ರಾಜ್ಯಕ್ಕೆ ಸಮಗ್ರ ಮೀನುಗಾರಿಕಾ ನೀತಿ ಅಗತ್ಯ: ಖಾದರ್‌

KannadaprabhaNewsNetwork | Published : Apr 12, 2025 12:49 AM

ಸಾರಾಂಶ

ಮಂಗಳೂರು ಸ್ಟೇಟ್‌ಬ್ಯಾಂಕ್‌ ಮೀನುಗಾರ ಮಹಿಳೆಯರ ಮೀನು ಮಾರಾಟ ಮಂಡಳಿಯ 25ನೇ ವರ್ಷದ ಅಂಗವಾಗಿ ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಶುಕ್ರವಾರ ಮೀನುಗಾರ ಮಹಿಳೆಯರ ಸಮಾವೇಶ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದ ಕರಾವಳಿಗೆ ಅನ್ವಯಿಸುವಂತೆ ಸಮಗ್ರ ಮೀನುಗಾರಿಕಾ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಅಭಿಪ್ರಾಯಪಟ್ಟಿದ್ದಾರೆ.ಮಂಗಳೂರು ಸ್ಟೇಟ್‌ಬ್ಯಾಂಕ್‌ ಮೀನುಗಾರ ಮಹಿಳೆಯರ ಮೀನು ಮಾರಾಟ ಮಂಡಳಿಯ 25ನೇ ವರ್ಷದ ಅಂಗವಾಗಿ ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಶುಕ್ರವಾರ ಮೀನುಗಾರ ಮಹಿಳೆಯರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ಮೀನುಗಾರಿಕೆಯಲ್ಲಿ ಅನೇಕ ಸಮಸ್ಯೆಗಳನ್ನು ಮೀನುಗಾರರು ಎದುರಿಸುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರಿಗೆ ಪೂರಕವಾಗುವಂತೆ ಸಮಗ್ರ ಮೀನುಗಾರಿಕಾ ನೀತಿ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.ಮೀನುಗಾರ ಮಹಿಳೆಯರು ಸ್ವಾಭಿಮಾನದ ಪಾಠವನ್ನು ಬೋಧಿಸಿದವರು. ಮಹಿಳಾ ಸಬಲೀಕರಣಕ್ಕೆ ಪ್ರೇರಣೆ ನೀಡಿದವರು. ರೈತರು ಮತ್ತು ಮೀನುಗಾರರೇ ನಿಜವಾದ ಅನ್ನದಾತರು. ಹಾಗಾಗಿ ಅವರಿಗೆ ವಿಶೇಷ ಗೌರವ ಸಲ್ಲುತ್ತದೆ. ಮೀನುಗಾರರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಡೆಗೆ ಹೆಚ್ಚು ಆಸಕ್ತರಾಗಬೇಕು ಎಂದು ಖಾದರ್‌ ಸಲಹೆ ನೀಡಿದರು.ಕೋಟೆಪುರದಲ್ಲಿ ಮೀನುಗಾರಿಕಾ ಜೆಟ್ಟಿನಿರ್ಮಾಣಕ್ಕೆ 5 ಕೋಟಿ ರೂ. ಬಿಡುಗಡೆಗೊಂಡಿದೆ. ಕ್ರಮೇಣ ಬಂದರು ಆಗಿ ಪರಿವರ್ತನೆಯಾಗುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಖಾದರ್‌ ಹೇಳಿದರು.ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮಾತನಾಡಿ, ಮೀನುಗಾರರು ದೇಶಭಕ್ತ ಸಮುದಾಯ. ಮೀನುಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸಲು ಬದ್ಧ ಎಂದು ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಸ್ಟೇಟ್‌ಬ್ಯಾಂಕ್‌ನಲ್ಲಿ ಮೀನುಗಾರ ಮಹಿಳೆಯರಲ್ಲಿ ಯಾವುದೇ ಗೊಂದಲ ಇಲ್ಲದಿದ್ದರೆ ಅವರಿಗೆ ಬೇಕಾದ ರೀತಿಯಲ್ಲಿ ಮಾರುಕಟ್ಟೆಯನ್ನು ವ್ಯವಸ್ಥೆ ಮಾಡಿ ಕೊಡಲಾಗುವುದು ಎಂದು ತಿಳಿಸಿದರು.ಉಡುಪಿ ಶಾಸಕ ಯಶ್‌ಪಾಲ್‌ ಎ. ಸುವರ್ಣ ಅತಿಥಿಯಾಗಿದ್ದರು. ಸ್ಟೇಟ್‌ಬ್ಯಾಂಕ್‌ ಮಾರುಕಟ್ಟೆ ಉಳಿಸಲು ಹೋರಾಟ ಮಾಡಿದ ಕುಸಮಾ ಅಮೀನ್‌ ಬೆಂಗ್ರೆ, ಗೌರಿ ಖಾರ್ವಿ, ಶೋಭಾ ಕರ್ಕೇರ ಬೆಂಗ್ರೆ, ಲೀಲಾವತಿ ಅಮೀನ್‌ ಉಳ್ಳಾಲ, ಪ್ರೇಮಾ ಸಾಲ್ಯಾನ್‌ ಬೆಂಗ್ರೆ, ಸರಸ್ವತಿ ಸಾಲ್ಯಾನ್‌ ಉಳ್ಳಾಲ, ರೋಹಿಣಿ ಕರ್ಕೇರ ಉಳ್ಳಾಲ, ರಾಧಾ ಮೋಹಿನಿ ಬೆಂಗ್ರೆ, ಟೆಂಪೋ ಚಾಲಕರಾದ ಸೀತಾರಾಮ ಶೆಟ್ಟಿ ಹಾಗೂ ಅನ್ವರ್‌ ಕುದ್ರೋಳಿ ಅವರನ್ನು ಸನ್ಮಾನಿಸಲಾಯಿತು.ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಜಯ ಸಿ.ಕೋಟ್ಯಾನ್‌, ಉಪಾಧ್ಯಕ್ಷ ಮೋಹನ ಬೆಂಗ್ರೆ, ಮಂಗಳೂರು ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ, ಮನಪಾ ನಿಕಟಪೂರ್ವ ಮೇಯರ್‌ ಮನೋಜ್‌ ಕುಮಾರ್‌, ಮಾಜಿ ಮೇಯರ್‌ ದಿವಾಕರ ಪಾಂಡೇಶ್ವರ, ಸ್ಟೇಟ್‌ಬ್ಯಾಂಕ್‌ ಮೀನುಗಾರ ಮಹಿಳೆಯರ ಮೀನು ಮಾರಾಟ ಮಂಡಳಿಯ ಅಧ್ಯಕ್ಷೆ ಬೇಬಿ ಎಸ್‌.ಕುಂದರ್‌, ಟ್ರಾಲ್‌ಬೋಟ್‌ ಯೂನಿಯನ್‌ ಅಧ್ಯಕ್ಷ ಚೇತನ್‌ ಬೆಂಗ್ರೆ, ಬೋಳೂರು ಗ್ರಾಮಸಭಾದ ಮುಖಂಡ ಯಶವಂತ ಮೆಂಡನ್‌ ಇದ್ದರು. ಪ್ರವೀಣ್‌ ಕುಂಪಲ ಸ್ವಾಗತಿಸಿದರು. ತೃಪ್ತಿ ಸುವರ್ಣ ಪ್ರಸ್ತಾವನೆಗೈದರು.

Share this article