ಹಾವು ಕಚ್ಚಿ ಸತ್ತಿಲ್ಲ, ಶಾಕ್‌ ಕೊಟ್ಟ ಕೊಂದಿದ್ದು!

KannadaprabhaNewsNetwork |  
Published : Nov 17, 2024, 01:16 AM IST
ಕೊಲೆ ಕೇಸ್‌ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಆರು ತಿಂಗಳ ಹಿಂದೆ 10 ವರ್ಷದ ಬಾಲಕಿ ಹಾವು ಕಚ್ಚಿ ಸತ್ತಿದ್ದಾಳೆ ಎಂದು ತಿಳಿದಿದ್ದ ಕುಟುಂಬಕ್ಕೆ, ಬಾಲಕಿಗೆ ಕರೆಂಟ್‌ ಶಾಕ್‌ ಕೊಟ್ಟು ಹತ್ಯೆ ಮಾಡಿರುವ ಆಘಾತಕಾರಿ ನೈಜ ಸಂಗತಿ ಈಗ ಬಹಿರಂಗಗೊಂಡಿದೆ. ಬಾಲಕಿಯನ್ನು ಹತ್ಯೆ ಮಾಡಿದ ಆರೋಪಿಗಳೇ ಆಕೆಯ ತಾಯಿಗೆ ವಿಷವುಣಿಸಿ ಹತ್ಯೆ ಮಾಡಲು ಯತ್ನಿಸಿದಾಗ, ಅವರೇ ಈ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಬಾಲಕಿ ತಾಯಿ ನೀಡಿದ ದೂರಿನ ಆಧಾರದ ಮೇಲಿಂದ ಅಂತ್ಯಕ್ರಿಯೆ ನಡೆಸಿದ್ದ ಬಾಲಕಿಯ ಶವವನ್ನು ಹೊರತೆಗೆದು ಈಗ ಶವ ಪರೀಕ್ಷೆ ನಡೆಸಲು ಪೊಲೀಸರು ಈಗ ಮುಂದಾಗಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಆರು ತಿಂಗಳ ಹಿಂದೆ 10 ವರ್ಷದ ಬಾಲಕಿ ಹಾವು ಕಚ್ಚಿ ಸತ್ತಿದ್ದಾಳೆ ಎಂದು ತಿಳಿದಿದ್ದ ಕುಟುಂಬಕ್ಕೆ, ಬಾಲಕಿಗೆ ಕರೆಂಟ್‌ ಶಾಕ್‌ ಕೊಟ್ಟು ಹತ್ಯೆ ಮಾಡಿರುವ ಆಘಾತಕಾರಿ ನೈಜ ಸಂಗತಿ ಈಗ ಬಹಿರಂಗಗೊಂಡಿದೆ. ಬಾಲಕಿಯನ್ನು ಹತ್ಯೆ ಮಾಡಿದ ಆರೋಪಿಗಳೇ ಆಕೆಯ ತಾಯಿಗೆ ವಿಷವುಣಿಸಿ ಹತ್ಯೆ ಮಾಡಲು ಯತ್ನಿಸಿದಾಗ, ಅವರೇ ಈ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಬಾಲಕಿ ತಾಯಿ ನೀಡಿದ ದೂರಿನ ಆಧಾರದ ಮೇಲಿಂದ ಅಂತ್ಯಕ್ರಿಯೆ ನಡೆಸಿದ್ದ ಬಾಲಕಿಯ ಶವವನ್ನು ಹೊರತೆಗೆದು ಈಗ ಶವ ಪರೀಕ್ಷೆ ನಡೆಸಲು ಪೊಲೀಸರು ಈಗ ಮುಂದಾಗಿದ್ದಾರೆ.

