ಹಟ್ಟಿ ಚಿನ್ನದಗಣಿ ಒಡಲಲ್ಲಿ ಉದ್ಭವಿಸಿದ ಗಣಪನಾಕೃತಿ: ಕಾರ್ಮಿಕರಿಂದ ನಿತ್ಯ ಶ್ರದ್ಧಭಕ್ತಿ ಪೂಜೆ

KannadaprabhaNewsNetwork |  
Published : Nov 25, 2024, 01:01 AM IST
24ಹಟ್ಟಿಚಿನ್ನದಗಣಿ1 | Kannada Prabha

ಸಾರಾಂಶ

ಹಟ್ಟಿಚಿನ್ನದಗಣಿ ಕಂಪನಿಯ ಮಲ್ಲಪ್ಪ ಶಾಫ್ಟಿನ ಕಲ್ಲಿನಲ್ಲಿ ಗಣಪತಿ ಮೂರ್ತಿಯೊಂದು ಉದ್ಭವಿಸಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಹಟ್ಟಿ ಚಿನ್ನದಗಣಿ

ಹಟ್ಟಿಚಿನ್ನದಗಣಿ ಕಂಪನಿಯ ಮಲ್ಲಪ್ಪ ಶಾಫ್ಟಿನ ಕಲ್ಲಿನಲ್ಲಿ ಗಣಪತಿ ಮೂರ್ತಿಯೊಂದು ಉದ್ಭವಿಸಿದ್ದು, ಕಾರ್ಮಿಕ ವಲಯದಲ್ಲಿ, ಗಣಿ ಕಂಪನಿ ಆಡಳಿತ ವರ್ಗದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಶಾಫ್ಟಿನ 2,200 ಅಡಿ ಆಳದಲ್ಲಿ ಬ್ಲಾಸ್ಟ್ ಮಾಡುವಾಗ ಕಲ್ಲಿನಲ್ಲಿ ಕೆಲ ವರ್ಷಗಳ ಹಿಂದೆ ಗಣಪತಿ ಮುಖ ಹೋಲುವಂತ ಆಕಾರ ಕಲ್ಲಿನಲ್ಲಿ ಮೂಡಿದೆ. ಸಾಮಾನ್ಯವಾಗಿ ಕಲ್ಲನ್ನು ಬ್ಲಾಸ್ಟ್ ಮಾಡಿ ಅದಿರನ್ನು ಹೊರ ತೆಗೆಯುವ ಸಮಯದಲ್ಲಿ ಸ್ಫೋಟಗೊಂಡ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬೀಳುವುದು ಹಾಗೂ ಉಳಿದ ಕಲ್ಲು ಕೊಕ್ಕೆಯಾಗಿ ಬೀಳುವುದು ಸಹಜ. ಈ ಹಿಂದೆ ಗಣಿ ವ್ಯವಸ್ಥಾಪಕರಾಗಿದ್ದ ಪಿ.ತ್ಯಾಗರಾಜ್ ಎನ್ನುವವರು ಅದನ್ನು ಗಣಪನೆಂದು ಗುರುತಿಸಿ ಪೂಜಿಸಿದ್ದರು. ಅಂದಿನಿಂದ ಅದೇ ನಂಬಿಕೆ ಮೇಲೆ ಕಾರ್ಮಿಕರು ಸಹಿತ ಅದಕ್ಕೆ ಪೂಜಿಸುತ್ತಾ ಬಂದಿದ್ದರು. ಸದರಿ ಆಕಾರವನ್ನು ಯಾರೂ ಕೆತ್ತನೆ ಮಾಡಿಲ್ಲ. ಇರುವ ಆಕಾರಕ್ಕೆ ಆದರೆ ಇತ್ತೀಚೆಗೆ ಪ್ರಭುಸ್ವಾಮಿ ಎನ್ನುವ ಕಾರ್ಮಿಕರೋರ್ವರು ಉದ್ಭವಿಸಿದ ಗಣೇಶನ ಅಂಗಾಂಗಳಿಗೆ ಬಣ್ಣ ಹಚ್ಚಿದ ನಂತರ ಆಕಾರ ಸ್ಪಷ್ಟವಾಗಿದೆ. ಸದ್ಯ ಉದ್ಭವ ಗಣಪನನ್ನು ಅತಿ ಭಕ್ತಿ ಭಾವದಿಂದ ಕಾರ್ಮಿಕರು ಪೂಜಿಸುತ್ತಿದ್ದಾರೆ. 