ರಾಜ್ಯ ಕಾಂಗ್ರೆಸ್‌ ಸರ್ಕಾರ ಬಲಗೈಲಿ ಕೊಟ್ಟು, ಎಡಗೈಲಿ ಕಿತ್ತುಕೊಳ್ಳುತ್ತಿದೆ: ಕೆ.ಬಿ.ಪ್ರಸನ್ನಕುಮಾರ್‌ ಟೀಕೆ

KannadaprabhaNewsNetwork | Published : Nov 21, 2023 12:45 AM

ಸಾರಾಂಶ

ಆರೋಗ್ಯ ವಿಚಾರದಲ್ಲಿ ಸರ್ಕಾರ ನಿರ್ಲಕ್ಷಿಸುತ್ತಿದೆ. ಸ್ವಚ್ಛತೆ ಇಲ್ಲದೆ ಸಾರ್ವಜನಿಕರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸುತ್ತಿಲ್ಲ. ರಾಜ್ಯ ಸರ್ಕಾರದ ಜನವಿರೋಧಿ ಆಡಳಿತವನ್ನು ಖಂಡಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ನ.22ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ ಎಂದು ಕೆ.ಬಿ.ಪ್ರಸನ್ನಕುಮಾರ್‌ ಹೇಳಿದರು. ಪ್ರತಿಭಟನಾ ಮೆರವಣಿಗೆ ನಂತರ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಗ್ರಾಮಾಂತರ ಶಾಸಕಿ ಶಾರದಾ ಪೂರ್‍ಯಾ ನಾಯ್ಕ ಅವರ ಹುಟ್ಟುಹಬ್ಬವನ್ನು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳ ಸಮ್ಮುಖ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಜನರಿಂದ ದಂಡದ ರೂಪದಲ್ಲಿ ಹಣ ಸಂಗ್ರಹಣೆಗೆ ಮುಂದಾಗಿದೆ. ಸಂಚಾರಿ ವ್ಯವಸ್ಥೆ ಮೂಲಕ ಹಗಲು ದರೋಡೆಗೆ ಮುಂದಾಗಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಈ ಹಿಂದೆ ದಂಡ ಶುಲ್ಕ ₹500 ಇತ್ತು, ಈಗ ₹3 ಸಾವಿರದಿಂದ ₹5 ಸಾವಿರವರೆಗೆ ಏರಿಕೆಯಾಗಿದೆ. ಅಬಕಾರಿ ಇಲಾಖೆ ಸಹ ಮದ್ಯದ ಮೇಲಿನ ದರ ಹೆಚ್ಚಿಸಿದೆ. ಇವೆಲ್ಲವೂ ಭಾಗ್ಯಕ್ಕೆ ವ್ಯಯವಾಗುತ್ತಿದೆ. ಬಲಗೈಲಿ ಕೊಟ್ಟ ಸರ್ಕಾರ ಎಡಗೈನಲ್ಲಿ ಕಿತ್ತುಕೊಳ್ಳುತ್ತಿದೆ. ರೈತರಿಗೆ ಪರಿಹಾರ ನೀಡಿಲ್ಲ. ರೈತರಿಗೆ 7 ಗಂಟೆ ವಿದ್ಯುತ್ ಕೊಡುತ್ತೇವೆ ಎಂದು ಈ ಕೇವಲ 4 ಗಂಟೆ ಮಾತ್ರ ನೀಡುತ್ತಿದೆ. ಕೈಗಾರಿಕೆಗಳಿಗೂ ವಿದ್ಯುತ್ ಕೊರತೆ ಉಂಟಾಗಿದೆ ಎಂದರು.

ನಾಳೆ ಸರ್ಕಾರ ವಿರುದ್ಧ ಪ್ರತಿಭಟನೆ:

ಆರೋಗ್ಯ ವಿಚಾರದಲ್ಲಿ ಸರ್ಕಾರ ನಿರ್ಲಕ್ಷಿಸುತ್ತಿದೆ. ಸ್ವಚ್ಛತೆ ಇಲ್ಲದೆ ಸಾರ್ವಜನಿಕರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸುತ್ತಿಲ್ಲ. ರಾಜ್ಯ ಸರ್ಕಾರದ ಜನವಿರೋಧಿ ಆಡಳಿತವನ್ನು ಖಂಡಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ನ.22ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ ಎಂದು ಕೆ.ಬಿ.ಪ್ರಸನ್ನಕುಮಾರ್‌ ಹೇಳಿದರು.

ಪ್ರತಿಭಟನಾ ಮೆರವಣಿಗೆ ನಂತರ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಗ್ರಾಮಾಂತರ ಶಾಸಕಿ ಶಾರದಾ ಪೂರ್‍ಯಾ ನಾಯ್ಕ ಅವರ ಹುಟ್ಟುಹಬ್ಬವನ್ನು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳ ಸಮ್ಮುಖ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಜೆಡಿಎಸ್‌ ನೂತನ ಅಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ, ನ.27ರಂದು ಬೆಳಗ್ಗೆ 11 ಗಂಟೆಗೆ ಶುಭಮಂಗಳ ಸಮುದಾಯ ಭವನದಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದು, ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮುಖಂಡರಾದ ಭೋಜೇಗೌಡ, ವೈ.ಎಸ್.ವಿ. ದತ್ತ, ಶಾರದಾ ಪೂರ್‍ಯಾ ನಾಯ್ಕ ಸೇರಿದಂತೆ ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಪಕ್ಷದ ಗ್ರಾಮಾಂತರ ಅಧ್ಯಕ್ಷ ಸತೀಶ್ ಮಾತನಾಡಿ, ಶಾಸಕಿ ಶಾರದಾ ಪೂರ್‍ಯಾನಾಯ್ಕ ಹುಟ್ಟುಹಬ್ಬದಂದು ಭದ್ರಾವತಿ ತಾಲೂಕಿನ ಕಲ್ಲಿಹಾಳ್ ಗ್ರಾಮದ ವೃತ್ತದಲ್ಲಿ ರಕ್ತದಾನ ಶಿಬಿರ ಹಾಗೂ ಅಭಿನಂದನಾ ಸಮಾರಂಭ ಮತ್ತು ಜಿಲ್ಲಾ ಕಚೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷ ಗೋವಿಂದಪ್ಪ, ನಗರಾಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಕೆ.ಎನ್. ರಾಮಕೃಷ್ಣ, ತ್ಯಾಗರಾಜ್, ಗೀತಾ ಸತೀಶ್, ಎಚ್.ಎಂ. ಸಂಗಯ್ಯ, ಬೊಮ್ಮನಕಟ್ಟೆ ಮಂಜುನಾಥ್, ಸಿದ್ದಪ್ಪ, ನಾಗೇಶ್, ಶ್ಯಾಮ್, ನರಸಿಂಹ ಗಂಧದ ಮನೆ, ಅಲ್ತಾಫ್, ಕಿಟ್ಟಣ್ಣ, ಸತೀಶ್, ವಿನಯ್ ಇನ್ನಿತರರು ಉಪಸ್ಥಿತರಿದ್ದರು.

- - - -20ಎಸ್‌ಎಂಜಿಕೆಪಿ04: ಕೆ.ಬಿ.ಪ್ರಸನ್ನಕುಮಾರ್‌

Share this article