ಅರಮನೆಯಲ್ಲಿ ಸಾವಿರಾರು ಮಂದಿಯಿಂದ ಯೋಗಾಸನ ವೈಭವ

KannadaprabhaNewsNetwork |  
Published : Jun 22, 2024, 12:46 AM IST
4 | Kannada Prabha

ಸಾರಾಂಶ

ಸೂರ್ಯೋದಯಕ್ಕೂ ಮೊದಲೇ ಯೋಗಾಸಕ್ತರು ಅರಮನೆ ಆವರಣದಲ್ಲಿ ಜಮಾಯಿಸಿದ್ದರು. ಬೆಳಗ್ಗೆ 6.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. 7.30 ರಿಂದ ಆರಂಭವಾದ 45 ನಿಮಿಷಗಳ ಯೋಗಾಭ್ಯಾಸದಲ್ಲಿ ಯೋಗಪಟುಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಗಣ್ಯರು ಪಾಲ್ಗೊಂಡು ಯೋಗಾಸ ಮಾಡಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರಿನ ಯೋಗಾಸಕ್ತರಲ್ಲಿ ಶುಕ್ರವಾರ ಎಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮವಿತ್ತು. ಮೈಸೂರು ಅರಮನೆ ಆವರಣದಲ್ಲಿ ಸಾವಿರಾರು ಮಂದಿ ಯೋಗಾಸಕ್ತರು, ವಿದ್ಯಾರ್ಥಿಗಳು ಯೋಗಾಸನ ಮಾಡುವ ಮೂಲಕ ಯೋಗದ ವೈಭವನನ್ನು ಸಾರಿದರು.

ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅರಮನೆ ಆವರಣದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಯೋಗಾಭ್ಯಾಸ ಮೂಲಕ ಆಚರಿಸಲಾಯಿತು.

ಸೂರ್ಯೋದಯಕ್ಕೂ ಮೊದಲೇ ಯೋಗಾಸಕ್ತರು ಅರಮನೆ ಆವರಣದಲ್ಲಿ ಜಮಾಯಿಸಿದ್ದರು. ಬೆಳಗ್ಗೆ 6.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. 7.30 ರಿಂದ ಆರಂಭವಾದ 45 ನಿಮಿಷಗಳ ಯೋಗಾಭ್ಯಾಸದಲ್ಲಿ ಯೋಗಪಟುಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಗಣ್ಯರು ಪಾಲ್ಗೊಂಡು ಯೋಗಾಸ ಮಾಡಿದರು.

ಯೋಗಗುರು ಪಿ.ಎನ್. ಗಣೇಶ್ ಕುಮಾರ್ ಅವರು ಶಂಖನಾದ ಮೊಳಗಿಸಿ ಯೋಗಾಭ್ಯಾಸ ಆರಂಭಿಸಿದರು. ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಆಶಾ ಮತ್ತು ತಂಡದವರು ಪ್ರಾರ್ಥಿಸಿದರು. ಆಯುಷ್ ಇಲಾಖೆಯ ಶ್ರೀನಿವಾಸ ನಾಯ್ಡು ಅವರು 4 ನಿಮಿಷಗಳ ಚಲನ ಕ್ರಿಯೆ ಹಾಗೂ 25 ನಿಮಿಷಗಳ ಯೋಗಭ್ಯಾಸಗಳನ್ನು ನಿರೂಪಿಸಿದರು. ದೇಹದ ಅಂಗಗಳಿಗೆ ಆಗುವ ಅನುಕೂಲವನ್ನೂ ವಿವರಿಸಿದರು.

ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧ ಹಲಾಸನ, ಪವನ ಮುಕ್ತಾಸನ, ಶವಾಸನ ಮಾಡಿದರು.

ಭಾರತ್ ಸ್ವಾಭಿಮಾನಿ ಟ್ರಸ್ಟ್ ನ ಕಾಚಂನಗಂಗಾ, ಮೈಸೂರು ಯೋಗ ಒಕ್ಕೂಟದ ಬಿ.ಪಿ. ಮೂರ್ತಿ, ಯುವಶಕ್ತಿ ಪ್ರತಿಷ್ಠಾನದ ಪ್ರೇಮ್ ಕುಮಾರ್ ಅವರು 14 ನಿಮಿಷ ಪ್ರಾಣಾಯಾಮ, ಧ್ಯಾನ, ಸಂಕಲ್ಪ ಬೋಧಿಸಿದರು. ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ತಂಡದವರು ಹೇಳಿದ ಶಾಂತಿ ಮಂತ್ರದೊಂದಿಗೆ ಯೋಗಾಸನ ಮುಕ್ತಾಯಗೊಂಡಿತು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಶಾಸಕ ಟಿ.ಎಸ್. ಶ್ರೀವತ್ಸ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಆಯುಷ್ ವೈದ್ಯಾಧಿಕಾರಿ ಡಾ. ಪುಷ್ಪಾ ಮೊದಲಾದವರು ಇದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