ಮೂರು ಕಟ್ಟಡಗಳ ಹನ್ನೆರಡು ಮನೆಗಳು ಶಿಥಿಲ । ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉಪನ್ಯಾಸಕರ ಕೊರತೆ
ಮಾರುತಿ ಶಿಡ್ಲಾಪುರಕನ್ನಡಪ್ರಭ ವಾರ್ತೆ ಹಾನಗಲ್ಲ
ಪಟ್ಟಣದ ಹೊರವಲಯದ ಮಲ್ಲಿಗ್ಗಾರ ಗ್ರಾಮದ ಸುಂದರ ಪರಿಸರದಲ್ಲಿ ನಿರ್ಮಾಣಗೊಂಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ ವಸತಿ ಗೃಹದ ಮೂರು ಕಟ್ಟಡಗಳ ಹನ್ನೆರಡು ಮನೆಗಳು ಶಿಥಿಲಗೊಂಡು ನಿರುಪಯುಕ್ತವಾಗಿವೆ.ಹಾನಗಲ್ಲ ಬಳಿಯ ಮಲ್ಲಿಗ್ಗಾರದಲ್ಲಿ ೭೦೦ಕ್ಕೂ ಅಧಿಕ ವಿದ್ಯಾರ್ಥಿಗಳನ್ನೊಳಗೊಂಡ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳು ಹಾಗೂ ಸ್ನಾತಕೊತ್ತರ ಕೇಂದ್ರವನ್ನು ಹೊಂದಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎಲ್ಲ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿದೆ. ಆದರೆ ಪುಸ್ತಕಗಳ ಕೊರತೆ ಇದೆ. ಕಡಿಮೆ ಪ್ರಮಾಣದ ಆಟದ ಸಾಮಗ್ರಿಗಳಿವೆ. ಇಲ್ಲಿ ೩೦ ರಷ್ಟಿರಬೇಕಾದ ಉಪನ್ಯಾಸಕರಲ್ಲಿ ನಾಲ್ಕು ಉಪನ್ಯಾಸಕರು ಮಾತ್ರ ಕಾಯಂ ಇದ್ದಾರೆ. ೩೧ ಅತಿಥಿ ಉಪನ್ಯಾಸಕರಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಕಾಲೇಜಿಗೆ ಕಚೇರಿ ಕಾರ್ಯಗಳನ್ನು ನಿರ್ವಹಿಸಲು ಕೇವಲ ಒಬ್ಬ ಕಾಯಂ ಸಿಬ್ಬಂದಿ ಇದ್ದಾರೆ. ಉಳಿದ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿದ್ದಾರೆ.
ಇಲ್ಲಿನ ಉಪನ್ಯಾಸಕರು ಹಾಗೂ ಇತರ ಸಿಬ್ಬಂದಿಯ ವಸತಿಗಾಗಿ ೨೦೧೨ರ ಡಿಸೆಂಬರ್ ತಿಂಗಳಿನಲ್ಲಿ ಉದ್ಘಾಟನೆಗೊಂಡ ೧೨ ಮನೆಗಳುಳ್ಳ ಮೂರು ಕಟ್ಟಡಗಳಲ್ಲಿ ಯಾರೂ ವಸತಿ ಇಲ್ಲದ ಕಾರಣ ನಿರ್ಲಕ್ಷಕ್ಕೊಳಗಾಗಿವೆ. ಈ ಮನೆಗಳ ಗಾಜುಗಳು ಒಡೆದು, ಗೆದ್ದಿಲು ಹಿಡಿದು ನಿರ್ಲಕ್ಷಕ್ಕೊಳಗಾಗಿವೆ. ಕೇವಲ ನಾಲ್ಕು ಜನ ಕಾಯಂ ಸಿಬ್ಬಂದಿ ಇದ್ದು, ಅವರೂ ಕೂಡ ಇಲ್ಲಿ ವಾಸಿಸುತ್ತಿಲ್ಲ. ಹೀಗಾಗಿ ಬಳಕೆಯಾಗದೆ ಈ ವಸತಿ ಗೃಹಗಳು ನಿರ್ಲಕ್ಷಕ್ಕೊಳಗಾಗಿವೆ.ಆದರೆ ಈ ವಸತಿ ಗೃಹಗಳಲ್ಲಿ ಒಂದು ಕಟ್ಟಡವನ್ನು ಕಾಲೇಜು ಆವರಣದಲ್ಲಿರುವ ಮೆಟ್ರಿಕ್ ನಂತರದ ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ತಾತ್ಕಾಲಿಕವಾಗಿ ನೀಡಲಾಗಿದೆ. ಈ ವಸತಿ ನಿಲಯಕ್ಕೆ ಇಲ್ಲಿಯೇ ಸುಸಜ್ಜಿತ ಕಟ್ಟಡವಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇರುವುದರಿಂದ ಕಾಲೇಜಿನ ವಸತಿ ಗೃಹ ಕಟ್ಟಡವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳುತ್ತಿದ್ದಾರೆ.
ಕಾಯಂ ಉಪನ್ಯಾಸಕರು ಇಲ್ಲದ ಕಾರಣ ವಸತಿ ಗೃಹ ಖಾಲಿ ಇದ್ದುದರಿಂದ ನಿರ್ಲಕ್ಷಕ್ಕೊಳಗಾಗಿವೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ಬಂದಿದೆ. ಇಲ್ಲಿನ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಈ ಕಟ್ಟಡಗಳ ಒಂದು ಭಾಗ ನೀಡಲಾಗಿದೆ. ಅಗತ್ಯವಿದ್ದರೆ ಮೇಲಾಧಿಕಾರಿಗಳ ಪರವಾನಗಿ ಪಡೆದು ವಸತಿ ನಿಲಯಕ್ಕಾಗಿ ನೀಡಬಹುದು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಎಚ್.ಬಿ. ವಿಜಯಕುಮಾರ ತಿಳಿಸಿದ್ದಾರೆ.