ಅಜೀಜಅಹ್ಮದ ಬಳಗಾನೂರ
ತಾಲೂಕಿನ ನೂಲ್ವಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಯಶಸ್ವಿಯಾಗಿ ನಡೆಯುತ್ತಿರುವ ಹಳ್ಳಿಮಾರ್ಟ್ ಗ್ರಾಮೀಣ ಆರ್ಥಿಕತೆ ಬಲಪಡಿಸುವ ಜತೆಗೆ ರೈತರು ಹಾಗೂ ಗ್ರಾಹಕರಿಗೆ ಅನುಕೂಲಕರ ವೇದಿಕೆಯಾಗಿ ಗಮನ ಸೆಳೆಯುತ್ತಿದೆ. ಈ ರೀತಿ ಸಹಕಾರಿ ಸಂಘದಡಿ ಹಳ್ಳಿಮಾರ್ಟ್ ನಡೆಯುತ್ತಿರುವುದು ರಾಜ್ಯದಲ್ಲೇ ಮೊದಲು.
ಸಂಘದ ಸದಸ್ಯರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಕೃಷಿಕನಿಂದ ಹಿಡಿದು ಅಡುಗೆ ಮನೆಯ ವರೆಗೆ ಎಲ್ಲ ಸಾಮಾಗ್ರಿಗಳ ಒಂದೇ ಸೂರಿನಡಿಯಲ್ಲಿ ದೊರೆಯುವ ವ್ಯವಸ್ಥೆ ಮಾಡಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹುಸೇವಾ ಕೇಂದ್ರಗಳನ್ನಾಗಿ (PACS As MSC) ಪರಿವರ್ತಿಸುವ ನಬಾರ್ಡ ಯೋಜನೆಯ ಅಡಿಯಲ್ಲಿ ₹ 80 ಲಕ್ಷ ವೆಚ್ಚದಲ್ಲಿ “ರೈತ ಸಹಕಾರ ಭವನ” ಹೆಸರಿನಲ್ಲಿ ಉಗ್ರಾಣ ಹಾಗೂ ವಾಣಿಜ್ಯ ಮಳಿಗೆ ನಿರ್ಮಿಸಿದೆ. ಈ ಕಟ್ಟಡದಲ್ಲಿ ಸೊಸೈಟಿ ಬಜಾರ್ ಜತೆಗೆ ಕೃಷಿ ಪರಿಕರಗಳ ಮಳಿಗೆ (ಕೃಷಿ ಸಂಬಂಧಿಸಿದ ಸಲಕರಣಿಗಳು ಮತ್ತು ಔಷಧಿ) ಖರೀದಿಸಲು ಒಂದೇ ಸೂರಿನಡಿಯಲ್ಲಿ ಸೌಲಭ್ಯ ಕಲ್ಪಿಸಿದ್ದು 2025ರ ಫೆ. 17ರಂದು ಈ ಹಳ್ಳಿಮಾರ್ಟ್‌ಗೆ ಚಾಲನೆ ನೀಡಲಾಗಿದೆ.ಇಲ್ಲಿ ಎಲ್ಲ ಗೃಹ ಬಳಕೆ ವಸ್ತುಗಳನ್ನು ಉತ್ತಮ ದರ ಹಾಗೂ ಯೋಗ್ಯ ಬೆಲೆಯಲ್ಲಿ ನೀಡಲಾಗುತ್ತಿದೆ. ಪಟ್ಟಣ ಪ್ರದೇಶದಲ್ಲಿ ಕಾಣುವ ಮೋರ್ ನಂತಹ ಸೂಪರ್ ಮಾರ್ಕೆಟ್‌ಗಳು ನೂಲ್ವಿ ಗ್ರಾಮದಲ್ಲಿ ಕಾಣಸಿಗುತ್ತಿರುವುದು ರಾಜ್ಯದಲ್ಲಿಯೇ ಇದೇ ಗ್ರಾಮದಲ್ಲಿ ಮೊದಲು ಎಂಬುದು ವಿಶೇಷ.
