ಐತಿಹಾಸಿಕ ಬಸವಣ್ಣ ಕಾಲುವೆ ಗೋಳಿನ ಕಥೆ ವ್ಯಥೆ

KannadaprabhaNewsNetwork |  
Published : Nov 09, 2024, 01:21 AM IST
8ಎಚ್‌ಪಿಟಿ1- ಹೊಸಪೇಟೆಯ ಐತಿಹಾಸಿಕ ಬಸವಣ್ಣ ಕಾಲುವೆಯಲ್ಲಿ ಸೇರಿರುವ ತ್ಯಾಜ್ಯವನ್ನು ಜೆಸಿಬಿ ಬಳಸಿ ತೆಗೆಯಲಾಗುತ್ತಿದೆ. | Kannada Prabha

ಸಾರಾಂಶ

ನನ್ನ ಒಡಲಿಗೆ ಮನೆಗಳ ಗಲೀಜು ನೀರು, ಹೋಟೆಲ್‌ಗಳ ಮಲಿನ ನೀರು, ಮಳೆನೀರು ಸೇರಿದಂತೆ ಎಲ್ಲ ಹೊಲಸು ನೀರು ಬಿಡಲಾಗುತ್ತಿದೆ.

ಹೊಸಪೇಟೆ: ಐತಿಹಾಸಿಕ ವಿಜಯನಗರ ಸಾಮ್ರಾಜ್ಯದಲ್ಲಿ ಹೆಮ್ಮೆಯ ಕಾಲುವೆಯಾಗಿದ್ದ ನಾನು, ಅಂದರೆ ಬಸವಣ್ಣ ಕಾಲುವೆ, ಈಗ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯ ದೊಡ್ಡ ರಾಜಕಾಲುವೆಯಾಗಿ ಮಾರ್ಪಾಡಾಗಿರುವೆ!

ನನ್ನ ಒಡಲಿಗೆ ಮನೆಗಳ ಗಲೀಜು ನೀರು, ಹೋಟೆಲ್‌ಗಳ ಮಲಿನ ನೀರು, ಮಳೆನೀರು ಸೇರಿದಂತೆ ಎಲ್ಲ ಹೊಲಸು ನೀರು ಬಿಡಲಾಗುತ್ತಿದೆ. ಹೊಸಪೇಟೆ ನಗರಸಭೆ ಸ್ಥಾಪನೆಯಾಗಿ ನೂರು ವರ್ಷ ಕಳೆದಿದೆ. ಆದರೂ ಒಂದು ಪ್ರತ್ಯೇಕ ಚರಂಡಿಗೆ ವ್ಯವಸ್ಥೆ ಮಾಡಿಲ್ಲ. ಊರಿನ ಹೊಲಸು ತಂದು ಎಲ್ಲ ನನ್ನ ಮಡಿಲಿಗೆ ಹಾಕಲಾಗುತ್ತಿದೆ. ಊರು ಬೆಳೆಯುತ್ತಾ, ಜಿಲ್ಲೆಯೂ ಆಗಿದೆ. ಆದರೂ ನನ್ನ ಸಮಸ್ಯೆ ಯಾರಿಗೂ ಕಾಣುತ್ತಿಲ್ಲ.

