ನಾರಾಯಣ ಹೆಗಡೆ
ವರ್ಷಾಂತ್ಯ ಬಂತೆಂದರೆ ಪಾಶ್ಚಿಮಾತ್ಯರ ಅನುಕರಣೆ ಎಲ್ಲೆ ಮೀರುವ ವಾತಾವರಣ ಸೃಷ್ಟಿಯಾಗುತ್ತದೆ. ಆದರೆ, ಹಾವೇರಿಯಲ್ಲಿ ಕಳೆದ ಕೆಲವು ದಿನಗಳಿಂದ ಆಧ್ಯಾತ್ಮಿಕತೆಯ ಕಂಪು ಪಸರಿಸಿದೆ. ಪ್ರವಚನ, ಧರ್ಮಸಭೆ, ಧಾರ್ಮಿಕ ಕಾರ್ಯಕ್ರಗಳಿಂದ ಯಾಲಕ್ಕಿ ಕಂಪಿನ ನಗರ ಕಳೆ ಕಟ್ಟಿದೆ.
ಮರಿ ಕಲ್ಯಾಣ ಖ್ಯಾತಿಯ ಹಾವೇರಿ ನಗರದಲ್ಲಿ ಈಗ ಎಲ್ಲಿ ನೋಡಿದರೂ ಅಧ್ಯಾತ್ಮ ಗುರುಗಳು, ಪ್ರವಚನಕಾರರು, ಧರ್ಮ ಗುರುಗಳ ಬ್ಯಾನರ್, ಕಟೌಟ್‌ಗಳು ರಾರಾಜಿಸುತ್ತಿವೆ. ಅದರಲ್ಲೂ ಹುಕ್ಕೇರಿ ಮಠದ ಲಿಂ.ಶಿವಬಸವ ಮತ್ತು ಶಿವಲಿಂಗ ಶ್ರೀಗಳ ಪುಣ್ಯ ಸ್ಮರಣೋತ್ಸವದ ನಿಮಿತ್ತ ಹಮ್ಮಿಕೊಂಡಿರುವ ಜಾತ್ರೆ, ಮಠದ ಶಿವಲಿಂಗೇಶ್ವರ ವಿದ್ಯಾಪೀಠದ ಸುವರ್ಣ ಮಹೋತ್ಸವ, ಕೃಷಿ ಮೇಳ, ಜಾನುವಾರು ಜಾತ್ರೆ, ಗುರುವಂತನ, ವಚನ ವಂದನ, ವಿದ್ಯಾರ್ಥಿ ವಸತಿ ನಿಲಯದ ಶಂಕುಸ್ಥಾಪನೆ, ಮಠದ ಪೀಠಾಧ್ಯಕ್ಷರಾದ ಸದಾಶಿವ ಶ್ರೀಗಳ 15ನೇ ವರ್ಷದ ಪಟ್ಟಾಧಿಕಾರದ ನೆನಪಿಗಾಗಿ ಬೆಳ್ಳಿ ತುಲಾಭಾರದ ನಿಮಿತ್ತ ಕಳೆದ 10 ದಿನಗಳಿಂದ ನಡೆಯುತ್ತಿರುವ ಆಧ್ಯಾತ್ಮಿಕ ಪ್ರವಚನ ಸೇರಿದಂತೆ ಹುಕ್ಕೇರಿಮಠದ ಕಾರ್ಯಕ್ರಮಗಳು ಗಮನ ಸೆಳೆದಿವೆ.ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿಗಳು ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಲು ತಾಲೂಕಿನಾದ್ಯಂತ ಪಾದಯಾತ್ರೆ ಕೈಗೊಂಡಿದ್ದು, ಸದ್ಯ ನಗರದಲ್ಲಿ ನಿತ್ಯವೂ ಶ್ರೀಗಳಿಂದ ಪಾದಯಾತ್ರೆ ನಡೆಯುತ್ತಿದೆ. ಜಾತ್ರಾ ಮಹೋತ್ಸವದ ನಿಮಿತ್ತ ನಿತ್ಯ ನಡೆದಿರುವ ಶೇಗುಣಸಿ ವಿರಕ್ತ ಮಠದ ಡಾ. ಮಹಾಂತ ಪ್ರಭು ಸ್ವಾಮೀಜಿಗಳ ಆಧ್ಯಾತ್ಮಿಕ ಪ್ರವಚನ ಜನರನ್ನು ಆಕರ್ಷಿಸುತ್ತಿದೆ. ಡಿ.9 ರಿಂದ ನಡೆದಿರುವ ಪ್ರವಚನ ಡಿ.30ಕ್ಕೆ ಸಂಪನ್ನಗೊಳ್ಳಲಿದೆ. ಡಿ.25ರಿಂದ 29ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಡಿ.30ರಂದು ಜಾತ್ರಾ ಮಹೋತ್ಸವ ನಡೆಯಲಿದೆ. ಈ ನಿಮಿತ್ತ ಮಠದ ಭಕ್ತಾಧಿಗಳು, ಸಂಘಟನೆಗಳು, ಜನಪ್ರತಿನಿಧಿಗಳು ಮಠದ ಜಾತ್ರೆಗೆ ಸ್ವಾಗತ ಕೋರುವ ಬ್ಯಾನರ್‌ಗಳು ನಗರದೆಲ್ಲೆಡೆ ರಾಜಾಜಿಸುತ್ತಿವೆ.
ಯುವ ಜನತೆಯನ್ನು ಕಾಡುತ್ತಿರುವ ದುಶ್ಚಟಗಳನ್ನು ಹೋಗಲಾಡಿಸುವುದು, ಅವರನ್ನು ಸನ್ಮಾರ್ಗದ ಕಡೆಗೆ ಕರೆದೊಯ್ಯುವುದಕ್ಕಾಗಿ ದುಶ್ಚಟಗಳ ಭಿಕ್ಷೆಗಾಗಿ ಜೋಳಿಗೆ ಹಿಡಿದು ತಾಲೂಕಿನಾದ್ಯಂತ ಪಾದಯಾತ್ರೆ ನಡೆಸಲಾಗಿದೆ. ವಿದ್ಯಾಪೀಠದ ಸುವರ್ಣ ಸಂಭ್ರಮ, ಲಿಂಗೈಕ್ಯ ಶ್ರೀಗಳ ಜಾತ್ರಾ ಮಹೋತ್ಸವವನ್ನು ಈ ಸಲ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. ಅದಕ್ಕಾಗಿ ಶ್ರೀಮಠದಿಂದ ಎಲ್ಲ ತಯಾರಿ ನಡೆಸಲಾಗಿದೆ. ಜನಪ್ರತಿನಿಧಿಗಳು, ಹಲವು ಮಠಾಧೀಶರು, ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.