ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ 47ನೇ ರಾಜ್ಯ ಮಟ್ಟದ ಶ್ರೀಕಾಲಭೈರವೇಶ್ವರ ಜಾನಪದ ಕಲಾ ಮೇಳದ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಜಾನಪದ ನಮ್ಮ ಪುರಾತನ ಕಲೆ. ಈ ಕಲೆಯನ್ನು ಉಳಿಸಿ, ಬೆಳೆಸಿ, ಯುವ ಜನತೆಗೆ ತಲುಪಿಸುವ ಉದ್ದೇಶದಿಂದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ರಾಜ್ಯ ಮಟ್ಟದ ಜಾನಪದ ಸಮ್ಮೇಳನಕ್ಕೆ ಚಾಲನೆ ನೀಡಿ ನಾಲ್ಕು ದಶಕಗಳು ಕಳೆದಿವೆ. ಇದು ಜನಪದರ ಕಲೆ ಹಾಗೂ ಬದುಕು ಹಸನಗೊಳ್ಳಲು ಒಂದು ವೇದಿಕೆಯಾಗಿದೆ. ವೈಜ್ಞಾನಿಕ ಯುಗದಲ್ಲಿಯೂ ಪ್ರಸ್ತುತದ ಶ್ರೀಗಳು ಜಾನಪದ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿ, ಕಲಾವಿದರನ್ನು ಗುರುತಿಸಿ, ಬೆಳೆಸುವ ಕೈಂಕರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.ಸಮಾರಂಭದ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ತಮಿಳುನಾಡಿನ ವಾಸ್ತುಶಿಲ್ಪಿ ಮುತ್ತಯ್ಯ ಸ್ಥಪತಿ, ಚಿಕ್ಕಮಗಳೂರಿನ ವಿಜ್ಞಾನಿ ಡಾ.ವೇಣುಗೋಪಾಲ್, ಅರಸೀಕೆರೆಯ ಪ್ರಗತಿಪರ ರೈತ ಡಾ.ರಂಗಸ್ವಾಮಿ, ಶಿವಮೊಗ್ಗ ಜಿಲ್ಲೆ ಸಾಗರದ ಕಿನ್ನರಿ ವಾದಕ ಕೆ.ಗುಡ್ಡಪ್ಪಜೋಗಿ, ಮೈಸೂರಿನ ಸಮಾಜ ಸೇವಕ ಎಂ.ಬಿ.ಬೋರೇಗೌಡ ಅವರಿಗೆ 1 ಲಕ್ಷ ರು. ನಗದು ಹಾಗೂ ಸ್ಮರಣಿಕೆಯನ್ನೊಳಗೊಂಡ ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಿ ಡಾ.ನಿರ್ಮಲಾನಂದನಾಥಶ್ರೀಗಳು ಗೌರವಿಸಿದರು. ನಂತರ ವೇದಿಕೆಯಲ್ಲಿ ಚುಂಚಶ್ರೀ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಲಾಯಿತು.
ವೇದಿಕೆಯಲ್ಲಿ ಜಾನಪದ ಕಲಾವಿದರ ನೃತ್ಯ ಪ್ರದರ್ಶನ, ಡೊಳ್ಳು ಕುಣಿತ, ವೀರಗಾಸೆ ಕುಣಿತ ಸೇರಿದಂತೆ ಜಾನಪದ ಕಲಾವಿದರು ತಮ್ಮ ಪ್ರದರ್ಶನಗಳನ್ನು ನೀಡಿದರು.
ಜಾನಪದ ಕಲಾವಿದರೊಂದಿಗೆ ಶ್ರೀಮಠ ಅವಿನಾಭಾವ ಸಂಬಂಧ ಹೊಂದಿದೆ. ನಮ್ಮ ಗ್ರಾಮೀಣ ಸೊಗಡು, ಬೇರುಗಳು ನಶಿಸಬಾರದು. ಇವುಗಳನ್ನು ಬೆಳೆಸಬೇಕು ಪ್ರತಿ ವರ್ಷ ಶ್ರೀಮಠದಲ್ಲಿ ನಡೆಯುವ ರಾಜ್ಯ ಮಟ್ಟದ ಜಾನಪದ ಕಲಾ ಮೇಳಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನಪದ ಕಲಾವಿದರು ಆಗಮಿಸಿ, ತಮ್ಮ ತವರಿಗೆ ಬಂದಷ್ಟೇ ಖುಷಿಯಿಂದ ಹಾಡಿ, ನಲಿದು ಭೈರವನ ಕ್ಷೇತ್ರದಲ್ಲಿ ಹೋಗುತ್ತಾರೆ. ಇಂತಹ ಕಲಾವಿದರ ಕಲೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕಿದೆ ಎಂದರು.
ಆದಿಚುಂಚನಗಿರಿ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ 47ನೇ ಜಾನಪದ ಕಲಾಮೇಳದ ಪ್ರಯುಕ್ತ ಗುರುವಾರ ಸಂಜೆ ಆಯೋಜಿಸಿದ್ದ ಡಾ.ನಿರ್ಮಲಾನಂದನಾಥಶ್ರೀಗಳ ಮುತ್ತಿನ ಪಾಲಕಿ ಉತ್ಸವ ಮತ್ತು ಶ್ರೀ ಕಾಲಭೈರವೇಶ್ವರಸ್ವಾಮಿ ಪುಷ್ಕರಣಿಯಲ್ಲಿ ನಡೆದ ತೆಪ್ಪೋತ್ಸವವನ್ನು ಅಪಾರ ಸಂಖ್ಯೆಯ ಭಕ್ತರು ವೀಕ್ಷಿಸಿ ಕಣ್ತುಂಬಿಕೊಂಡರು.
ಬಗೆ ಬಗೆಯ ಹೂವು ಮತ್ತು ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದ ತೆಪ್ಪೋತ್ಸವದ ಒಂದು ಬದಿಯಲ್ಲಿ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ ಪುತ್ಥಳಿ ಮತ್ತೊಂದು ಬದಿಯಲ್ಲಿ ಶ್ರೀ ಕಾಲಭೈರವೇಶ್ವರ, ಮಾಳಮ್ಮದೇವಿ ಮತ್ತು ಚೌಡೇಶ್ವರಿದೇವಿಯ ಮೂರ್ತಿಯನ್ನಿರಿಸಲಾಗಿತ್ತು. ಪೂಜೆ ಸಲ್ಲಿಸಿ ತೆಪ್ಪದಲ್ಲಿ ಕುಳಿತ ನಿರ್ಮಲಾನಂದನಾಥಶ್ರೀಗಳು ನೆರೆದಿದ್ದ ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡಿದರು. ಚಿನ್ನದ ಕಿರೀಟ ಧರಿಸಿ ಸರ್ವಾಲಂಕಾರ ಭೂಷಿತರಾಗಿ ತೆಪ್ಪೋತ್ಸವದಲ್ಲಿ ಕುಳಿತ್ತಿದ್ದ ಶ್ರೀಗಳನ್ನು ನೋಡಿ ಕಣ್ತುಂಬಿಕೊಂಡ ಭಕ್ತರು ತಮ್ಮ ಭಕ್ತಿಭಾವ ಸಮರ್ಪಿಸಿದರು.