ಕುರ್ಚಿ ಉಳಿಸಿಕೊಳ್ಳುವ ಭರದಲ್ಲಿ ಜನರನ್ನು, ಅಭಿವೃದ್ಧಿಯನ್ನು ಮರೆತ ರಾಜ್ಯ ಸರ್ಕಾರ: ರೇಷ್ಮಾ ಉದಯ್‌ ಶೆಟ್ಟಿ

KannadaprabhaNewsNetwork |  
Published : Sep 02, 2024, 02:06 AM IST
ರೇಷ್ಮಾ1 | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದು 16 ತಿಂಗಳು ಕಳೆದರೂ ರಾಜ್ಯದಲ್ಲಿ ಅಭಿವೃದ್ಧಿಯೇ ಪ್ರಾರಂಭವಾಗಿಲ್ಲ. ಇಡೀ ಸರ್ಕಾರವೇ ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿ ನಿಷ್ಕ್ರಿಯವಾಗಿ ನಲುಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್‌ ಶೆಟ್ಟಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲಾದ್ಯಂತ ಈ ಬಾರಿ ಧಾರಾಕಾರವಾಗಿ ಸುರಿದ ಮಳೆಗೆ ಅಪಾರ ಹಾನಿಯಾಗಿದ್ದು, ಜಿಲ್ಲೆಯ ಹೆದ್ದಾರಿಗಳು ಸೇರಿದಂತೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಬಹುತೇಕ ರಸ್ತೆಗಳು ಹಾಳಾಗಿವೆ. ಅಂಗನವಾಡಿ ಶಾಲಾ ಕಟ್ಟಡಗಳು, ಕಾಲುಸಂಕ, ತಡೆಗೋಡೆ, ವಿದ್ಯುತ್ ಕಂಬಗಳಿಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿದ್ದು, ಸುಮಾರು 234 ಕೋಟಿ ರು.ಗಳಷ್ಟು ನಷ್ಟದ ವರದಿಯನ್ನು ಜಿಲ್ಲಾಡಳಿತವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರೂ, ಇದುವರೆಗೂ ನಯಾ ಪೈಸೆ ಪರಿಹಾರ ಬಿಡುಗಡೆಯಾಗದೇ ಇರುವುದು ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್‌ ಶೆಟ್ಟಿ ತಿಳಿಸಿದ್ದಾರೆ.ರಸ್ತೆಗಳ ತುರ್ತು ದುರಸ್ತಿ ಕಾಮಗಾರಿಗಳಿಗೆ ಅನುದಾನವಿಲ್ಲದೆ ವಿದ್ಯಾರ್ಥಿಗಳು, ರೈತರು, ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಹಾಯಾಗಿರುವುದು ಶೋಚನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಗರಣಗಳ ಸರಮಾಲೆಯ ನಡುವೆ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುವ ತಂತ್ರಗಾರಿಕೆಯಲ್ಲಿಯೇ ಮಗ್ನರಾಗಿದ್ದಾರೆ. ಇತರ ಸಚಿವರಂತೂ ರಾಜ್ಯದ ಸಮಸ್ಯೆಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ತೆರವಾಗಬಹುದಾದ ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕಲು ಕಾಯುತ್ತಿದ್ದಾರೆ ಎಂದವರು ಹೇಳಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಇದೇ ರೀತಿ ಮಳೆಯ ಅತಿವೃಷ್ಟಿಯಿಂದ ರಾಜ್ಯಾದ್ಯಂತ ಹಾನಿಯಾದಾಗ ಸಾಕಾಲಿಕ ನ್ಯಾಯಯುತ ಪರಿಹಾರ ದೊರೆತಿರುವುದನ್ನು ರಾಜ್ಯದ ಜನತೆ ಇಂದು ಸ್ಮರಿಸುತ್ತಿದ್ದಾರೆ.ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದು 16 ತಿಂಗಳು ಕಳೆದರೂ ರಾಜ್ಯದಲ್ಲಿ ಅಭಿವೃದ್ಧಿಯೇ ಪ್ರಾರಂಭವಾಗಿಲ್ಲ. ಇಡೀ ಸರ್ಕಾರವೇ ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿ ನಿಷ್ಕ್ರಿಯವಾಗಿ ನಲುಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮಳೆ ಹಾನಿ ಪರಿಹಾರ ಹಾಗೂ ಸ್ಥಳೀಯ ಅಭಿವೃದ್ಧಿಗೆ ಅನುದಾನ ಬಿಡುಗಡೆಗಾಗಿ ಜನತೆ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾದ ವಿಷಮ ಸ್ಥಿತಿ ಉದ್ಭವಿಸಲಿದೆ ಎಂದು ರೇಷ್ಮಾ ಉದಯ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ನ.14ರಿಂದ 20ರಿಂದ ರಾಜ್ಯದಲ್ಲಿ ಸಹಕಾರ ಸಪ್ತಾಹ
ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