- ಶಿವಣ್ಣ ಸಾಲ ಕಟ್ಟದಿದ್ದರೆ ನಾನೇ ಕಟ್ತೀನಿ ಎಂದಿದ್ದರು: ಮುಖ್ಯಸ್ಥೆ ಜಸ್ಟಿನ್ ಡಿಸೌಜ ಸ್ಮರಣೆ - - -
90ರ ದಶಕದಲ್ಲಿ ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಇನ್ನೇನು ಮುಚ್ಚುತ್ತದೆಂಬ ಗಾಳಿಸುದ್ದಿ ಹುಟ್ಟಿಕೊಂಡಿದ್ದ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಅಭಯ ನೀಡಿ, ಇಂದು ಹೆಮ್ಮರವಾಗಿ ಬೆಳೆದು ನಿಲ್ಲುವಲ್ಲಿ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪ ಪಾತ್ರ ಮಹತ್ವದ್ದು ಎಂದು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಹೇಳಿದರು.
ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ, ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿಯಾಗಿದ್ದ ಶಿವೈಕ್ಯ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ಹಣದ ಕೊರತೆಯಿಂದ ಮುಳುಗುತ್ತಿದ್ದ ನಮ್ಮ ಸಿದ್ಧಗಂಗಾ ಸಂಸ್ಥೆಯನ್ನು ತೇಲಿಸಿದ ಮಹಾನುಭಾವರು ಶಾಮನೂರು ಎಂದು ಎಸ್‌ಎಸ್ ಅವರ ಜನಸೇವೆಯನ್ನು ಸ್ಮರಿಸಿದರು.ಈ ಹಿಂದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ನಮ್ಮ ಶಾಲೆಗೆ ಆ ಸ್ಥಳ ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶವಾಗಿತ್ತು. ಈಗ ಸಂಸ್ಥೆಯು ಇರುವ ಜಾಗವನ್ನು ಖರೀದಿಸಿದ್ದ ಕಾರಣ ಕಟ್ಟಡ ಕಟ್ಟುವುದಕ್ಕೆ ಹಣವೇ ಇರಲಿಲ್ಲ. ಆಗ ದಿಕ್ಕು ತೋಚದಂತಾಗಿದ್ದ ನಮ್ಮ ಸಂಸ್ಥೆಯ ಸಂಸ್ಥಾಪಕ ಎಂ.ಎಸ್.ಶಿವಣ್ಣ ಸರ್ ಹತಾಶರಾಗಿ ದುಃಖಿತರಾಗಿದ್ದರು. ಆಗ ಶಿವಣ್ಣ ಸರ್ ಮನಸ್ಸಿನಲ್ಲಿ ಆಶಾಕಿರಣವಾಗಿ ಗೋಚರಿಸಿದ್ದೇ ಶಾಮನೂರು ಶಿವಶಂಕರಪ್ಪ ಎಂದರು.