ಈ ಘಟನೆ ನಡೆದಿರುವುದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ. 2024 ಮೇ 12ರ ರಾತ್ರಿ ಸಫ್ರೀನಾ ಸಲೀಂ ಒಂಟಿ (10) ಎಂಬ ಬಾಲಕಿ ಅಸುನೀಗಿದ್ದಳು. ಬಾಲಕಿಯ ತಾಯಿ ಶಬಾನಾಳಿಗೆ ಆರೋಪಿಗಳು 2024 ಜು.5ರಂದು ವಿಷವುಣಿಸಿ ಹತ್ಯೆ ಮಾಡಲು ಯತ್ನಿಸಿದ್ದಾರೆ. ಆಗ ಆರೋಪಿಗಳು ಶಬಾನಾ ವಿಷ ಸೇವಿಸಿದ್ದರಿಂದ ಸಾಯುತ್ತಾಳೆ ಎಂದುಕೊಂಡು ಸಫ್ರೀನಾಗೆ (ಮೃತ ಬಾಲಕಿ) ನಾವೇ ಕರೆಂಟ್ ಶಾಕ್ ಕೊಟ್ಟು ಸಾಯಿಸಿದ್ದೇವೆ ಎಂಬ ಸತ್ಯವನ್ನು ಹೇಳಿದ್ದಾರೆ.

ಗಂಡನಿಗೆ ವಿಷಯ ತಿಳಿಸಿದ್ದ ಶಬಾನಾ:

ಪತ್ನಿಗೆ ವಿಷ ಉಣಿಸಿರುವ ಸುದ್ದಿ ತಿಳಿದು ಮನೆಗೆ ಬಂದ ಪತಿ ಸಲೀಂನಿಗೆ ತಾನು ನೋವಿನಲ್ಲಿದ್ದರೂ, ಪುತ್ರಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ವಿಚಾರವನ್ನು ಹೇಳಿದ್ದಾಳೆ. ಆಗ ಸಲೀಂ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಪತ್ನಿ ಶಬಾನಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಅದೃಷ್ಟವಶಾತ್‌ ಚಿಕಿತ್ಸೆಗೆ ಸ್ಪಂದಿಸಿರುವ ಶಬಾನಾ ಬದುಕುಳಿದಿದ್ದಾಳೆ. ಹೀಗಾಗಿ ಶಬಾನಾಗೆ ವಿಷ ಕುಡಿಸಿ ಹತ್ಯೆಗೆ ಯತ್ನ ಹಾಗೂ ಮಗಳು ಸಫ್ರೀನಾಗೆ ವಿದ್ಯುತ್ ಶಾಕ್‌ ನೀಡಿ ಹತ್ಯೆ ಮಾಡಿರುವ ಕುರಿತು 2024, ಆಗಸ್ಟ್ 13ರಂದು ಚಡಚಣ ಠಾಣೆಯಲ್ಲಿ ಶಬಾನಾ ದೂರು ದಾಖಲಿಸಿದ್ದಾರೆ.

ಈಗ, ಮಗಳನ್ನು ಕೊಲೆ ಮಾಡಿರುವ ಬಗ್ಗೆ ಆರೋಪಿಗಳೇ ಸತ್ಯಾಂಶ ಹೇಳಿದ್ದರಿಂದ ಶಬಾನಾ ನೀಡಿರುವ ದೂರಿನ ಆಧಾರದ ಮೇಲೆ ದೂರು ದಾಖಲಿಸಿಕೊಂಡಿರುವ ಚಡಚಣ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಫ್ರೀನಾಳನ್ನು ಹೂತಿದ್ದ ಖಬರಸ್ತಾನನಿಂದ ನ.9ರಂದು ಹೆಚ್ಚುವರಿ ಎಸ್‌ಪಿ ಶಂಕರ ಮಾರಿಹಾಳ ಹಾಗೂ ಇಂಡಿ ಎಸಿ ಅಬೀದ್ ಗದ್ಯಾಳ ಸಮ್ಮುಖದಲ್ಲಿ ಬಾಲಕಿಯ ಶವ ಹೊರತೆಗೆದು ಶವಪರೀಕ್ಷೆ ನಡೆಸಿದ್ದಾರೆ. ಈಗ ಅದರ ವರದಿ ಬರಬೇಕಿದೆ.