ಈ ಮಾರ್ಟ್‌ನಲ್ಲಿ ಅಕ್ಕಿ, ಗೋಧಿ ಹಿಟ್ಟು, ಬೇಳೆಕಾಳು, ಅಡುಗೆ ಎಣ್ಣೆ, ಮಸಾಲೆ ಪದಾರ್ಥ, ಸಕ್ಕರೆ ಮತ್ತು ಚಹಾಪುಡಿ, ಬಿಸ್ಕತ್, ನೂಡಲ್ಸ್, ಚಾಕೊಲೇಟ್, ಬ್ರೆಡ್ ಮತ್ತು ಲಘು ಆಹಾರ, ಸೋಪು, ಶಾಂಪೂ, ಫೇಸ್‌ವಾಶ್, ಸನ್‌ಸ್ಕ್ರೀನ್ ಮತ್ತು ಇತರೆ ಸೌಂದರ್ಯ ವರ್ಧಕ, ಡಿಟರ್ಜೆಂಟ್, ನೆಲ ಒರೆಸುವ ದ್ರವಗಳು, ಪಾತ್ರೆ ತೊಳೆಯುವ ಸೋಪುಗಳು ಮತ್ತು ಟಾಯ್ಲೆಟ್ ಕ್ಲೀನರ್, ಪ್ಲಾಸ್ಟಿಕ್ ಡಬ್ಬಿ, ಅಡುಗೆ ಮನೆಗೆ ಬೇಕಾದ ಸಣ್ಣ ಪಾತ್ರೆ ಮತ್ತು ಸ್ಟೇಷನರಿ ವಸ್ತುಗಳು ಮಾರಾಟಕ್ಕೆ ಲಭ್ಯವಿದೆ. ಜತೆಗೆ ಕೃಷಿ ಪರಿಕರಗಳ ವಿತರಣೆ, ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಟಕ ಮತ್ತು ತಾಡಪತ್ರೆ, ಸಹಕಾರ ಸಂಘಗಳಿಗೆ ಹೊಲಸೇಲ್ ಗೊಬ್ಬರ ಮಾರಾಟ. ಇ-ಸ್ಟಾಂಪ್ ಸೇವಾ ಸೌಲಭ್ಯ. ಸರ್ಕಾರದ ಪಡಿತರ ವಿತರಣೆ. ಕೃಷಿ ಉಪಕರಣಗಳ ಮಾರಾಟ ವ್ಯವಸ್ಥೆ ಕಲ್ಪಿಸಿದೆ.
ಈ ಸೊಸೈಟಿ ಬಜಾರ್‌ಗೆ ನೂಲ್ವಿ ಅಷ್ಟೇ ಅಲ್ಲದೇ ಅದರಗುಂಚಿ, ಶೆರೇವಾಡ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮದ ಗ್ರಾಹಕರು ಆಗಮಿಸುತ್ತಾರೆ. ನಿತ್ಯ ಕನಿಷ್ಟ ₹ 25 ಸಾವಿರಕ್ಕೂ ಅಧಿಕ ವಹಿವಾಟು ನಡೆಸುತ್ತಿದೆ. ಮೋರ್, ಬಿಗ್ ಬಜಾರ್‌ನಂತೆ ಹಬ್ಬ-ಹರಿದಿನಗಳಲ್ಲಿ ಈ ಮಾರ್ಟ್‌ನಲ್ಲೂ ವಿಶೇಷ ರಿಯಾಯ್ತಿ ಕೊಡುಗೆ ನೀಡಲಾಗುತ್ತಿದೆ. ಈ ಬಜಾರ್ ಆರಂಭವಾದಾಗಿನಿಂದ ಗ್ರಾಮಸ್ಥರು ಅಗತ್ಯ ವಸ್ತುಗಳ ಖರೀದಿಗಾಗಿ ನಗರಗಳಿಗೆ ತೆರಳುವ ಅವಶ್ಯಕತೆ ಕಡಿಮೆಯಾಗಿದೆ. ಇದರಿಂದ ಸಮಯ ಮತ್ತು ಹಣದ ಉಳಿತಾಯವಾಗುತ್ತಿದೆ.
ಕಲ್ಲನಗೌಡ ಮೂಗಣ್ಣವರ, ನೂಲ್ವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ
ಪರಶುರಾಮ ಹೆಬ್ಬಳ್ಳಿ, ನೂಲ್ವಿ ಗ್ರಾಮದ ರೈತ