ಪ್ರಮೋದ ಗಡಕರ
ಕುಂದಾನಗರಿ ಬೆಳಗಾವಿಯಲ್ಲಿ ದೀಪಾವಳಿ ಎಂದರೆ ಕೇವಲ ದೀಪಗಳ ಹಬ್ಬವಲ್ಲ; ಅದು ಕನ್ನಡ ಮತ್ತು ಮರಾಠಿ ಸಂಸ್ಕೃತಿಗಳ ಸಮ್ಮಿಲನದ ಸಂಭ್ರಮವೂ ಹೌದು. ಉಡುಗೆ-ತೊಡುಗೆ, ಆಹಾರ ಪದ್ಧತಿ, ಅಲಂಕಾರ, ರಂಗೋಲಿ ಹಾಗೂ ಸಂಪ್ರದಾಯಗಳಲ್ಲಿ ಎರಡೂ ಭಾಷಿಕರು ಹಬ್ಬವನ್ನು ಒಟ್ಟಾಗಿ ಆಚರಿಸುತ್ತಾರೆ. ಅದರಲ್ಲೂ ದೀಪಾವಳಿ ಸಂದರ್ಭದಲ್ಲಿ ಮಕ್ಕಳು ನಿರ್ಮಿಸುವ ಮಣ್ಣಿನ ಕೋಟೆಗಳು ಈ ಹಬ್ಬದ ವಿಶೇಷ ಆಕರ್ಷಣೆಯಾಗಿದ್ದು, ಬೆಳಗಾವಿಯ ಸಾಂಸ್ಕೃತಿಕ ವೈವಿಧ್ಯಕ್ಕೆ ಸಾಕ್ಷಿಯಾಗಿವೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಗರದ ವಿವಿಧ ಬಡಾವಣೆಗಳು, ಗಲ್ಲಿಗಳು ಹಾಗೂ ಮನೆಗಳ ಅಂಗಳಗಳಲ್ಲಿ ಪುಟಾಣಿ ಮಕ್ಕಳು ಕೋಟೆ ನಿರ್ಮಾಣದಲ್ಲಿ ತೊಡಗಿದ್ದಾರೆ. ಕಲ್ಲು, ಮಣ್ಣು, ಇಟ್ಟಿಗೆಗಳನ್ನು ಬಳಸಿ ತಮ್ಮ ಕಲ್ಪನೆಗೆ ತಕ್ಕಂತೆ ಕೋಟೆಗಳನ್ನು ರೂಪಿಸುತ್ತಿದ್ದಾರೆ. ಹಿರಿಯರು ಮಕ್ಕಳಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸಿ ಪ್ರೋತ್ಸಾಹಿಸುತ್ತಿದ್ದಾರೆ.ಕೋಟೆಯ ಸುತ್ತಲೂ ಗೋಡೆ, ಹೆಬ್ಬಾಗಿಲು, ಬುರುಜು, ಕಾವಲು ಗೋಪುರಗಳನ್ನು ನಿರ್ಮಿಸಿ, ಒಳಭಾಗದಲ್ಲಿ ಸೈನಿಕರ ಗೊಂಬೆಗಳನ್ನು ನಿಲ್ಲಿಸಿ, ಧ್ವಜಗಳನ್ನು ನೆಟ್ಟು ಅಲಂಕರಿಸುತ್ತಿದ್ದಾರೆ. ಕೆಲವು ಕೋಟೆಗಳಲ್ಲಿ ರಾಜ-ರಾಣಿಯರ ಗೊಂಬೆಗಳು, ಸೈನಿಕರ ಪ್ರತಿಕೃತಿಗಳು, ಸಣ್ಣ ಕೆರೆ, ಬಾವಿ ಹಾಗೂ ಸಿಂಹಾಸನಗಳನ್ನೂ ರೂಪಿಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಸಿಂಹಾಸನದ ಮಾದರಿಗಳನ್ನು ನಿರ್ಮಿಸಿ, ಕೋಟೆಯ ಮೇಲ್ಭಾಗದಲ್ಲಿ ಧ್ವಜ ಹಾರಿಸುವ ಮೂಲಕ ಐತಿಹಾಸಿಕ ವಾತಾವರಣ ಸೃಷ್ಟಿಸುತ್ತಾರೆ.
