ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ನಗರಸಭೆ ಕಚೇರಿ, ಮಹಿಳಾ ಸಮಾಜ, ಹರಿಹರ ರಸ್ತೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ 150ಕ್ಕು ಹೆಚ್ಚು ಮಳಿಗೆಗಳನ್ನು ಬಾಡಿಗೆ ನೀಡಲಾಗಿದೆ. ಹಲವಾರು ವರ್ಷಗಳಿಂದ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಇದರ ಜೊತೆಗೆ ಮಳಿಗೆ ಮಾಲೀಕರು ಸಹ ಬಾಡಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದರು. ಇದರಿಂದಾಗಿ ನಗರಸಭೆ ಆರ್ಥಿಕ ಸಂಗ್ರಹಕ್ಕೆ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿ, ಸಿಬ್ಬಂದಿ ಸ್ಥಳೀಯ ಮಹಿಳಾ ಸಮಾಜದ ಮಳಿಗೆಗಳಿಗೆ ಬೀಗ ಜಡೆದಿದ್ದಾರೆ. ಇದರಿಂದಾಗಿ ಆಕ್ರೋಶಗೊಂಡ ಮಳಿಗೆ ಮಾಲೀಕರು ವಾಗ್ವಾದಕ್ಕೆ ಮುಂದಾಗಿದ್ದು ಇದೇ ವೇಳೆ ಎಳನೀರಿನ ಅಂಗಡಿಯ ವ್ಯಕ್ತಿ ಎಳನೀರು ಕತ್ತರಿಸುವ ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ಜಗಳಕ್ಕೆ ನಿಂತಿದ್ದಕ್ಕೆ ಕೆಲಕಾಲ ಉದ್ವಿಗ್ನ ಉಂಟಾಗಿತ್ತು.
ಇದೇ ವೇಳೆ ನಗರಸಭೆಯ ಸಿಬ್ಬಂದಿ ವಿಡಿಯೋ ಸೆರೆಹಿಡಿದು ಬೆದರಿಸುತ್ತಿಯಾ? ಕೊಚ್ಚಿ ಹಾಕ್ತಿಯಾ ಎಂದು ಪ್ರಶ್ನಿಸಿದಾಗ ಕತ್ತಿ ಬಿಸಾಡಿ ಆನಂತರ ಅಧಿಕಾರಿಗಳ ಮಾತು ಆಲಿಸಿದ್ದಾನೆ. ನನಗೆ ಒಂದೇ ಬಾರಿ ನೋಟಿಸ್ ನೀಡಿದ್ದು ನಿಜ, ಬಾಡಿಗೆ ಪಾವತಿಗೆ ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದಾಗ ಇದಕ್ಕೆ ಜಗ್ಗದ ನಗರಸಭೆ ಅಧಿಕಾರಿಗಳು ಪೊಲೀಸರ ಬೆಂಬಲದೊಂದಿಗೆ ಮಳಿಗೆಗಳಿಗೆ ಬೀಗ ಹಾಕಿದರು.ಇದಾದ ನಂತರ ಬಾಡಿಗೆದಾರರು ಸೇರಿಕೊಂಡು ನಗರಸಭೆ ಕಚೇರಿಗೆ ತೆರಳಿ ಮಳಿಗೆಗಳಿಗೆ ಬೀಗ ಜಡೆದಿರುವುದರ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದರು.