ಕಲಾಂ ಸಂಸ್ಥೆಯ ಆದೇಶದಲ್ಲಿನ ಸಹಿ ನನ್ನದಲ್ಲ!

KannadaprabhaNewsNetwork | Published : Mar 9, 2025 1:49 AM

ಸಾರಾಂಶ

ಕೊಳ್ಳೇಗಾಲದ ಕಲಾಂ ಫೌಂಡೇಷನ್ ಸಂಸ್ಥೆಗೆ ಜುಲೈ ತಿಂಗಳಲ್ಲಿ ಅನುಮತಿ ನೀಡಿರುವ ಪತ್ರ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಇಲ್ಲಿನ ಅಬ್ದುಲ್ ಕಲಾಂ ಫೌಂಡೇಷನ್‌ಗೆ ಗಣಕಯಂತ್ರ, ಯೋಗ ತರಬೇತಿ ಶಿಕ್ಷಕರನ್ನು ನೇಮಿಸಿಕೊಳ್ಳಲು ನಾನು ಯಾವುದೆ ಆದೇಶ ನೀಡಿಲ್ಲ. ಆದೇಶದಲ್ಲಿರುವ ಸಹಿ ನನ್ನದಲ್ಲ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಸಮ್ಮುಖದಲ್ಲಿ ನಡೆದ ವಿಚಾರಣೆ ವೇಳೆ ಚಾ.ನಗರ ಡಿಡಿಪಿಐ ರಾಮಚಂದ್ರರಾಜೇ ಅರಸ್ ಉಲ್ಟಾ ಹೊಡೆದಿರುವ ಘಟನೆ ಬೆಳಕಿಗೆ ಬಂದಿದೆ.ಕೊಳ್ಳೇಗಾಲ ಪಟ್ಟಣದ ಶ್ರೀನಿವಾಸ ಟಾಕೀಸ್ ರಸ್ತೆಯಲ್ಲಿರುವ ಕಲಾಂ ಸಂಸ್ಥೆಗೆ ಗಣಕಯಂತ್ರ, ಯೋಗ ತರಬೇತಿ ಶಿಕ್ಷಕರನ್ನು ಸರ್ಕಾರಿ ಶಾಲೆಗೆ

ಉಚಿತವಾಗಿ ನೇಮಿಸಿಕೊಳ್ಳುವ ಸಂಬಂಧ ಸಂಸ್ಥೆ ಸಲ್ಲಿಸಿದ ಮನವಿಗೆ (ಅರ್ಜಿಗೆ) ಮನ್ನಣೆ ನೀಡಿ ಪರಿಶೀಲಿಸಿದ ಡಿಡಿಪಿಐ ಅವರು ಈ ಆದೇಶ 1 ವರುಷದ ಅವಧಿಗೆ ಅನ್ವಯ, ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೇಮಕಗೊಂಡವರು ಕರ್ತವ್ಯ ನಿರ್ವಹಿಸಬೇಕು, ನೇಮಕಗೊಂಡವರು ಮಕ್ಕಳಿಂದ ಶುಲ್ಕ ಪಡೆಯುವಂತಿಲ್ಲ, ನೇಮಕಗೊಂಡವರು ಡಿಡಿಪಿಐ ಅವರಿಂದ ಅನುಮೋಮದನೆ ಪಡೆಯಬೇಕು ಎಂಬಿತ್ಯಾದಿ 12ಷರತ್ತುಗಳನ್ನು ವಿಧಿಸಿ ಜು. 29ರ 2024ರಂದು ಅನುಮತಿ ನೀಡಿದ್ದರು. ಕಲಾಂ ಫೌಂಡೇಷನ್ ಸಹಾ ಜು.29ರಂದೇ ಅರ್ಜಿ ಸಲ್ಲಿಸಿತ್ತು. ಅದೇ ದಿನವೇ ಅನುಮತಿ ನೀಡಿರುವುದು ಗಮನಿಸಬೇಕಾದ ಅಂಶವಾಗಿದೆ. ಆದರೆ ಈ ಸಂಬಂಧ ಫೆ.28ರಂದು ಮಧ್ಯಾಹ್ನ ಜಂಟಿ ನಿರ್ದೇಶಕರ ವಿಚಾರಣೆ ಸಂದರ್ಭದಲ್ಲಿ ಅನುಮತಿ ನೀಡಿದವರೆ ಸಹಿ ನನ್ನದಲ್ಲ ಎಂದು ಹೇಳಿಕೆ ನೀಡಿರುವುದು ಸಾಕಷ್ಟು ಸಂಶಯಗಳಿಗೆ ಕಾರಣವಾಗಿದೆ.ಹೇಳಿಕೆ ಸಾರಾಂಶವಿಷ್ಟು?:

ಫೆ.28ರ ಮಧ್ಯಾಹ್ನದ ವಿಚಾರಣೆ ವೇಳೆ ಕಲಾಂ ಫೌಂಡೇಷನ್‌ಗೆ ಅನುಮತಿ ನೇಮಕಾತಿಯಲ್ಲಿ ಲೋಪ, ಅವ್ಯವಹಾರ, ನಿಯಮ ಉಲ್ಲಂಘನೆಯಾಗಿದೆ ಎಂದು ಡಿಡಿಪಿಐ ವಿರುದ್ಧ ನಿರಂಜನ್ ಮೂರ್ತಿ ಎಂಬವರು ಶಿಕ್ಷಣ ಇಲಾಖೆ ಆಯುಕ್ತರು, ಸಚಿವರಿಗೆ ದೂರು ನೀಡಿದ ಹಿನ್ನೆಲೆ ಈ ಸಂಬಂಧ ವಿಚಾರಣೆ ನಡೆಯುತ್ತಿದ್ದು ಫೆ.28ರ ವಿಚಾರಣೆಯಲ್ಲಿಯೇ ಸಹಿ ನನ್ನದಲ್ಲ, ನಾನು ಯಾವುದೆ ಆದೇಶ ಮಾಡಿಲ್ಲ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕೆಲ ಮುಖ್ಯಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಒಗ್ಗೂಡಿ ಗಣಕಯಂತ್ರ ಮತ್ತು ಯೋಗ ತರಬೇತಿಗೆ ನೇಮಿಸಿಕೊಂಡಿದ್ದಾರೆ. ಇದಕ್ಕೂ ನನಗೂ ಸಂಬಂಧವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ವೇಳೆ ದೂರುದಾರರು ಡಿಡಿಪಿಐ ಅವರೇ ಆದೇಶ ನೀಡಿದ್ದಾರೆ, ಸಹಿ ಅವರದ್ದೆ, ಈಗ ತಪ್ಪಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಜಂಟಿ ನಿರ್ದೇಶಕರ ಮುಂದೆ ಹೇಳುವ ಜೊತೆಗೆ ಆದೇಶ ಪ್ರತಿ, ಇವರ ಆದೇಶ ಪ್ರತಿ ಆಧರಿಸಿ ಜಿಲ್ಲೆಯ ಎಲ್ಲಾ ಬಿಇಒಗಳು ಫಲಾನುಭವಿ (ಗಣಕಯಂತ್ರ, ಯೋಗ) ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ ಎಂದು ವಿವರಣೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಒಂದು ವೇಳೆ ಡಿಡಿಪಿಐ ತಮ್ಮ ಹೇಳಿಕೆಯನ್ನು ಪುನಃ ಸಮರ್ಥಿಸಿಕೊಂಡರೆ ಹಲವು ಬಿಇಒಗಳು ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆ ದಟ್ಟವಾಗಿದೆ. ಆ ಹಿನ್ನೆಲೆ ಸಂಬಂಧಿಸಿದ ಬಿಇಒಗಳು ಅವರ ವಿರುದ್ಧವೇ ಹೇಳಿಕೆ ನೀಡಿ ತಿರುಗಿ ಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಆದೇಶದ ವಿರುದ್ಧವೇ ಆದೇಶ, ಕ್ರಮಕೈಗೊಳ್ಳದ ಜಿಲ್ಲಾಡಳಿತ.!

ಡಿಡಿಪಿಐ ಜುಲೈ ತಿಂಗಳು ಹೊರಡಿಸಿದ ಆದೇಶದಲ್ಲಿ ಗಣಕಯಂತ್ರ, ಯೋಗ ತರಬೇತಿ ಶಿಕ್ಷಕರ ನೇಮಕಾತಿಗೆ ಆದೇಶವಿದೆ. ಆದರೆ ಆದೇಶ ಉಲ್ಲಂಘಿಸಿ ಹನೂರು ಶೈಕ್ಷಣಿಕ ವಲಯದಲ್ಲಿ ಅನಧಿಕೃತವಾಗಿ ಹಲವು ಅಟೆಂಡರ್‌ಗಳನ್ನು ನೇಮಿಸಿಕೊಂಡಿರುವುದು ಬಿಇಒ ಅವರ ಆದೇಶದಿಂದಲೇ ಬೆಳಕಿಗೆ ಬಂದಿದೆ. ಡಿಡಿಪಿಐ ಆದೇಶದಲ್ಲಿ ಅಟೆಂಡರ್ ನೇಮಕಾತಿಗೆ ಸೂಚಿಸಿಲ್ಲ, ಹಾಗಾಗಿ ಸಂಬಂಧಿಸಿದ ಮುಖ್ಯ ಶಿಕ್ಷಕರು ಕೂಡಲೆ ಅಟೆಂಡರ್‌ಗಳನ್ನು ಬಿಡುಗಡೆಗೊಳಿಸಿ ಎಂದು ಗುರುಲಿಂಗಯ್ಯ ಅವರು ಆ.29ರಲ್ಲಿ ಆದೇಶ ಹೊರಡಿಸಿದ್ದಾರೆ. ಡಿಡಿಪಿಐ ಅಟೆಂಡರ್ ನೇಮಕ್ಕೆ ಸೂಚಿಸದಿದ್ದರೂ ನಿಯಮ ಮೀರಿ ನೇಮಕ, ಮತ್ತು ನಿಯಮ ಮೀರಿ ಆದೇಶ ಹೊರಡಿಸಿ ವಿವಾದಕ್ಕೀಡಾಗಿದ್ದರೂ ಈ ಸಂಬಂಧ ಜಿಲ್ಲಾಡಳಿತ, ಜಿಪಂ ಮತ್ತು ಶಿಕ್ಷಣ ಇಲಾಖೆ ಮೌನ ವಹಿಸಿರುವುದು ನಾನಾ ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಿದೆ.

ಡಿಡಿಪಿಐ ಅವರೇ ಯೋಗ, ಗಣಕಯಂತ್ರ ತರಬೇತಿಗೆ ಫಲಾನುಭವಿ ಶಿಕ್ಷಕರ ನೇಮಕಕ್ಕೆ ಜುಲೈ ತಿಂಗಳಲ್ಲಿ ಆದೇಶ ನೀಡಿದ್ದಾರೆ. ಆದೇಶ ನೀಡುವ ವೇಳೆ ಸರ್ಕಾರ ಮತ್ತು ಸಂಬಂಧಿಸಿದ ಆಯುಕ್ತರು, ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯದೆ ನಿಯಮ ಉಲ್ಲಂಘಿಸಿ ಅನುಮತಿ ನೀಡಿದ್ದು ತಮಗೆ ತೊಂದರೆ ಆಗುತ್ತೆ ಎಂಬ ಕಾರಣಕ್ಕೆ ಜಂಟಿ ನಿರ್ದೇಶಕರ ಮುಂದೆ ವಿಚಾರಣೆ ವೇಳೆ ಆದೇಶ ನೀಡಿಲ್ಲ, ಸಹಿ ನನ್ನದಲ್ಲ ಅನ್ನುತ್ತಿದ್ದಾರೆ. ಈ ಸಂಬಂಧಿಸಿದ ದಾಖಲೆಯನ್ನು ಈಗಾಗಲೇ ಸಲ್ಲಿಸಿರುವೆ.

-ನಿರಂಜನ್ ಮೂರ್ತಿ, ದೂರುದಾರ

Share this article