ಅಂದಹಾಗೆ ನಾನು ಬಸವಣ್ಣ ಕಾಲುವೆ ಹುಟ್ಟಿದ್ದು ವಿಜಯನಗರದ ಆಳರಸರ ಕಾಲದಲ್ಲಿ. ಆಗ ನನಗೆ ಇದ್ದ ರಾಜ ಮರ್ಯಾದೆ ಈಗಿಲ್ಲ. ಈಗ ಬರೀ ಚರಂಡಿಯಾಗಿರುವೆ. ನಾನು ಪ್ರತಿ ವರ್ಷ 11 ತಿಂಗಳು ವಿಜಯನಗರದ ಹೊಸಪೇಟೆಯ ಮಲಪನಗುಡಿ, ಅನಂತಶಯನಗುಡಿ, ಕೊಂಡನಾಯಕನಹಳ್ಳಿ ಭಾಗದ ರೈತರ ಜಮೀನುಗಳಿಗೆ ನೀರು ಒದಗಿಸುವೆ. ಪ್ರತಿದಿನ 140 ಕ್ಯುಸೆಕ್‌ವರೆಗೂ ನೀರು ರೈತರ ಜಮೀನುಗಳಿಗೆ ಸಾಗಿಸುವೆ. ನನ್ನ ಒಟ್ಟು ವಿಸ್ತೀರ್ಣ ತುಂಗಭದ್ರಾ ಜಲಾಶಯದಿಂದ 16 ಕಿ.ಮೀ. ಇದೆ. ರೈತರು ನೀರು ತೆಗೆದುಕೊಳ್ಳದಿದ್ದರೆ ಕಮಲಾಪುರ ಕೆರೆಗೆ ನೀರು ಒದಗಿಸುವೆ. ಆಗ ವಿಜಯನಗರದ ಆಳರಸರ ಕಾಲದಲ್ಲೇ ನನ್ನನ್ನು ನಿರ್ಮಾಣ ಮಾಡಿದಾಗಲೇ ಈ ಯೋಜನೆ ರೂಪಿಸಲಾಗಿದೆ. ಈಗ ನನ್ನ ಸ್ಥಿತಿ ನೋಡಿ, ನನಗೆ ಅಸಹ್ಯ ಹುಟ್ಟುತ್ತಿದೆ. ಕಾಲ ಬದಲಾಯಿತು. ವಿಜಯನಗರ ಸಾಮ್ರಾಜ್ಯ ಪತನಗೊಂಡು, ಮದ್ರಾಸ ಪ್ರಾಂತ್ಯದ ಆಡಳಿತ ನಡೆಯಿತು. ಆಗಲೂ ನನಗೆ ಗೌರವ ಇತ್ತು. ಈವಾಗ ಮಾತ್ರ ನನ್ನ ಸ್ಥಿತಿ ಅಧೋಗತಿಗೆ ತಲುಪಿದೆ.

ಕಳೆದ ಎರಡು ದಿನಗಳಿಂದ ನನ್ನ ಒಡಲಿನಲ್ಲಿರುವ ತ್ಯಾಜ್ಯ ತೆಗೆಯಲಾಗುತ್ತಿದೆ. ಜಲಾಶಯದಿಂದ ನೀರು ಕೂಡ ನಿಲ್ಲಿಸಲಾಗಿದೆ. ಆದರೂ ಚರಂಡಿ ನೀರು ಮಾತ್ರ ನಿಂತಿಲ್ಲ. ಮನೆಗಳಿಂದ ನೀರು ಬಿಡುತ್ತಲೇ ಸಾಗಿದ್ದಾರೆ. ನೀರಾವರಿ ಇಲಾಖೆಯಿಂದ ಜೆಸಿಬಿ ತಂದು ಕಸ ತೆಗೆಯಲಾಗುತ್ತಿದೆ. ಮೋಟರ್‌ ಇಟ್ಟು ನೀರು ಹೊರ ಹಾಕಲಾಗುತ್ತಿದೆ. ಆದರೂ ಚರಂಡಿ ಅಂತ ತಿಳಿದು ಗಲೀಜು ನೀರು ಬಿಡುವುದು ನಿಂತೇ ಇಲ್ಲ. ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ನನ್ನ ನೋಡಿಕೊಂಡು ಹೋಗುತ್ತಿದ್ದಾರೆ. ಆದರೂ ವಿಜಯನಗರ ಕಾಲದ ಕಾಲುವೆ, ಮಲಿನ ನೀರು ನಿಲ್ಲಿಸೋಣ ಎಂದು ಯಾರೂ ಕ್ರಮಕೈಗೊಳ್ಳುತ್ತಿಲ್ಲ. ಚರಂಡಿಗಾಗಿ ಪ್ರತ್ಯೇಕ ಯೋಜನೆ ರೂಪಿಸಿಲ್ಲ. ಹೊಸ ಹೊಸ ಬಡಾವಣೆಗಳು ಆಗುತ್ತಲೇ ಸಾಗಿವೆ. ಅವು ನಳನಳಿಸುತ್ತಿವೆ. ಗಲೀಜು ನೀರು ಮಾತ್ರ ನನ್ನ ಒಡಲಿಗೆ ಹಾಕಲಾಗುತ್ತಿದೆ. ಯಾರ ಮುಂದೆ ನನ್ನ ಗೋಳು ಹೇಳಿಕೊಳ್ಳಬೇಕು ಎಂಬುದೇ ತಿಳಿಯುತ್ತಿಲ್ಲ.

