ಮಂಗಳೂರು : ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಬಂಕಿಮಚಂದ್ರ ಚಟರ್ಜಿ ಅವರ ‘ವಂದೇ ಮಾತರಂ’ ಗೀತೆ ಬ್ರಿಟಿಷರ ದುರಾಡಳಿತದ ವಿರುದ್ಧ ಭಾರತೀಯರನ್ನು ಒಟ್ಟುಗೂಡಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನಲೆ ಬರೆದಿತ್ತು ಎಂದು ಆರ್‌ಎಸ್‌ಎಸ್ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಹೇಳಿದರು.
ಬಂಕಿಮಚಂದ್ರ ಅವರ ವಂದೇ ಮಾತರಂ ಗೀತೆ ಅವರ ನಿಧನದ ಬಳಿಕ ದೇಶದಲ್ಲಿ ಹೆಚ್ಚಿನ ರೀತಿಯಲ್ಲಿ ಸಂಚಲನ ಮೂಡಿಸಿತು. ಬ್ರಿಟಿಷರ ಬಂಗಾಳದಲ್ಲಿನ ಒಡೆದು ಆಳುವ ನೀತಿಯ ವಿರುದ್ಧ, ವಿಭಜನೆ ಯತ್ನಕ್ಕೆ ಭಾರತೀಯರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಭಾರತೀಯರೆಲ್ಲ ಒಟ್ಟಾಗಿ ವಂಗ-ಬಂಗ ಚಳುವಳಿಗೆ ನಾಂದಿಯಾಯಿತು. ಯಾವುದೇ ಬ್ರಿಟಿಷ್ ಅಧಿಕಾರಿ ಬಂದರೂ ವಂದೇ ಮಾತರಂ ಗೀತೆ ಹೇಳಲು ಆರಂಭಿಸಿದರು. ಆಂದೋಲನ ತೀವ್ರವಾಗುತ್ತಿದ್ದಂತೆ ವಂದೇ ಮಾತರಂ ಇಡೀ ದೇಶಾದ್ಯಂತ ಸದ್ದು ಮಾಡಿತು. ಭಾರತೀಯ ಒಬ್ಬರನ್ನೊಬ್ಬರು ಭೇಟಿಯಾಗುವಾಗ ‘ವಂದೇ ಮಾತರಂ’ ಎಂದು ಹೇಳಲು ಆರಭಿಸಿದರು. ಬ್ರಿಟಿಷರ ವಿರುದ್ಧ ಭಾರತೀಯ ಹೋರಾಟ ತೀವ್ರಗೊಂಡಿತು. ಬ್ರಿಟಿಷರ ಆಡಳಿತ ಕುಸಿಯಿತು. ಕೊನೆಗೆ ಬ್ರಿಟಿಷರು ಬಂಗಾಳ ವಿಭಜನೆ ಪ್ರಸ್ತಾಪ ಹಿಂತೆಗೆದುಕೊಂಡರು. ಈ ರೀತಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ವಂದೇ ಮಾತರಂ ಗೀತೆ ಹಾಡಲು ಆರಂಭಿಸಲಾಯಿತು ಎಂದರು.
ಮಹತ್ವ ತಿಳಿಸುವಂತಾಗಬೇಕು:ಸ್ವಾತಂತ್ರ್ಯ ಹೋರಾಟದಲ್ಲಿ ವಂದೇ ಮಾತರಂ ಹಾಡಲಾಗುತ್ತಿದ್ದರೂ, 1923ರಲ್ಲಿ ಆಂದ್ರಪ್ರದೇಶದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಗೀತೆ ಹಾಡಲು ಮುಂದಾದ ವೇಳೆ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮೌಲಾನ ಮೊಹಮ್ಮದ್ ಆಲಿ, ಈ ಹಾಡು ಹಾಡೋದು ಬೇಡ ಮತೀಯ ಭಾವನೆಗಳಿಂದ ನಮಗೆ ಅದರಲ್ಲಿ ಸ್ವಲ್ಪ ಆಕ್ಷೇಪದ ಸಂಗತಿಗಳು ಇದ್ದಾವೆ ಎಂದು ಹಾಡಬೇಡಿ ಎಂದರು. ರಾಷ್ಟ್ರಕ್ಕೋಸ್ಕರ ಜನ ಸೇರಿದ್ದಾರೆ ಎಂದು ಅಂದು ಗಾಯಕರಾಗಿದ್ದ ವಿಷ್ಣುದಿಗಂಬರ ಪುಸ್ಕರರು ಹಾಡು ಹಾಡಿದರು. ಅಧ್ಯಕ್ಷ ಪೀಠದಲ್ಲಿದ್ದ ಮೊಹಮ್ಮದ್ ಆಲಿ ಸಭಾತ್ಯಾಗ ನಡೆಸಿದರು. ಬಳಿಕದ ದಿನಗಳಲ್ಲಿ ಈ ಗೀತೆಯ ಬಗ್ಗೆ ಚರ್ಚೆಗಳು ಆರಂಭಗೊಂಡಿತು. ಮುಂದೆ ಗೀತೆಗೆ ಕತ್ತರಿ ಹಾಕಲಾಯಿತು. ಇತ್ತೀಚೆಗೆ ಗೀತೆಗೆ 150 ವರ್ಷ ಆದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಗೀತೆಗೆ ಮಾನ್ಯತೆಯನ್ನೂ ನೀಡಿತ್ತು. ಆದರೂ ವಂದೇ ಮಾತರಂ ಗೀತೆಯನ್ನು ಇಂದಿನ ಯುಜನತೆಯ ಮುಂದೆ ವಿವಾದದ ರೂಪದಲ್ಲಿ ತರಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾರತ ದೇಶವನ್ನು ವರ್ಣಿಸಿದ, ದೇಶದ ಜನರನ್ನು ಬ್ರಿಟಿಷರ ವಿರುದ್ಧ ಒಟ್ಟು ಮಾಡಿದ ವಂದೇ ಮಾತರಂ ಗೀತೆಯ ಮಹತ್ವ, ಇತಿಹಾಸದ ಬಗ್ಗೆ ಜನತೆಗೆ ತಿಳಿಸುವ ಕೆಲಸ ಆಗಬೇಕಿದೆ ಎಂದರು.
ಸೂರಜ್ ಸ್ವಾಗತಿಸಿದರು.