ಯಲ್ಲಾಪುರ: ಸಾಹಿತ್ಯವು ಅನುಭವಗಳ ಪ್ರತಿಬಿಂಬ. ಅಕ್ಷರದ ಉತ್ಕಟತೆ ಸಮಾಜವನ್ನು ತಲುಪಲು ಸಾಹಿತ್ಯ ಸಹಕಾರಿಯಾಗಿದ್ದು ಕೃತಿಯು ಓದುಗರನ್ನು ತಲುಪುವುದರ ಹಿಂದೆ ಸಮಾಜದಲ್ಲಿ ಪರಂಪರೆಯ ಪ್ರಜ್ಞೆ ಮೂಡಿಸುವುದೇ ಆಗಿದೆ ಎಂದು ರಾಷ್ಟ್ರೀಯ ಸ್ವಯಂ ಸಂಘದ ವಕ್ತಾರ ಡಿ.ಎಸ್. ಭಟ್ಟ ಶೇವ್ಕಾರ ಹೇಳಿದರು.
ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಸ್ವಾಮಿ ವಿವೇಕಾನಂದ ಸಾಹಿತ್ಯ ಬಳಗ ವಜ್ರಳ್ಳಿ ಹಾಗೂ ಸರ್ವೋದಯ ವಿದ್ಯಾರ್ಥಿ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವನರಾಗ ಶರ್ಮಾ ಅವರ ಹಿಂದಿ ಅನುವಾದಿತ ಕೃತಿ "ಮಾರನೆಯ ಮುಂಜಾನೆ ಮತ್ತು ಪ್ರೇಮದ ಹಾದಿ " ಕಥಾಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.ಅರ್ಪಣೆಯ ಮನೋಭಾವ, ಜೀವನದ ಅನುಭವಗಳ ಸಮೂಹವು ವನರಾಗ ಶರ್ಮಾ ಸಾಹಿತ್ಯದಲ್ಲಿ ಮುನ್ನೆಲೆಗೆ ಬಂದಿದೆ. ಅನೇಕ ಸೂಕ್ಷ್ಮ ಸಂಗತಿಗಳನ್ನು ಸಾಹಿತ್ಯದ ನೆಲೆಯಲ್ಲಿ ತೆರೆದಿಡುವ ಇಲ್ಲಿಯ ಕಥೆಗಳು ಸಾರ್ವಕಾಲಿಕ ಸತ್ಯದ ಸಾಮಾಜಿಕ ಧ್ವನಿಯಾಗಿ ದಾಖಲೆಯಾಗಿದೆ. ಇಲ್ಲಿಯ ಕಥೆಗಳು ಸಂಸ್ಕೃತಿಯ ಭಾಗವೇ ಆಗಿದೆ. ನೆಲದ ಸತ್ವಯುತ ಭಾಷೆಯನ್ನು ದುಡಿಸಿಕೊಂಡ ಹೆಗ್ಗಳಿಕೆಗೆ ಕಥೆಗಳು ಪಾತ್ರವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಅಖಿಲ ಸಾಹಿತ್ಯ ಪರಿಷತ್‌ನ ಯಲ್ಲಾಪುರ ಘಟಕದ ಅಧ್ಯಕ್ಷ ಜಿ.ಎಸ್. ಗಾಂವ್ಕರ ಮಾತನಾಡಿ, ಮುಗ್ಧ ಹೃದಯಕ್ಕೆ ಸಾಹಿತ್ಯದ ಪರಿಭಾಷೆ ಅರ್ಥವಾಗಬೇಕು. ನಿರಂತರ ಸಾಹಿತ್ಯದ ಓದು ಮಾನವೀಯತೆಗೆ ಸ್ಪಂದಿಸುವ ಗುಣ ಹೃದಯವನ್ನು ಬಲಪಡಿಸುವುದು ಎಂದರು.ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಡಿ.ಜಿ. ಭಟ್ಟ ಮಾತನಾಡಿ, ಸಾಹಿತ್ಯದ ಸತತ ಅಧ್ಯಯನದ ಸಂವೇದನೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ. ಮನಸ್ಸನ್ನು ವಿಕಾಸಗೊಳಿಸುವ ಸಾಹಿತ್ಯದ ಓದು, ಬರವಣಿಗೆ ನಮ್ಮನ್ನು ಬೆಳೆಸಬಲ್ಲದು ಎಂದರು.
ಸ.ಶಿ ಸಮಿತಿ ಸದಸ್ಯ ಅಪ್ಪಣ್ಣ ಭಟ್ಟ ಬೆಣ್ಣೆಜಡ್ಡಿ, ದತ್ತಾತ್ರೇಯ ಭಟ್ಟ ಉಪಸ್ಥಿತರಿದ್ದರು. ಪುಸ್ತಕ ಕರ್ತೃ ವನರಾಗ ಶರ್ಮಾ ಮಾತನಾಡಿ, ಕವಿತೆ ವಾಚಿಸಿದರು. ಕವಿಗೋಷ್ಠಿಯಲ್ಲಿ ಕಾವ್ಯ ಪಟಗಾರ, ಕೃತಿಕಾ ಹುಲಸ್ವಾರ, ಋತು ಭಟ್ಟ, ಮೈತ್ರಿ ಗಾಂವ್ಕರ, ಯೋಗರಾಜ್ ಹುಲಸ್ವಾರ, ಪ್ರಿಯಾ, ಮೇಘಾ ಶೆಟ್ಟಿ, ಕಾವ್ಯ ಗೌಡ, ಶಿಕ್ಷಕಿ ಸರೋಜಾ ಭಟ್ಟ, ಸೀಮಾ ಗೌಡ ಕವನ ವಾಚಿಸಿದರು.ನಾಗಶ್ರೀ ಹೆಬ್ಬಾರ್ ಸಂಗಡಿಗರು ಪ್ರಾರ್ಥಿಸಿದರು. ಕನ್ನಡ ಸಾಹಿತ್ಯ ವಿಭಾಗದ ಶಿಕ್ಷಕಿ ಸೀಮಾ ಗೌಡ ನಿರ್ವಹಿಸಿದರು. ಮುಖ್ಯಾಧ್ಯಾಪಕ ಎಂ.ಕೆ. ಭಟ್ಟ ಸ್ವಾಗತಿಸಿದರು. ಜಿ.ಎನ್. ಕೋಮಾರ ವಂದಿಸಿದರು.