ಕನ್ನಡಪ್ರಭ ವಾರ್ತೆ ಶಿರಾ ಶಿರಾ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಜೀಷಾನ್ ಮೊಹಮದ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀಕಾಂತ್ ಅಯ್ಕೆಯಾಗಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಶಿರಾ ನಗರಸಭೆ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದ್ದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡರಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 31 ಸದಸ್ಯಬಲದ ಶಿರಾ ನಗರಸಭೆಯಲ್ಲಿ ಕಾಂಗ್ರೆಸ್ 13, ಜೆಡಿಎಸ್ 6, ಬಿಜೆಪಿ 4 ಹಾಗೂ ಪಕ್ಷೇತರರು 8 ಸದಸ್ಯರಿದ್ದು, ಮೂವರು ವಿಧಾನಪರಿಷತ್ ಸದಸ್ಯರು, ಸಂಸದರು, ಹಾಗೂ ಶಾಸಕರು ಸೇರಿ ಒಟ್ಟು 36 ಮತದಾರರಿದ್ದರು. 36 ಮತದಾರರಲ್ಲಿ 5 ಮಂದಿ ಗೈರು ಹಾಜರಾಗಿದ್ದು, ಒಟ್ಟು 31 ಮತದಾರರು ಚುನಾವಣೆಯಲ್ಲಿ ಭಾಗವಹಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಜೀಷಾನ್ ಮೊಹಮದ್, ಎನ್.ಡಿ.ಎ. ಮೈತ್ರಿಕೂಟದಿಂದ ಜೆಡಿಎಸ್ ಪಕ್ಷದ ಆರ್.ರಾಮು, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಲಕ್ಷ್ಮೀಕಾಂತ್ ಎನ್.ಡಿ.ಎ. ಮೈತ್ರಿಕೂಟದಿಂದ ಬಿಜೆಪಿ ಪಕ್ಷದ ರಂಗರಾಜು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೀಷಾನ್ ಮೊಹಮದ್ 23 ಮತ ಗಳಿಸಿದರು. ಜೆಡಿಎಸ್ ಪಕ್ಷದ ಆರ್.ರಾಮು 8 ಮತಗಳನ್ನು ಪಡೆದರು. ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಲಕ್ಷ್ಮೀಕಾಂತ್ 23, ಬಿಜೆಪಿ ಪಕ್ಷದ ರಂಗರಾಜು 8 ಮತಗಳನ್ನು ಗಳಿಸಿದರು. 23 ಮತಗಳನ್ನು ಪಡೆದ ಜೀಷಾನ್ ಮೊಹಮದ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಲಕ್ಷ್ಮೀಕಾಂತ್ ಆಯ್ಕೆಯಾದರು.ಬಾಕ್ಸ್.... ಕಳೆದ ಅವಧಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದಿಂದ ಜೆಡಿಎಸ್ ಪಕ್ಷದ ಅಂಜಿನಪ್ಪ, ಉಪಾಧ್ಯಕ್ಷರಾಗಿ ಬಿಜೆಪಿ ಪಕ್ಷದಿಂದ ಅಂಬುಜ ನಟರಾಜ್ ಆಯ್ಕೆಯಾಗಿದ್ದರು. ಕೇವಲ 4 ಸದಸ್ಯರನ್ನು ಹೊಂದಿದ್ದ ಬಿಜೆಪಿ ಪಕ್ಷ ಉಪಾಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಕೇವಲ 6 ಸದಸ್ಯರನ್ನು ಹೊಂದಿದ್ದ ಜೆಡಿಎಸ್ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಭಾರಿ ಮೈತ್ರಿಕೂಟಕ್ಕೆ ಮುಖಭಂಗವಾಗಿದೆ. ಬಿಜೆಪಿ ಪಕ್ಷದ ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರು ಚುನಾವಣೆ ಪ್ರಕ್ರಿಯೆಯಲ್ಲಿ ಗೈರು ಹಾಜರಾಗಿದ್ದು ಆಶ್ಚರ್ಯ ತಂದಿತ್ತು. ಅಭಿನಂದನೆ ಸಲ್ಲಿಕೆ: ನಗರಸಭೆ ನೂತನ ಅಧ್ಯಕ್ಷರಾದ ಜೀಷಾನ್ ಮೋಹಮದ್, ಉಪಾಧ್ಯಕ್ಷರಾದ ಲಕ್ಷ್ಮೀಕಾಂತ್ ಅವರಿಗೆ ಶಾಸಕ ಡಾ.ಟಿ.ಬಿ.ಜಯಚಂದ್ರ, ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ಅಮಾನುಲ್ಲಾ ಖಾನ್, ಪೂಜಾ ಪೆದ್ದರಾಜು, ಶಿವಶಂಕರಪ್ಪ, ಅಬ್ದುಲ್ಲಾ ಖಾನ್, ಎಚ್.ಗುರುಮೂರ್ತಿ ಗೌಡ, ಟಿ.ಲೋಕೇಶ್, ನಗರಸಭಾ ಸದಸ್ಯರಾದ ಬುರಾನ್ ಮೊಹಮದ್, ಅಜಯ ಕುಮಾರ್ , ಕೃಷ್ಣಪ್ಪ, ಇರ್ಷಾದ್ ಪಾಷ, ಬಿ.ಎಂ.ರಾಧಾಕೃಷ್ಣ, ಮಹೇಶ್, ದೃವಕುಮಾರ್, ನಗರಸಭೆ ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ಜಯಲಕ್ಷ್ಮೀ, ನೂರುದ್ದೀನ್, ಮಂಜುನಾಥ್, ಮುಖಂಡರಾದ ಮಜರ್, ಶಂಕರ್, ಲಕ್ಕನಹಳ್ಳಿ ಶ್ರೀನಿವಾಸ್, ರೂಪೇಶ್ ಕೃಷ್ಣಯ್ಯ, ಪಿ.ಬಿ.ನರಸಿಂಹಯ್ಯ, ಕಲ್ಲುಕೋಟೆ ಲಿಂಗರಾಜು ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.