ದೂರದ ಶಿಗೇಹಳ್ಳಿ ಗ್ರಾಮದಲ್ಲಿರುವ ಈ ಅವೈಜ್ಞಾನಿಕ ಸಂಪರ್ಕ ರಸ್ತೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಬೇಸಿಗೆಯಲ್ಲಿ ಧೂಳು ಮಯವಾಗಿತ್ತು. ಈಗ ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ರಸ್ತೆ ಸಂಚಾರಕ್ಕೆ ಬರದಂತಾಗಿದೆ.ಶಿಗೇಹಳ್ಳಿ ಗ್ರಾಮದಿಂದ ಬಾಳೆಕೊಪ್ಪ-ಓಟೂರು-ಚಿತ್ರಟ್ಟೆಹಳ್ಳಿ ಮೂಲಕ ಒಳ ಮಾರ್ಗವಾಗಿ ಆನವಟ್ಟಿ ರಾಷ್ಟ್ರೀಯ ಹೆದ್ದಾರಿಗೆ ಸೇರುವ ಈ ರಸ್ತೆ ಉದ್ರಿ ಗ್ರಾಪಂ ವ್ಯಾಪ್ತಿಯ ಯಲವಾಟ, ಬಿಳಾಗಿ, ಕುಮ್ಮೂರು, ಚಿಕ್ಕಾವಲಿ, ಉಪ್ಪಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಹತ್ತಿರದ ಸಂಪರ್ಕ ಮಾರ್ಗವಾಗಿದೆ. ಈ ಹಿಂದೆ ಕಾಲು ಸಂಕದಂತಿದ್ದ ಮಣ್ಣಿನ ರಸ್ತೆಯನ್ನು ಅಗಲೀಕರಣ ಮಾಡಿ ವ್ಯವಸ್ಥಿತ ರಸ್ತೆ ನಿರ್ಮಿಸುವಂತೆ ಕಳೆದ 2022ರಲ್ಲಿ ಹಿಂದಿನ ಶಾಸಕ ಕುಮಾರ ಬಂಗಾರಪ್ಪ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿದ್ದ ಕುಮಾರ ಬಂಗಾರಪ್ಪ 2023ರ ಮಾರ್ಚ್ ತಿಂಗಳಿನಲ್ಲಿ ಶಾಸಕರ ಅನುದಾನದಲ್ಲಿ 600ಮೀಟರ್ ರಸ್ತೆ ನಿರ್ಮಾಣಕ್ಕೆ ₹20ಲಕ್ಷ ಬಿಡುಗಡೆ ಮಾಡಿ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ವಹಿಸಿದ್ದರು. ರಸ್ತೆಯನ್ನು 4 ಅಡಿಯಷ್ಟು ಅಗೆದು ಗೊಚ್ಚು ಮಣ್ಣು ಬಳಸದೇ ಹಳದಿ ಕೊಟ್ಟೆ ಮಣ್ಣನ್ನು ಬಳಸಿ ರಸ್ತೆ ನಿರ್ಮಿಸುವ ಮೂಲಕ ಅವೈಜ್ಞಾನಿಕ ಕಾಮಗಾರಿಗೆ ಕಾರಣರಾಗಿದ್ದಾರೆ. ಈ ಮೂಲಕ ಸರ್ಕಾರದ 20 ಲಕ್ಷ ರು.ಮಣ್ಣುಪಾಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಒಂದು ವ್ಯವಸ್ಥಿತ ರಸ್ತೆ ನಿರ್ಮಾಣವಾಗಬೇಕಾದರೆ ರಸ್ತೆ ಅಗೆದು ಜಲ್ಲಿ ಬಿಚ್ಚಾವಣೆ ಮಾಡಿ ಗೊಚ್ಚು ಮಣ್ಣು ಹಾಕಿ ರೋಲರ್ ಮೂಲಕ ಸಮತಟ್ಟು ಮಾಡಬೇಕು. ಆದರೆ ಇಲಾಖೆಯ ಟೆಂಡರ್ ನಿಯಮಗಳನ್ನು ಪಾಲಿಸದೇ ರಸ್ತೆ ಅಗೆದು ಮಣ್ಣು ಸುರಿದು ರೋಲರ್ ಹೊಡೆಸಿ, ನಂತರದ ದಿನಗಳಲ್ಲಿ ಡಾಂಬರೀಕರಣವಾಗಬೇಕಿದ್ದ ರಸ್ತೆ ಕೆಸರು ಮಣ್ಣಿನಿಂದ ಆವೃತವಾಗಿದೆ. ಯಾವುದೇ ವಾಹನ ಸಂಚರಿಸಲು ಮತ್ತು ಕಾಲು ನಡುಗೆಯಲ್ಲಿ ಓಡಾಡಲು ಬಾರದ ದುಸ್ಥಿತಿ ತಲುಪಿದೆ. ಕಳೆದ ವರ್ಷ ಅಲ್ಪ ಪ್ರಮಾಣದಲ್ಲಿ ಮಳೆ ಬಂದಾಗಲೂ ರಸ್ತೆ ಸಂಪೂರ್ಣ ಕೆಸರಾಗಿತ್ತು. ಪ್ರಸಕ್ತ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸಂಪೂರ್ಣ ಜಲಾವೃತವಾಗಿದೆ.
ದಂಡಾವತಿ ನದಿ ರಸ್ತೆಯ ಕೆಲವೇ ಮೀಟರ್‌ಗಳಲ್ಲಿ ಹರಿಯುವುದರಿಂದ ರಸ್ತೆಯಲ್ಲಿ ನೀರು ಸದಾ ಜಿನುಗುತ್ತಿರುತ್ತದೆ. ಅರಿವಿಲ್ಲದವರು ರಸ್ತೆಯಲ್ಲಿ ಸಂಚರಿಸಲು ಹೋದರೆ ಕಾಲುಗಳು ಆಳಕ್ಕೆ ಹುದುಗಿ ಹೋಗುತ್ತವೆ. ಇನ್ನು ವಾಹನ ಸಂಚಾರವಂತೂ ಸಂಪೂರ್ಣವಾಗಿ ಸ್ಥಗಿತವಾಗಿದೆ. ಈ ಕಾರಣದಿಂದ ಶಿಗೇಹಳ್ಳಿ ಸೇರಿದಂತೆ ಆ ಮಾರ್ಗದಲ್ಲಿ ಸಾಗುವ ಇತರೆ ಗ್ರಾಮಗಳಿಗೆ ಸಾಗುವ ಸಂಪರ್ಕವೇ ಕಡಿದುಕೊಂಡಿದೆ.ಪ್ರತಿ ದಿನ ರೈತರು ತಮ್ಮ ಹೊಲ-ಗದ್ದೆ, ಶಾಲಾ-ಕಾಲೇಜಿಗೆ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳಿಗೆ ಮಳೆಗಾಲದಲ್ಲಿ ದುರ್ಗಮ ರಸ್ತೆಯಲ್ಲಿ ಸಂಚರಿಸುವುದು ದುಸ್ಸಾಹಸವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಸಂಪರ್ಕ ರಸ್ತೆ ಬಗ್ಗೆ ಗಮನಹರಿಸಿ, ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.