5,010 ಎಕರೆ ವಿಸ್ತೀರ್ಣದ ಹೆಸರಘಟ್ಟ ಹುಲ್ಲುಗಾವಲು ಪ್ರದೇಶ ಮೀಸಲು ಪ್ರದೇಶವಾಗಿ ಘೋಷಣೆ

KannadaprabhaNewsNetwork |  
Published : Oct 08, 2024, 01:10 AM ISTUpdated : Oct 08, 2024, 07:11 AM IST
ಈಶ್ವರ್ ಖಂಡ್ರೆ | Kannada Prabha

ಸಾರಾಂಶ

ಬೆಂಗಳೂರು ಹೊರವಲಯದಲ್ಲಿನ 5,010 ಎಕರೆ ವಿಸ್ತೀರ್ಣದ ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ಮೀಸಲು ಪ್ರದೇಶವನ್ನಾಗಿ ಘೋಷಿಸುವ ಪ್ರಸ್ತಾವನೆಗೆ ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಿದೆ.

 ಬೆಂಗಳೂರು :  ಬೆಂಗಳೂರು ಹೊರವಲಯದಲ್ಲಿನ 5,010 ಎಕರೆ ವಿಸ್ತೀರ್ಣದ ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ಮೀಸಲು ಪ್ರದೇಶವನ್ನಾಗಿ ಘೋಷಿಸುವ ಪ್ರಸ್ತಾವನೆಗೆ ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಿದೆ.

ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಹೆಸರುಘಟ್ಟ ಹುಲ್ಲುಗಾವಲು ಪ್ರದೇಶದ ಕುರಿತ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಯಿತು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸುವಂತೆ ಹಲವು ದಿನಗಳಿಂದ ಬೇಡಿಕೆಯಿತ್ತು. ಈ ಬಗ್ಗೆ ಪರಿಸರ ಪ್ರೇಮಿಗಳು ಆಂದೋಲನವನ್ನೂ ನಡೆಸಿದ್ದರು. ಪರಿಸರ ಸಂರಕ್ಷಣೆ ದೃಷ್ಟಿಯಿಂದಾಗಿ ಸರ್ಕಾರ ಆ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಹೆಸರುಘಟ್ಟ ಹುಲ್ಲುಗಾವಲು ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶವನ್ನಾಗಿ ಘೋಷಿಸಲು ನಿರ್ಧರಿಸಲಾಗಿದೆ ಎಂದರು.

2021ರ ಜನವರಿಯಲ್ಲಿ ನಡೆದಿದ್ದ 15ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿತ್ತು. ಆದರೆ, ರಾಜ್ಯ ಹೈಕೋರ್ಟ್‌ ಈ ಕುರಿತಂತೆ ಮರುಪರಿಶೀಲಿಸುವಂತತೆ ಸೂಚಿಸಿತ್ತು. ಹೀಗಾಗಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ ಪರಿಸರವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೆಸರುಘಟ್ಟ ಹುಲ್ಲುಗಾವಲನ್ನು ಮೀಸಲು ಪ್ರದೇಶವನ್ನಾಗಿ ಘೋಷಿಸಲಾಗುತ್ತಿದೆ ಎಂದು ಹೇಳಿದರು.

ಇದರ ಪರಿಣಾಮವೇನು?:

ಮಂಡಳಿಯ ಈ ನಿರ್ಧಾರದಿಂದಾಗಿ ಹೆಸರಘಟ್ಟ ಹುಲ್ಲುಗಾವಲಿನ 356 ಎಕರೆ, ಬೈರಾಪುರ ಕೆರೆಯ 383 ಎಕರೆ, ಬೈತಾ ಕೆರೆಯ 165 ಎಕರೆ, ಹೆಸರಘಟ್ಟ ಕೆರೆಯ 1,356 ಎಕರೆ, ಪಶುಸಂಗೋಪನಾ ಇಲಾಖೆ ಸ್ವಾಧೀನದಲ್ಲಿರುವ 2,750 ಎಕರೆ ಸೇರಿ ಒಟ್ಟು 5,010 ಎಕರೆ ಪ್ರದೇಶವನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ಸೆಕ್ಷನ್ 36ಎ ಪ್ರಕಾರ ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶವನ್ನಾಗಿ ಘೋಷಿಸಲಾಗುತ್ತಿದೆ ಎಂದು ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