ದಾಬಸ್‌ಪೇಟೆ: ಅಳಿಯನೊಬ್ಬ ಹೆಣ್ಣು ಕೊಟ್ಟ ಮಾವನನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೋಂಪುರ ಹೋಬಳಿಯ ಶಿವಗಂಗೆ ಬೆಟ್ಟದ ಬಳಿಯಿರುವ ಮೈಥೀಲೇಶ್ವರ ದೇವಾಲಯದ ಆವರಣದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ಪಟ್ಟಣದ ಸಂಜೀವಿನಿ ನಗರದ ನಿವಾಸಿ ರಂಗಶಾಮಯ್ಯ(64) ಕೊಲೆಯಾದ ದುರ್ದೈವಿ. ಈತನ ಅಳಿಯ ಕುಮಾರ್ (43) ಕೊಲೆ ಮಾಡಿದ ಆರೋಪಿ. ತುಮಕೂರು ಜಿಲ್ಲೆಯ ಗಂಗಸಂದ್ರದ ಈತ ಕ್ಯಾತ್ಸಂದ್ರ ಬಳಿ ಕಲ್ಲಳ್ಳಿ ಕ್ರಾಸ್‌ನಲ್ಲಿ ನೆಲೆಸಿದ್ದರು. ಕೊಲೆಯಾದ ರಂಗಶಾಮಯ್ಯ ಕಳೆದ ಎರಡು ವರ್ಷಗಳಿಂದ ಮೈಥೀಲೇಶ್ವರ ದೇವಾಲಯದಲ್ಲಿರುವ ಮನೆಯಲ್ಲಿ ವಾಸವಿದ್ದು, ದೇವರಿಗೆ ಪೂಜೆ ಮಾಡಿಕೊಂಡು ಜೀವಿಸುತ್ತಿದ್ದರು. ಘಟನೆ ಹಿನ್ನೆಲೆ: ಕೊಲೆಯಾದ ರಂಗಶಾಮಯ್ಯ ತೋಟಗಾರಿಕೆ ಇಲಾಖೆಯಲ್ಲಿ ಚಾಲಕನಾಗಿ ಎರಡು ವರ್ಷದ ಹಿಂದೆ ನಿವೃತ್ತಿಯಾಗಿದ್ದರು, ಇವರಿಗೆ ಮೂರುಜನ ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಇದ್ದಾರೆ. ಹಿರಿ ಮಗಳು ಮಹಾಲಕ್ಷ್ಮಿಗೆ ತನ್ನ ಹೆಂಡತಿ ತಮ್ಮ ಕುಮಾರನಿಗೆ 18 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ಮಹಾಲಕ್ಷ್ಮಿ ಹಾಗೂ ಕುಮಾರ್ ನಡುವೆ ಹಣದ ವಿಷಯವಾಗಿ ಜಗಳವಾಗಿ ಮಹಾಲಕ್ಷ್ಮಿ ಏಳೆಂಟು ವರ್ಷಗಳಿಂದ ಬೇರೆ ನೆಲೆಸಿದ್ದಳು. ಅಲ್ಲಿಗೂ ಹೋಗಿ ಹಣಕ್ಕಾಗಿ ಕುಮಾರ್ ಹೆಂಡತಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದನು. ಹೀಗಾಗಿ ಮಹಾಲಕ್ಷ್ಮಿ ಮೂರು ತಿಂಗಳಿಂದ ತನ್ನ ತಂದೆ ಜತೆ ಶಿವಗಂಗೆ ಬೆಟ್ಟದ ಬಳಿಯ ಮೈಥೀಲೇಶ್ವರ ದೇವಾಲಯದ ಮನೆಯಲ್ಲಿಯೇ ನೆಲೆಸಿದ್ದರು. ಬೆಳಿಗ್ಗೆ ಗಲಾಟೆ ಸಂಜೆ ಕೊಲೆ: ಅ.9ರಂದು ಹೆಂಡತಿ ಇದ್ದ ಮನೆಗೆ ಹೋಗಿ ನಿಮ್ಮ ಮಗಳನ್ನು ಕೊಲೆ ಮಾಡುತ್ತೇನೆಂದು ಮಾವ ರಂಗಶಾಯಮ್ಯನ ಬಳಿ ಗಲಾಟೆ ಮಾಡಿದ್ದನು. ಕೂಡಲೇ ಮಗಳಿಗೆ ಪೋನ್ ಮಾಡಿ ನಿನ್ನ ಗಂಡ ನಿನ್ನನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾನೆ. ನೀನು ಹೊರ ಬಾರದೇ ಮನೆಯಲ್ಲೇ ಇರು ನಾನು ಸಂಜೆಯೊಳಗೆ ಬರುತ್ತೇನೆ ಎಂದು ಹೇಳಿದ್ದರು. ಸಂಜೆ ದೇವಾಲಯದ ಮನೆಗೆ ಬಂದ ರಂಗಶಾಮಯ್ಯ ಮಗಳಿಗೆ ಎಲ್ಲಾ ವಿಷಯ ಹೇಳಿ ಸಂಜೆ ದೇವಾಲಯದ ಆವರಣಕ್ಕೆ ಬಂದಾಗ ಅಳಿಯ ಕುಮಾರ್ ರಂಗಶಾಮಯ್ಯನವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಹೋಗಿದ್ದಾನೆ. ತೀವ್ರ ಹಲ್ಲೆಗೊಳಗಾದ ರಂಗಶಾಮಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮದ ವ್ಯಕ್ತಿಯೊಬ್ಬರು ದೇವಾಲಯದ ಆವರಣಕ್ಕೆ ಬಂದು ನೋಡಿದಾಗ ರಂಗಶಾಮಯ್ಯ ಕೊಲೆಯಾಗಿರುವುದ್ದನ್ನು ಮಗಳಿಗೆ ತಿಳಿಸಿದ್ದಾರೆ. ಮಗಳು ದಾಬಸ್‌ಪೇಟೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಇನ್ ಪೆಕ್ಟರ್ ರವಿ ಮತ್ತು ಸಿಬ್ಬಂದಿ ಭೇಟಿ ರಂಗಶಾಮಯ್ಯ ಮೃತದೇಹವನ್ನು ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಡಿವೈಎಸ್‌ಪಿ ಜಗದೀಶ್ ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದು ಕೊಲೆ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಪೋಟೋ 1 : ಕೊಲೆಯಾದ ರಂಗಶಾಮಯ್ಯ