ಚಾಮರಾಜನಗರ : ರಾಜ್ಯದ ಹಲವು ಜಿಲ್ಲೆಯಲ್ಲಿ ಸಾವಿರಾರು ಎಕರೆ ರೈತರ ಭೂಮಿಯ ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವ ಇಲಾಖೆ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯ ವಿಜಯಪುರ, ಧಾರವಾಡ, ಕಲಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿ ಎಂದು ನಮೂದಿಸಿದೆ. ಇದರ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಹೋರಾಟ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ರೈತರ ಆರ್‌ಟಿಸಿಯಲ್ಲಿ ತಿದ್ದುಪಡಿ ಆಗುವ ಮೊದಲೇ 11ನೇ ಕಲಂನಲ್ಲಿ ಹಕ್ಕುದಾರರ ಹೆಸರಿನಲ್ಲಿ ವಕ್ಫ್ ಎಂದು ಸೇರಿಸಿ ಅದನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವಂತಹ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಜಮೀರ್ ಅಹಮದ್ ಖಾನ್ ಅವರ ಮೂಲಕ ಮಾಡುತ್ತಿದೆ ಎಂದು ಆರೋಪಿಸಿದರು.
ಭಾರತದಲ್ಲಿ ಅತಿಹೆಚ್ಚು ಭೂಮಿಯನ್ನು ಹೊಂದಿರುವ 3 ಸಂಸ್ಥೆಗಳ ಪೈಕಿ ಮೊದಲನೆಯ ಸ್ಥಾನದಲ್ಲಿ 15 ಲಕ್ಷ ಎಕರೆ ಭೂಮಿಯನ್ನು ಹೊಂದಿರುವುದು ರಕ್ಷಣಾ ಇಲಾಖೆ, ಎರಡನೇ ಸ್ಥಾನದಲ್ಲಿ 12 ಲಕ್ಷ ಎಕರೆ ಭೂಮಿಯನ್ನು ಹೊಂದಿರುವುದು ಭಾರತೀಯ ರೈಲ್ವೆ ಇಲಾಖೆ, ಮೂರನೇ ಸ್ಥಾನದಲ್ಲಿ 9.40 ಲಕ್ಷ ಎಕರೆ ಪ್ರದೇಶದಲ್ಲಿ 8.70 ಲಕ್ಷ ಸಾವಿರ ಆಸ್ತಿಗಳು ವಕ್ಫ್‌ಬೋರ್ಡ್ ವಶದಲ್ಲಿದೆ. ವಕ್ಫ್ ಬೋರ್ಡ್ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಅಧೀನದಲ್ಲಿಲ್ಲ, ಸ್ವತಂತ್ರವಾಗಿದೆ. ಅದರದೇ ಆದಂತಹ ಕಾನೂನು ಇದೆ ಎಂದರು.
ವಕ್ಫ್ ಆಸ್ತಿಯನ್ನು ವಿಸ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಸೂಚನೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ 14 ಸಾವಿರ ಎಕರೆ ಜಮೀನು ವಕ್ಫ್ ಸುಪರ್ದಿನಲ್ಲಿದೆ. 54 ಸಾವಿರ ಎಕರೆ ಭೂಮಿಯಲ್ಲಿ ಸುಮಾರು 29 ಸಾವಿರ ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿಕೊಂಡಿದ್ದಾರೆ. 2.30 ಸಾವಿರ ಕೋಟಿ ರು.ಮೊತ್ತದ ಭ್ರಷ್ಟಾಚಾರ ವಕ್ಫ್ ಬೋರ್ಡ್‌ನಲ್ಲಿ ನಡೆದಿದೆ ಎಂದು ಅನ್ವರ್‌ಮಾನ್ಪಾಡಿ ಸಮಿತಿ ಹೇಳಿದರೂ ಕೂಡ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು.
ರೈತರಿಗೆ ನೋಟಿಸ್ ನೀಡಿದ್ದು, ವಕ್ಫ್ ಹೆಸರು ಸೇರಿಸಿದರೆ ಮಾಲೀಕ ನ್ಯಾಯಾಲಯದ ಮೊರೆ ಹೋಗುವಂತಿಲ್ಲ, ನ್ಯಾಯಕ್ಕಾಗಿ ವಕ್ಫ್ ಬೋರ್ಡ್‌ಗೆ ಹೋಗಬೇಕಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತರುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆದಿದ್ದೇವೆ. ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ. ಇಂತಹ ಅನಾಹುತಗಳನ್ನು ತಡೆಯಲು ಬಿಜೆಪಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್‌ಕುಮಾರ್, ಮಾಜಿ ಶಾಸಕ ಎಸ್. ಬಾಲರಾಜ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್ ಹಾಜರಿದ್ದರು.