ಮಂಡ್ಯ ತಾಲೂಕಿನ ಹಲ್ಲೇಗೆರೆ ಹೊರವಲಯದಲ್ಲಿ ಸ್ಕೋಪ್ ಫೌಂಡೇಷನ್ ವತಿಯಿಂದ ನಿರ್ಮಿಸುತ್ತಿರುವ ಭೂ ದೇವಿ ಆಧ್ಯಾತ್ಮಿಕ ಕೇಂದ್ರದಲ್ಲಿ ಭೂದೇವಿ ಪ್ರತಿಷ್ಠಾಪನೆಗೆ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಭೂಕಂಪನಕ್ಕೂ ಜಗ್ಗದ ರೀತಿಯಲ್ಲಿ ತಳಪಾಯವನ್ನು ನಿರ್ಮಿಸಲಾಗಿದೆ. ಇದಕ್ಕೆ ಸುಮಾರು ೫೦ ಲಕ್ಷಕ್ಕೂ ಹೆಚ್ಚು ಹಣವನ್ನು ವೆಚ್ಚ ಮಾಡಿರುವುದಾಗಿ ಹೇಳಲಾಗುತ್ತಿದೆ.
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಹಲ್ಲೇಗೆರೆ ಹೊರವಲಯದಲ್ಲಿ ಸ್ಕೋಪ್ ಫೌಂಡೇಷನ್ ವತಿಯಿಂದ ನಿರ್ಮಿಸುತ್ತಿರುವ ಭೂ ದೇವಿ ಆಧ್ಯಾತ್ಮಿಕ ಕೇಂದ್ರದಲ್ಲಿ ಭೂದೇವಿ ಪ್ರತಿಷ್ಠಾಪನೆಗೆ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ.
ಭೂಕಂಪನಕ್ಕೂ ಜಗ್ಗದ ರೀತಿಯಲ್ಲಿ ತಳಪಾಯವನ್ನು ನಿರ್ಮಿಸಲಾಗಿದೆ. ಇದಕ್ಕೆ ಸುಮಾರು ೫೦ ಲಕ್ಷಕ್ಕೂ ಹೆಚ್ಚು ಹಣವನ್ನು ವೆಚ್ಚ ಮಾಡಿರುವುದಾಗಿ ಹೇಳಲಾಗುತ್ತಿದೆ. ೧೨ ಅಡಿ ಆಳದಿಂದ ನಾಲ್ಕು ಹಂತದಲ್ಲಿ ತಳಪಾಯವನ್ನು ನಿರ್ಮಿಸಿಕೊಂಡು ಬಂದಿದ್ದು, ಅದರ ಮೇಲೆ ಇನ್ನೂ ೪ ಅಡಿ ಎತ್ತರಿಸಿ ಅದರ ಮೇಲೆ ಭೂದೇವಿ (ಮದರ್ ಆಫ್ ಅರ್ಥ್) ಪ್ರತಿಷ್ಠಾಪನೆ ಮಾಡಲಾಗುವುದು.
ತಳಪಾಯಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕದೆ ಸಂಪೂರ್ಣವಾಗಿ ಕಲ್ಲುಗಳು ಹಾಗೂ ಮಣ್ಣನ್ನು ತುಂಬಿ ನೈಸರ್ಗಿಕವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಸಣ್ಣದೊಂದು ಬಿರುಕು ಮೂಡದಂತೆ ತಳಪಾಯವನ್ನು ಸುಭದ್ರವಾಗಿ ನಿರ್ಮಿಸಲಾಗಿದೆ.
ಪ್ರತಿಮೆಗೆ ನೀಲಿ ಗ್ರಾನೈಟ್, ವೈಟ್ ಸ್ಟೋನ್:
ಭೂದೇವಿಯ ಶಿಲಾ ಪ್ರತಿಮೆಯನ್ನು ನಿರ್ಮಿಸುವುದಕ್ಕೆ ಅಯೋಧ್ಯೆ ಶ್ರೀರಾಮಮಂದಿರಕ್ಕೆ ಮೂಲ ಮೂರ್ತಿಯನ್ನು ಕೆತ್ತಿದ ಹೊನ್ನಾವರದ ಗಣೇಶ ಭಟ್ ಅವರನ್ನು ಮೊದಲು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದಕ್ಕಾಗಿ ಚಿಕ್ಕಬಳ್ಳಾಪುರದಿಂದ ಪ್ರತಿಮೆ ನಿರ್ಮಾಣಕ್ಕೆ ಕಲ್ಲನ್ನೂ ತರಿಸಿಕೊಡಲಾಗಿತ್ತು. ಸುಮಾರು ೧೧ ಮಂದಿ ಶಿಲ್ಪಿಗಳೂ ಬಂದಿದ್ದರು. ಆದರೆ, ವಿದ್ಯುತ್ ಸಮಸ್ಯೆ ಸೇರಿದಂತೆ ಹಲವು ತಾಂತ್ರಿಕ ಅಡಚಣೆಗಳು ಎದುರಾಗಿದ್ದರಿಂದ ಗಣೇಶ್ ಭಟ್ ಅವರು ಈ ಯೋಜನೆಯಿಂದ ಹಿಂದಕ್ಕೆ ಸರಿದರು ಎಂದು ತಿಳಿದುಬಂದಿದೆ.