ಇತ್ತ ಬಾಲಕಿ ಸಫ್ರೀನಾ ಕೊಲೆ ಹಾಗೂ ಶಬಾನಾಳ ಕೊಲೆ ಯತ್ನದ ದೂರು ದಾಖಲಾಗುತ್ತಿದ್ದಂತೆ ಆರೋಪಿಗಳಾದ ರಜಾಕಮಾ ಹಾಗೂ ಆಕೆಯ ಮಗ ಮಹಮ್ಮದ ಒಂಟಿ ಕುಟುಂಬ ಸಮೇತ ಪರಾರಿಯಾಗಿದ್ದಾರೆ.

ಏನು ಘಟನೆ ನಡೆದಿತ್ತು?:

ಚಡಚಣ ತಾಲೂಕಿನ ಬರಡೋಲದಲ್ಲಿ ಸಲೀಂ ಒಂಟಿ ಎಂಬಾತ ತನ್ನ ಕುಟುಂಬದೊಂದಿಗೆ ತೋಟದ ಮನೆಯಲ್ಲಿ ವಾಸಿಸುತ್ತಿದ್ದ. ಇವರ ಸಂಬಂಧಿ ಪಕ್ಕದ ತೋಟದಲ್ಲಿದ್ದ ರಜಾಕಮಾ ಹಾಗೂ ಆಕೆಯ ಮಗ ಮಹಮ್ಮದ ಒಂಟಿ ಮಧ್ಯೆ ಸಣ್ಣಪುಟ್ಟ ವಿಚಾರಕ್ಕಾಗಿ ಜಗಳ ಆಗುತ್ತಿದ್ದವು. ಇದನ್ನೇ ಮನಸಿನಲ್ಲಿಟ್ಟುಕೊಂಡಿದ್ದ ರಜಾಕಮಾ ಹಾಗೂ ಆಕೆಯ ಮಗ ಮಹಮ್ಮದ ಒಂಟಿ ಇವರ ಕುಟುಂಬವನ್ನೇ ಸರ್ವನಾಶ ಮಾಡಲು ಮುಂದಾಗಿದ್ದರು. ಅದರಂತೆ, 2024 ಜು.5ರಂದು ಬೆಳಗ್ಗೆ 10.30ರ ಸುಮಾರಿಗೆ ಸಲೀಂ ಪತ್ನಿ ಶಬಾನಾ ಮನೆಯ ಶೆಡ್‌ ಬಳಿ ನಿಂತಿದ್ದಾಗ ಏಕಾಏಕಿ ನುಗ್ಗಿ ಆಕೆಯನ್ನು ಶೆಡ್‌ಗೆ ಹೊತ್ತೊಯ್ದ ಬಲವಂತವಾಗಿ ವಿಷಪ್ರಾಸನ ಮಾಡಿಸಿದ್ದಾರೆ.

ಬಳಿಕ, ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಶೆಡ್‌ನ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದರು. ಕೆಲ ನಿಮಿಷಗಳ ಬಳಿಕ ಶಬಾನಾ ಅವರ ಅತ್ತೆ ಬಂದು ಶೆಡ್ ಬಾಗಿಲು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಲೀಂ ಅವರ ಪುತ್ರಿ ಸಫ್ರೀನಾ ಮನೆಯಲ್ಲಿ ಮಲಗಿದ್ದಾಗ 2024 ಮೇ 12ರ ರಾತ್ರಿ ಶಂಕಾಸ್ಪದವಾಗಿ ಮೃತಪಟ್ಟಿದ್ದಳು. ಮನೆಯವರೆಲ್ಲ ಆಕೆ ಹಾವುಕಚ್ಚಿ ಸತ್ತಿದ್ದಾಳೆ ಎಂದು ತಿಳಿದು ಅಂತ್ಯಸಂಸ್ಕಾರ ಮಾಡಿದ್ದರು. ಆದರೆ, ಸಫ್ರೀನಾ ತಾಯಿ ಶಬಾನಾಳನ್ನು ಕೊಲ್ಲಲು ಬಂದಿದ್ದ ವೇಳೆಯೇ ರಜಾಕಮಾ ಹಾಗೂ ಮಹಮ್ಮದ ಇಬ್ಬರೂ ಸಫ್ರೀನಾಗೆ ನಾವೇ ಕರೆಂಟ್ ಶಾಕ್ ಕೊಟ್ಟು ಸಾಯಿಸಿದ್ದೇವೆ ಎಂದು ಬಾಯ್ಬಿಟ್ಟಿದ್ದಾರೆ. ಮಾತ್ರವಲ್ಲ, ನಿಮ್ಮ ಇಡೀ ಕುಟುಂಬವನ್ನೇ ಕೊಲ್ಲಬೇಕೆಂದು ನೀವು ಮಲಗಿದ್ದ ತಗಡಿನ ಶೆಡ್‌ಗೆ ವಿದ್ಯುತ್‌ ಸಂಪರ್ಕ ಕೊಟ್ಟಿದ್ದೆವು. ಆದರೆ, ಅದು ಕೇವಲ ಸಫ್ರೀನಾಗೆ ತಗುಲಿ ಆಕೆ ಸತ್ತಿದ್ದಾಳೆ. ಆದ್ದರಿಂದಲೇ ನಾವು ನಿನಗೆ ವಿಷ ಕುಡಿಸಿ ಸಾಯಿಸುತ್ತಿದ್ದೇವೆ. ಮುಂದೆ ನಿನ್ನ ಗಂಡ ಹಾಗೂ ಇನ್ನುಳಿದ ಮಕ್ಕಳನ್ನೂ ಸಾಯಿಸುತ್ತೇವೆ ಎಂದು ಹೇಳಿದ್ದರು.