2,200 ಅಡಿಯಲ್ಲಿ ಕ್ರಷಿಂಗ್ (ಅದಿರನ್ನು ಪುಡಿ ಮಾಡುವುದು) ಮಾಡಿ ಬೆಲ್ಟ್ ಮೂಲಕ ಅದನ್ನು ಮಿಲ್ ವಿಭಾಗಕ್ಕೆ ಸಂಸ್ಕರಿಸಲು ಕಳಿಸುವುದು ಕಾರ್ಯ ನಡೆದಿದೆ. ಸದ್ಯ ಇಲ್ಲಿ ಆಗೊಮ್ಮೆ ಈಗೊಮ್ಮೆ ಕ್ರಷಿಂಗ್ ಕಾರ್ಯ ನಡೆದಿದೆ. ಕಂಪನಿಯಲ್ಲಿ ಮಿಷನ್ ಇರುವಲ್ಲಿ ಹಾಗೂ ಕ್ರಷಿಂಗ್ ನಡೆಯುವ ಪ್ರತಿಸ್ಥಳದಲ್ಲಿಯೂ ಹಾಗೂ ಭೂ ಮೇಲ್ಮೈ, ಕೆಳಮೈ ಹಾಗೂ ತಾಂತ್ರಿಕ, ಆಡಳಿತ ಸೇರಿದಂತೆ ಪ್ರತಿ ವಿಭಾಗದಲ್ಲಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಲಾಗಿರುವುದು ವಿಶೇಷ. ಕಂಪನಿ ಆಡಳಿತವರ್ಗ, ಕಾರ್ಮಿಕ ಸಂಘ ಹಾಗೂ ಸಿಬ್ಬಂದಿ ಹಾಗೂ ಕಾರ್ಮಿಕರು ಧರ್ಮ- ಜಾತ್ಯತೀತವಾಗಿ ದೇವಿಗೆ ಆರಾಧಿಸುವುದು ಮಾದರಿ ಮತ್ತು ವಿಶೇಷ. ಅದರಲ್ಲೂ ದಸರಾ ನವರಾತ್ರಿ ಸಮಯದಲ್ಲಿ ಇಡಿ ಗಣಿ ಕಂಪನಿಯ ಎಲ್ಲಾ ವಿಭಾಗಗಳಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿರುತ್ತದೆ. ಹಟ್ಟಿಚಿನ್ನದಗಣಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ರಾಯಮಾಜಿ ಮಾತನಾಡಿ, ಕೆಲ ವರ್ಷಗಳ ಹಿಂದೆ ಬ್ಲಾಸ್ಟ್ ಮಾಡಿದಾಗ ಕಲ್ಲಿನ ಮಧ್ಯೆ ವಿನಾಯಕನ ಆಕಾರ ಕಂಡುಬಂದಿದೆ. ದೊರೆತದ್ದು ದೈವ ಇಚ್ಛೆ. ಗಣಿಯ ಸುರಕ್ಷತೆ ದೃಷ್ಟಿಯಿಂದ ಕಂಪನಿಯ ಪ್ರತಿ ವಿಭಾಗದಲ್ಲಿಯೂ ದೇವಿಯನ್ನು ಭಯ ಭಕ್ತಿಯಿಂದ ಆರಾಧಿಸುವುದು ವಿಶೇಷ. ಅಂತೆಯೇ ಈ ಉದ್ಭವ ಗಣಪನನ್ನು ಸಹಿತ ಪೂಜಿಸುತ್ತಿದ್ದೇವೆ ಎಂದು ಹೇಳಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