ವಿಜಯನಗರದ ಅರಸರ ಕಾಲದಿಂದಲೂ ಬರೋಬ್ಬರಿ 3 ಸಾವಿರ ಎಕರೆಗೆ ನೀರು ಒದಗಿಸುತ್ತಾ ಬಂದಿರುವೆ. ನನ್ನ ನೋಡಲು ಆಗ ದೊಡ್ಡ ದೊಡ್ಡ ಜಮೀನ್ದಾರರು, ರಾಜ ಕುಟುಂಬದವರು ಬರುತ್ತಿದ್ದರು. ಈಗ ಆಧುನಿಕ ಯುಗ ಎಂದು ನನಗೆ ಕಸದ ತೊಟ್ಟಿ ಮಾಡಲಾಗಿದೆ. ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ವರ್ಷದ 12 ತಿಂಗಳಲ್ಲಿ ಒಂದು ತಿಂಗಳು ಮಾತ್ರ ಅಲ್ಲಲ್ಲಿ ಕಸ ಬೆಳೆದಿರುವುದನ್ನು ತೆಗೆಯಲಾಗುತ್ತಿದೆ. ಸಣ್ಣ ಪುಟ್ಟ ರಿಪೇರಿ ಕೆಲಸ ನಡೆಸಲಾಗುತ್ತಿದೆ. ಆದರೆ, ಕಸ ಮುಕ್ತ ಕಾಲುವೆ ಮಾಡಲಾಗುತ್ತಿಲ್ಲ. ನನಗೆ ಹೊಸಪೇಟೆಯ ದೊಡ್ಡ ಚರಂಡಿ ಎಂಬ ಹಣೆಪಟ್ಟಿಯಿಂದ ಹೊರ ತರಬೇಕಿದೆ. ಇದಕ್ಕಾಗಿ ವಿಜಯನಗರದ ಅಧಿಕಾರಿಗಳು, ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು. ರಾಜರ ಕಾಲದಲ್ಲೇ ಬಂಡೆಗಲ್ಲುಗಳಿಂದ ಅಣೆಕಟ್ಟು ನಿರ್ಮಿಸಿ ರೈತರ ಜಮೀನುಗಳಿಗೆ ನೀರು ಹರಿಸಲಾಗುತ್ತಿತ್ತು. ಆಗ ಜನ್ಮತಳೆದಿರುವ ಕಾಲುವೆಗಳೇ ನಾವು. ಅಂದರೆ ರಾಯ, ಬಸವ, ಬೆಲ್ಲ, ತುರ್ತಾ ಮತ್ತು ಕಾಳಗಟ್ಟ ಕಾಲುವೆಗಳು. ಈ ಕಾಲುವೆಗಳಾದ ನಾವು ಈ ನೆಲದ ಚರಿತ್ರೆ ಸಾರಿ ಹೇಳುತ್ತಿವೆ. ಆದರೂ ನನ್ನ ಒಡಲಿಗೆ ಮಲಿನ ನೀರು, ತ್ಯಾಜ್ಯ ಬಂದು ಸೇರಿಕೊಳ್ಳುವಂತೆ ಮಾಡುತ್ತಿರುವುದು ಸರಿಯಲ್ಲ. ಮೊದಲು ನನ್ನನ್ನು ಕಸ, ಮುಕ್ತ, ಚರಂಡಿ ಮುಕ್ತ ಕಾಲುವೆ ಮಾಡಿ.

ಸ್ವಗತ: ಬಸವಣ್ಣ ಕಾಲುವೆ, ಹೊಸಪೇಟೆ

ವಿಜಯನಗರ ಜಿಲ್ಲೆ.

ನಿರೂಪಣೆ: ಕೃಷ್ಣ ಎನ್‌. ಲಮಾಣಿ

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