ಶಾಲೆ ಕಟ್ಟಡ ಕಟ್ಟಲು ಹಣವಿಲ್ಲ, ಯಾವುದೇ ಬ್ಯಾಂಕ್‌ನಿಂದಲೂ ಸಾಲ ಸಿಗುತ್ತಿಲ್ಲವೆಂದು ಶಿವಣ್ಣ ಸರ್ ಇರುವ ಪರಿಸ್ಥಿತಿಯನ್ನು ಆಗ ಶಾಮನೂರು ಶಿವಶಂಕರಪ್ಪ ಗಮನಕ್ಕೆ ತಂದರು. ತಕ್ಷಣವೇ ಬಾಪೂಜಿ ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಮಾಡಿ, ಶಿವಣ್ಣ ಬರುತ್ತಾನೆ. ಅವನಿಗೆ ಶಾಲೆ ಕಟ್ಟಲು ಬೇಕಾದ ಸಾಲವನ್ನು ತಕ್ಷಣ ಕೊಡು ಅಂತಾ ಆದೇಶಿಸುತ್ತಾರೆ. ಆಗ ಬ್ಯಾಂಕ್ ವ್ಯವಸ್ಥಾಪಕರು ಶ್ಯೂರಿಟಿ ನೀಡಲು ಶಿವಣ್ಣ ಬಳಿ ಏನೂ ಇಲ್ಲವೆಂದು ಹೇಳುತ್ತಾರೆ. ತಕ್ಷಣವೇ ಶಿವಶಂಕರಪ್ಪನವರು, ಅವನು ಕೇಳಿದಷ್ಟೂ ಸಾಲ ಕೊಡು. ಅವನು ಕಟ್ಟದಿದ್ದರೆ ನಾನು ಸಾಲ ಕಟ್ಟುತ್ತೀನೆಂದು ಹೇಳಿ, ಫೋನ್ ಇಟ್ಟರು. ಆ ಕ್ಷಣದಿಂದಲೇ ನಮ್ಮ ಶಿವಣ್ಣ ಸರ್, ನಮ್ಮ ಸಂಸ್ಥೆಯ ಚಿತ್ರಣ, ದೃಶ್ಯವೇ ಬದಲಾಗುತ್ತಾ ಬಂದಿದೆ ಎಂದು ಮುಖ್ಯಸ್ಥೆ ಭಾವುಕರಾದರು.
ಸ್ವತಃ ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಆಗಿದ್ದರೂ ಮತ್ತೊಂದು ಸಂಸ್ಥೆ ಬೆಳವಣಿಗೆಗೆ ಹೇಗೆ ಸಹಾಯ ಮಾಡಿದರೆಂಬುದು ಶಾಮನೂರು ಶಿವಶಂಕರಪ್ಪನವರ ಉದಾರ ಗುಣ, ದೊಡ್ಡತನಕ್ಕೆ ನಿದರ್ಶನವಾಗಿದೆ. ಅನೇಕ ಕಾರ್ಯಕ್ರಮಗಳಲ್ಲಿ ನಮ್ಮೊಂದಿಗೆ ಭಾಗವಹಿಸಿದ ನೆನಪುಗಳು ಸದಾ ಹಸಿರಾಗಿವೆ. ಕೊಳವೆ ಬಾವಿ ತೋಡಿಸಿದಾಗ ಅದಕ್ಕೆ ಚಾಲನೆ ನೀಡಿದ ಸಣ್ಣ ಕಾರ್ಯದಿಂದ, ನಡೆದಾಡಿದ ದೇವರು ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆಯಲ್ಲಿ ದಾಸೋಹಕ್ಕೆ ಚಾಲನೆ ನೀಡಿ, ತಾವೇ ಮಕ್ಕಳಿಗೆ ಪ್ರಸಾದ ಬಡಿಸಿದ್ದು ಶಾಮನೂರು ಶಿವಶಂಕರಪ್ಪ ಅವರ ಪರೋಪಕಾರ, ಧಾರ್ಮಿಕತೆ, ದೈವಭಕ್ತಿ, ಗುರುಗಳ ಬಗ್ಗೆ ಹೊಂದಿದ್ದ ಭಕ್ತಿಗೆ ಸಾಕ್ಷಿ ಎಂದು ಅವರು ಜಸ್ಟಿನ್ ಡಿಸೋಜಾ ವಿವರಿಸಿದರು.
- - -
-17ಕೆಡಿವಿಜಿ7: ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ತುಮಕೂರು ಶ್ರೀ ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳ ಸ್ಮರಣೋತ್ಸವದಲ್ಲಿ ಶಾಮನೂರು ಶಿವಶಂಕರಪ್ಪ ಮಕ್ಕಳಿಗೆ ತಾವೇ ಪ್ರಸಾದ ದಾಸೋಹ ಬಡಿಸುತ್ತಿರುವ ಸಂಗ್ರಹ ಚಿತ್ರವಿದು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಇತರರು ಇದ್ದಾರೆ.