ಕುಷ್ಟಗಿ: ಭಾವೈಕ್ಯತೆಯ ಜಾತ್ರೆಗೆ ಸಾಕ್ಷಿಯಾದ ಅವಧೂತ ಶುಖಮುನಿ ಸ್ವಾಮಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವವು ಮಾ.3ರಿಂದ ಪ್ರಾರಂಭಗೊಳ್ಳುತ್ತಿದ್ದು, ಸುಮಾರು ಎಂಟು ದಿನಗಳ ಕಾಲ ಅದ್ಧೂರಿಯಾಗಿ ಶ್ರದ್ಧಾಭಕ್ತಿ, ಸಡಗರ ಸಂಭ್ರಮದಿಂದ ಜರುಗಲಿದೆ.
ತಾಲೂಕಿನ ದೋಟಿಹಾಳ ಗ್ರಾಮದ ಶುಖಮುನಿ ಸ್ವಾಮಿಗಳ ದೇವಸ್ಥಾನವು ತಾಲೂಕಿನಲ್ಲೇ ದೊಡ್ಡ ದೇವಸ್ಥಾನ ಹಾಗೂ ಭಾವೈಕ್ಯತೆ ಸಾರುವಂತಹ ದೊಡ್ಡ ಜಾತ್ರೆ ಎಂದು ಹೆಸರುವಾಸಿಯಾಗಿದೆ. ಜಾತ್ರೆಯ ಸಂಭ್ರಮವನ್ನು ಹೆಚ್ಚಿಸಲು ತಹಸೀಲ್ದಾರರು, ದೇವಸ್ಥಾನದ ಕಮಿಟಿಯವರು, ದೋಟಿಹಾಳ ಹಾಗೂ ಕೇಸೂರು ಗ್ರಾಪಂ ಆಡಳಿತವು ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ.ಪಲ್ಲಕ್ಕಿ ಉತ್ಸವ:ಮಾ.3ರಂದು ಬೆಳಿಗ್ಗೆ ಶುಕಮುನಿ ತಾತನ ಭಾವಚಿತ್ರ ಮೆರವಣಿಗೆಯ ನಂತರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಭಾನುವಾರ ಆರಂಭವಾದ ಪಲ್ಲಕ್ಕಿ ಉತ್ಸವದ ಮೆರವಣಿಗೆ ಸುಮಾರು ಎಂಟು ದಿನಗಳ ಕಾಲ ಭಾಜಾ ಭಜಂತ್ರಿ ವಾಧ್ಯ ಮೇಳಗಳೊಂದಿಗೆ ಹಗಲು ಮತ್ತು ರಾತ್ರಿ ಅದ್ಧೂರಿಯಾಗಿ ಮೆರವಣಿಗೆ ನಡೆಯುತ್ತದೆ. ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಭಾಗವಹಿಸುತ್ತಾರೆ.ಅನ್ನದಾಸೋಹ:ತಾತನ ಪಲ್ಲಕ್ಕಿ ಉತ್ಸವ ಆರಂಭಗೊಂಡ ಮೊದಲ ದಿನದಿಂದ ಅನ್ನ ದಾಸೋಹ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಪ್ರತಿದಿನ ಸಾವಿರಾರು ಜನರು ಪ್ರಸಾದ ಸ್ವೀಕರಿಸಲಿದ್ದಾರೆ. ಈ ವೇಳೆ ಅನ್ನ, ಸಾಂಬಾರು, ಉದುರು ಸಜ್ಜಕ, ಗೋದಿ ಹುಗ್ಗಿ, ಶಿರಾ, ರೊಟ್ಟಿ, ಬದನೆಕಾಯಿ, ಸೌತೆಕಾಯಿ ಪಲ್ಯೆ, ಸಂಡಿಗೆ, ಹಪ್ಪಳ ಸೇರಿದಂತೆ ವಿವಿಧ ಆಹಾರ ತಯಾರು ಮಾಡುತ್ತಾರೆ.ಸಪ್ತಭಜನೆ:ಮಾ.3ರಂದು ಆರಂಭಗೊಂಡ ಸಪ್ತ ಭಜನೆ ಕಾರ್ಯಕ್ರಮವು ದಿನದ 24 ತಾಸುಗಳ ಕಾಲ ನಡೆಯುತ್ತಿದ್ದು, ಈ ಸಪ್ತ ಭಜನೆಯ ಕಾರ್ಯಕ್ರಮದಲ್ಲಿ ದೋಟಿಹಾಳ, ಕೇಸೂರು, ಹೆಸರೂರು, ಜಾಲಿಹಾಳ, ರ್‍ಯಾವಣಕಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಭಾಗವಹಿಸುತ್ತಾರೆ. ಭಜನೆಯು ಮಾ.10ರಂದು ಸಮಾಪ್ತಿಗೊಂಡು ನಂತರ ಮಹಾ ರಥೋತ್ಸವು ಜರುಗಲಿದೆ.ಶುಖಮುನಿ ತಾತನ ಜಾತ್ರೆ ಹಿನ್ನೆಲೆಯಲ್ಲಿ ಅವಳಿ ಗ್ರಾಮಗಳಲ್ಲಿ ಬೀದಿದೀಪ ಜೋಡಣೆ, ಸ್ವಚ್ಛತೆ, ಕುಡಿವ ನೀರು, ರಥಬೀದಿ ಸಹಿತ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಭಕ್ತರಿಗೆ ತಾತ್ಕಾಲಿಕ ಶೌಚಾಲಯ ನಿರ್ಮಾಣಕ್ಕೆ ಮುಂದಾಗುತ್ತೇವೆ ಎನ್ನುತ್ತಾರೆ ದೋಟಿಹಾಳ ಮತ್ತು ಕೇಸೂರು ಪಿಡಿಒಗಳಾದ ಮುತ್ತಣ್ಣ ಹಾಗೂ ಅಮೀನಸಾಬ ಅಲಾಂದಾರ.