ಆನಂತರದಲ್ಲಿ ಮತ್ತಿಬ್ಬರು ಶಿಲ್ಪಿಗಳು ಆಯ್ಕೆಯಾದರೂ ಕಾರಣಾಂತರಗಳಿಂದ ಅವರೂ ಕೂಡ ಬಂದಿಲ್ಲ. ಹೀಗಾಗಿ ಭೂದೇವಿ ಶಿಲಾ ಪ್ರತಿಮೆ ಕೆಲಸಕ್ಕೆ ಕೊಂಚ ಹಿನ್ನಡೆಯಾಗಿದೆ. ನೀಲಿ ಗ್ರಾನೈಟ್ ಮತ್ತು ವೈಟ್ ಸ್ಟೋನ್ ನಿಂದ ೧೪ ಅಡಿ ಎತ್ತರದ ಭೂದೇವಿಯ ಏಕಶಿಲಾ ಪ್ರತಿಮೆಯನ್ನು ಖ್ಯಾತ ಶಿಲ್ಪಿಗಳಿಂದ ಕೆತ್ತಿಸಲು ಯೋಜನೆ ರೂಪಿಸಿದ್ದಾರೆ.
ವಿದ್ಯುತ್ ಸಮಸ್ಯೆ ನಿವಾರಣೆ:
ಪ್ರತಿಮೆಯನ್ನು ಕೆತ್ತುವುದಕ್ಕೆ ಅಡಚಣೆಯಾಗಿದ್ದ ವಿದ್ಯುತ್ ಸಮಸ್ಯೆಯನ್ನು ನಿವಾರಿಸಲಾಗಿದೆ. ೧೦ ಕೆವಿ ಸಾಮರ್ಥ್ಯದ ವಿದ್ಯುತ್ ಸರಬರಾಜು ಮಾಡಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದು, ೨೪ ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆಯಾಗುವುದರ ಜೊತೆಗೆ ಸ್ವತಃ ಜನರೇಟರ್ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ. ಹೀಗಾಗಿ ಪ್ರತಿಮೆ ನಿರ್ಮಾಣ ಕಾರ್ಯ ಮುಂದಿನ ದಿನಗಳಲ್ಲಿ ಚುರುಕನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.
ರಸ್ತೆಗಳಿಗೆ ಮೆರುಗು:
ಹಲ್ಲೇಗೆರೆಯಲ್ಲಿ ಭೂ ದೇವಿ ಆಧ್ಯಾತ್ಮಿಕ ಕೇಂದ್ರದ ಶಂಕುಸ್ಥಾಪನೆಗೆ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಚೆಲ್ ಸೇರಿದಂತೆ ಇನ್ನಿತರ ಗಣ್ಯರು ಆಗಮಿಸಲಿರುವ ಹಿನ್ನೆಲೆಯಲ್ಲಿ ಆಧ್ಯಾತ್ಮಿಕ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಬಸರಾಳು-ತಂಗಳಗೆರೆ ರಸ್ತೆ, ಕೊತ್ತಗೆರೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ, ಬಸರಾಳು-ಕೊಪ್ಪ ರಸ್ತೆಯಿಂದ ಸಂಪರ್ಕ ಕಲ್ಪಿಸುವ ಸುಮಾರು ೭.೫ ಕಿ.ಮೀ. ರಸ್ತೆಯನ್ನು ೧೧.೪ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹಲ್ಲೇಗೆರೆಯಿಂದ ಕೋಡಿಹಳ್ಳದ ಮೂಲಕ ಆಧ್ಯಾತ್ಮಿಕ ಕೇಂದ್ರವನ್ನು ಸಂಪರ್ಕಿಸುವ ರಸ್ತೆಯನ್ನು ೨೫ ಲಕ್ಷ ರು. ವೆಚ್ಚದಲ್ಲಿ ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ.
