ಪುತ್ತೂರು: ಕೊಂಬೆಟ್ಟಿನಲ್ಲಿ ಸೋಮವಾರ ನಡೆದ ‘ಅಶೋಕ ಜನಮನ ೨೦೨೫’ ಕಾರ್ಯಕ್ರಮಕ್ಕೆ ಬಂದು ಸಭಾಂಗಣದಲ್ಲಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರ ಬಿಲ್‌ನ್ನು ಶಾಸಕ ಅಶೋಕ್ ರೈ ಭರಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಇಬ್ಬರು ವ್ಯಕ್ತಿಗಳ ಆಸ್ಪತ್ರೆ ಚಿಕಿತ್ಸಾ ಖರ್ಚು ವೆಚ್ಚವನ್ನೂ ಭರಿಸಲಾಗಿದೆ. ಕಾರ್ಯಕ್ರಮದಲ್ಲಿ ನಿರೀಕ್ಷೆಗಿಂತ ಮೀರಿ ಜನ ಆಗಮಿಸಿದ ಕಾರಣ ಜನ ಸಂದಣಿಯ ನಡುವೆ ಸಿಲುಕಿ ಹಲವು ಮಂದಿ ಅಸ್ವಸ್ಥರಾಗಿದ್ದರು. ಈ ಪೈಕಿ ಕೆಲವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸೋಮವಾರ ರಾತ್ರಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲರನ್ನೂ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಕಾನೂನು ಕ್ರಮಕ್ಕೆ ಮಾಜಿ ಶಾಸಕ ಆಗ್ರಹ:ಮುಖ್ಯಮಂತ್ರಿಗಳೇ ಭಾಗವಹಿಸಿದ ಪುತ್ತೂರಿನ ಕಾರ್ಯಕ್ರಮವೊಂದರಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯ ವಹಿಸಿದ ಪರಿಣಾಮ ೧೩ ಮಂದಿ ಆಸ್ಪತ್ರೆ ಸೇರಿದ ಘಟನೆ ನಡೆದಿದ್ದು, ಸರ್ಕಾರ, ಗೃಹ ಇಲಾಖೆ, ಜಿಲ್ಲಾಡಳಿತ, ಕಾರ್ಯಕ್ರಮ ಸಂಯೋಜಿಸಿದ ಟ್ರಸ್ಟ್ ನ ವೈಫಲ್ಯದಿಂದ ಈ ಘಟನೆ ನಡೆದಿದೆ. ನಿಯಮ ಉಲ್ಲಂಘನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಆಯೋಜನೆಗೊಂಡ ಕೊಂಬೆಟ್ಟು ಕ್ರೀಡಾಂಗಣವು ಯುವಜನ ಸೇವಾ ಕ್ರೀಡಾ ಇಲಾಖೆಗೆ ಸೇರಿದ್ದು, ನಾನು ಶಾಸಕನಾಗಿರುವಾಗ ಆ ಕ್ರೀಡಾಂಗಣ ಕ್ರೀಡೆಗೆ ಮಾತ್ರ ಬಳಕೆಯಾಗಬೇಕು ತೀರ್ಮಾನವಾಗಿ ಸರ್ಕಾರದ ಉದ್ದೇಶವಾಗಿತ್ತು. ಅದನ್ನು ಟ್ರಸ್ಟ್ ಗೆ ವೈಯಕ್ತಿಕ ಕಾರ್ಯಕ್ರಮಕ್ಕೆ ಕೊಡುವ ಸಂದರ್ಭದಲ್ಲಿ ಯಾವ ಕಂಡೀಶನ್ ಎಂಬದು ಬಹಿರಂಗಪಡಿಸಬೇಕು ಎಂದಿದ್ದಾರೆ.
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಮತ್ತಿತರರಿದ್ದರು.