ಬೆಳಗಾವಿಯ ದೀಪಾವಳಿ ಕೋಟೆಗಳ ಮತ್ತೊಂದು ವಿಶೇಷವೆಂದರೆ, ಅವುಗಳಲ್ಲಿ ಕನ್ನಡ ಮತ್ತು ಮರಾಠಿ ಸಂಸ್ಕೃತಿಗಳ ಪ್ರತಿಬಿಂಬ ಸ್ಪಷ್ಟವಾಗಿ ಕಾಣಿಸುತ್ತದೆ. ಮರಾಠಿ ಭಾಷಿಕರ ಮನೆಗಳ ಮುಂದೆ ಛತ್ರಪತಿ ಶಿವಾಜಿ ಮಹಾರಾಜರ ಕೋಟೆ, ಜೀಜಾಮಾತೆಯ ಅರಮನೆಗಳ ಮಾದರಿಗಳು ನಿರ್ಮಾಣಗೊಂಡಿದ್ದರೆ, ಕನ್ನಡಿಗರ ಮನೆಗಳ ಮುಂದೆ ವೀರರಾಣಿ ಕಿತ್ತೂರು ಚನ್ನಮ್ಮನ ಕೋಟೆ ಹಾಗೂ ಪರಸಗಡ ಕೋಟೆಗಳ ಮಾದರಿಗಳು ಗಮನ ಸೆಳೆಯುತ್ತಿವೆ.
ಮಿಲಿಟರಿ ಮಹಾದೇವ ಮಂದಿರದಲ್ಲಿ ಕೋಟೆಗಳ ಲೋಕ:
ಶಾಹೂ ನಗರದ ಛತ್ರಪತಿ ಯುವಕ ಮಂಡಳದ ಸದಸ್ಯರು ಬೆಳಗಾವಿ ಕೋಟೆಯ ಮಾದರಿಯನ್ನೇ ಆಧರಿಸಿ ಬೃಹತ್ ಕೋಟೆಯನ್ನು ನಿರ್ಮಿಸಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಕಳೆದ ವರ್ಷವೂ ಇದೇ ರೀತಿಯ ಪ್ರಯತ್ನ ಮಾಡಲಾಗಿತ್ತು.
ಶಿವಾಜಿ ಇತಿಹಾಸದ ಪ್ರೇರಣೆ: ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಆಡಳಿತ ವೈಖರಿ ಹಾಗೂ ಕೋಟೆಗಳ ಇತಿಹಾಸದಿಂದ ಪ್ರೇರಿತರಾಗಿ ಈ ಸಂಪ್ರದಾಯ ಬೆಳೆದುಬಂದಿದೆ. ಶಿವಾಜಿ ಮಹಾರಾಜರ ಕಾಲದ ಕೋಟೆಗಳ ಮಾದರಿಗಳನ್ನು ನಿರ್ಮಿಸಿ ಪ್ರದರ್ಶಿಸುವ ಪದ್ಧತಿ ದೀಪಾವಳಿಯಿಂದ ತುಳಸಿ ವಿವಾಹದವರೆಗೂ ಮುಂದುವರಿಯುತ್ತದೆ.
ಗ್ರಾಮೀಣ ಭಾಗದಲ್ಲಿಯೂ ಕೋಟೆಗಳ ಸಂಭ್ರಮ: ಬೆಳಗಾವಿ ನಗರಕ್ಕೆ ಮಾತ್ರ ಸೀಮಿತವಾಗದೆ ಖಾನಾಪುರ, ಬೆಳಗಾವಿ, ಚಿಕ್ಕೋಡಿ, ರಾಯಬಾಗ, ನಿಪ್ಪಾಣಿ, ಕಾಗವಾಡ ಹಾಗೂ ಕಿತ್ತೂರು ತಾಲೂಕುಗಳ ವಿವಿಧ ಗ್ರಾಮಗಳಲ್ಲಿಯೂ ದೀಪಾವಳಿ ಸಂದರ್ಭದಲ್ಲಿ ಖಿಲ್ಲಾ ನಿರ್ಮಾಣದ ಆಚರಣೆ ಕಂಡುಬರುತ್ತದೆ. ಮನೆಗಳ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೋಟೆಗಳನ್ನು ನಿರ್ಮಿಸಿ ಪ್ರದರ್ಶಿಸುವ ಮೂಲಕ ಮಕ್ಕಳು ಹಬ್ಬದ ಸಂಭ್ರಮದಲ್ಲಿ ತೊಡಗಿದ್ದಾರೆ.