ಕನ್ನಡಪ್ರಭವಾರ್ತೆ ದೇವದುರ್ಗ
ವಿವಿಧ ಬೇಡಿಕೆ ಈಡೇರಿಕೆಗಾಗಿ ಭಾರತ್ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್‌ವಾದಿ ತಾಲೂಕು ಸಮಿತಿ ಪದಾಧಿಕಾರಿಗಳು ಪ್ರತಿಭಟಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಬರೆದ ಮನವಿ ಪತ್ರ ತಹಸೀಲ್ದಾರ್ ಚನ್ನಮಲ್ಲ ಘಂಟಿ ಮುಖಾಂತರ ಸಲ್ಲಿಸಿದರು.
ಸಿಐಟಿಯು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಮಾತನಾಡಿ, ಮುಂಗಾರು-ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರಾಜ್ಯದಲ್ಲಿ ಬರಗಾಲ ಎದುರಾಗಿದೆ. ಸಕಾಲಕ್ಕೆ ಬರಗಾಲ ಅನುದಾನ ನೀಡದೇ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ರಾಜ್ಯಗಳು ತಮ್ಮ ತೆರಿಗೆ ಹಾಗೂ ಸಂಪನ್ಮೂಲಗಳ ಪಾಲು ಪಡೆಯಲು ಕೇಂದ್ರ ಸರ್ಕಾರ ಅಡ್ಡಿಯಾಗಬಾರದು. ಕರ್ನಾಟಕ ಹಾಗೂ ಕೇರಳ ಸರ್ಕಾರಗಳು ಒಕ್ಕೂಟ ಸರಕಾರದ ಕಿರುಕುಳ ಹಾಗೂ ತಾರತಮ್ಯ ನೀತಿ ವಿರುದ್ಧ ಹೆದಲಿಯಲ್ಲಿ ನಡೆಸಿದ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.
ಕೇಂದ್ರ ಪ್ರಾಯೋಜಿತ ಯೋಜನೆಗಳ ವಿಷಯಗಳಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬಾರದು. ರಾಜ್ಯ ಸರ್ಕಾರಗಳಿಗೆ ನೀಡಬೇಕಾದ ತೆರಿಗೆ ಅನುದಾನ ಕೇಂದ್ರ ಸರ್ಕಾರ ನೀಡದೇ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲ್ಪಿಸಬೇಕಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನರಸಣ್ಣ ನಾಯಕ, ಶಬ್ಬೀರ ಜಾಲಹಳ್ಳಿ, ಸಂಗಮೇಶ ಮೂಲಿಮನಿ, ಮೌನೇಶ ಜಾಲಹಳ್ಳಿ, ಮುಕ್ತಾಮ್ ಪಾಷ್, ಲಿಂಗಣ್ಣ ಮಕಾಶಿ, ರಮ್ಯಾದೇವಿ, ಬಸವರಾಜ ವಂದ್ಲಿ, ಶಿವಪ್ಪ, ಬಸ್ಸಪ್ಪ, ಶಾಂತಪ್ಪ, ರಂಗನಾಥ ಸೇರಿದಂತೆ ಇತರರು ಇದ್ದರು.