ಆಗಸ್ಟ್‌ನಲ್ಲಿ ಡಾ.ವಿವೇಕ್‌ಮೂರ್ತಿ ಆಗಮನ:
ಮುಂದಿನ ಆಗಸ್ಟ್ ತಿಂಗಳಲ್ಲಿ ಅಮೆರಿಕದ ಖ್ಯಾತ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ ಆಗಮಿಸಲಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲೇ ಆಗಮಿಸಬೇಕಿತ್ತಾದರೂ ಯುದ್ಧದ ಕಾರಣದಿಂದ ಅವರು ತವರಿನ ಪ್ರವಾಸವನ್ನು ಮುಂದೂಡಿದ್ದಾರೆ. ಅವರು ಹಲ್ಲೇಗೆರೆಗೆ ಬಂದ ನಂತರದಲ್ಲಿ ಎಲ್ಲ ಕಾರ್ಯಗಳಿಗೂ ಚುರುಕನ್ನು ನೀಡಲಿದ್ದಾರೆ. ಶಿಲಾ ಪ್ರತಿಮೆಯಿಂದ ಹಿಡಿದು ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರದ ನಿರ್ಮಾಣದ ಚಟುವಟಿಕೆ ಕಾರ್ಯಗಳಿಗೂ ವೇಗ ನೀಡಲಿದ್ದಾರೆ ಎನ್ನಲಾಗಿದೆ.
ಅಮೆರಿಕಾದಿಂದಲೇ ಮಾಹಿತಿ ಸಂಗ್ರಹ:
ಭೂದೇವಿ ಆಧ್ಯಾತ್ಮಿಕ ಕೇಂದ್ರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾರ್ಯಚಟುವಟಿಕೆ ಬಗ್ಗೆಯೂ ಡಾ.ಹೆಚ್.ಲಕ್ಷ್ಮೀನರಸಿಂಹಮೂರ್ತಿ ಹಾಗೂ ಡಾ.ವಿವೇಕ್‌ಮೂರ್ತಿ ಅಮೆರಿಕಾದಿಂದಲೇ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಕೇಂದ್ರದ ಅಲ್ಲಲ್ಲಿ ಸೀಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಅಲ್ಲಿಗೆ ಯಾರು ಬರುತ್ತಾರೆ, ಹೋಗುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವರು. ಜಮೀನಿನಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಉಸ್ತುವಾರಿಯನ್ನು ಹಲ್ಲೇಗೆರೆಯ ವಿಜೇಂದ್ರ ಎಂಬುವರಿಗೆ ವಹಿಸಿದ್ದು, ಅವರೊಂದಿಗೆ ನಿತ್ಯ ಸಂಪರ್ಕದಲ್ಲಿದ್ದು ಎಲ್ಲಾ ಮಾಹಿತಿಗಳನ್ನು ಪಡೆಯುತ್ತಿದ್ದಾರೆ.
ಹಲ್ಲೇಗೆರೆ ಹೊರವಲಯದಲ್ಲಿರುವ ಐದೂವರೆ ಎಕರೆ ಜಮೀನಿನಲ್ಲಿ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ವಿದ್ಯುತ್ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗಿದೆ. ಭೂದೇವಿ ಪ್ರತಿಮೆ ಕೆತ್ತುವ ಶಿಲ್ಪಿಗಳೂ ಶೀಘ್ರದಲ್ಲೇ ಬರಲಿದ್ದಾರೆ. ಕೆಲವೊಂದು ತಾಂತ್ರಿಕ ಅಡಚಣೆಗಳಿಂದ ತಡವಾಗಿದ್ದರೂ ಬಹಳ ವ್ಯವಸ್ಥಿತವಾಗಿ ಎಲ್ಲಿಯೂ ಸಣ್ಣ ದೋಷಗಳು ಎದುರಾಗದಂತೆ ನಿರ್ಮಾಣ ಮಾಡಲಾಗುತ್ತಿದೆ. ಆಗಸ್ಟ್‌ನಲ್ಲಿ ಡಾ.ವಿವೇಕ್ ಮೂರ್ತಿ ಆಗಮಿಸಲಿದ್ದು, ಅವರಿಂದ ಹೆಚ್ಚಿನ ಮಾಹಿತಿ ಪಡೆಯಬಹುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.