-----------------

ಕೋಟ್....

ಹೊಲದ ಬದುವಿನ ವಿಚಾರಕ್ಕಾಗಿ ಶುರುವಾದ ಜಗಳದ ಹಿನ್ನೆಲೆ ನಮ್ಮ ದೊಡ್ಡಪ್ಪನ ಪತ್ನಿ ರಜಾಕಮಾ ಹಾಗೂ ಆಕೆಯ ಮಗ ಮಹಮ್ಮದ ಸೇರಿ ನನ್ನ ಮಗಳ ಕೊಲೆ ಮಾಡಿದ್ದಾರೆ. ನಂತರ ಒಂದೂವರೆ ತಿಂಗಳ ಬಳಿಕ ತೋಟದ ಮನೆಗೆ ನುಗ್ಗಿ ಪತ್ನಿ ಶಬಾನಾಳಿಗೆ ಬಲವಂತವಾಗಿ ವಿಷ ಹಾಕಿದ್ದಾರೆ. ಇವರಿಂದ ನಮ್ಮ ಇಡೀ ಕುಟುಂಬಕ್ಕೆ ಜೀವಭಯವಿದ್ದು, ಸೂಕ್ತ ರಕ್ಷಣೆ ಬೇಕಾಗಿದೆ. ನಮ್ಮ ಮಗಳನ್ನು ಕೊಂದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಇದರ ಹಿಂದೆ ಯಾರ ಕೈವಾಡವಿದಿಯೋ ಅದು ಹೊರಬರಬೇಕು, ಅವರಿಗೂ ತಕ್ಕ ಶಿಕ್ಷೆ ಆಗಬೇಕು.

- ಸಲೀಂ ಒಂಟಿ, ಸಫ್ರೀನಾ ತಂದೆ--------

ಆರು ತಿಂಗಳ ಹಿಂದೆ ಬಾಲಕಿಯೊಬ್ಬಳು ಅನುಮಾನಾಸ್ಪದ ಮೃತಪಟ್ಟಿರುವ ಹಾಗೂ ಆಕೆಯ ತಾಯಿಗೆ ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ ಕುರಿತು ಚಡಚಣ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನಾಧಾರದ ಮೇಲೆ ಬಾಲಕಿಯ ಮೃತ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬರಬೇಕಿದೆ. ಎರಡೂ ಘಟನೆಗಳ ಕುರಿತು ತನಿಖೆ ನಡೆಸುತ್ತಿದ್ದು, ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

- ಪ್ರಸನ್ನ ದೇಸಾಯಿ, ವಿಜಯಪುರ ಎಸ್‌ಪಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ನಶಿಸುತ್ತಿರುವ ಚಿತ್ರಕಲೆ ಉಳಿಸಿ ಬೆಳೆಸಿ