ಒಕ್ಕಲೆಬ್ಬಿಸದಂತೆ ಪಾಲಿಕೆಗೆ ಬೀದಿಬದಿ ವ್ಯಾಪಾರಸ್ಥರ ಮುತ್ತಿಗೆ

KannadaprabhaNewsNetwork |  
Published : Sep 05, 2024, 12:33 AM IST
4ಕೆಡಿವಿಜಿ1, 2-ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದಂತೆ, ನೈಜ ಬೀದಿ ಬದಿ ವ್ಯಾಪಾರಸ್ಥರಿಗೆ ಸ್ಮಾರ್ಟ್‌ ಕಾರ್ಡ್ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜಿಲ್ಲಾ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಬುಧವಾರ ಬೀದಿ ಬದಿ ವ್ಯಾಪಾರಸ್ಥರು ಪ್ರತಿಭಟಿಸಿದರು.................4ಕೆಡಿವಿಜಿ3, 4-ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದಂತೆ, ನೈಜ ಬೀದಿ ಬದಿ ವ್ಯಾಪಾರಸ್ಥರಿಗೆ ಸ್ಮಾರ್ಟ್‌ ಕಾರ್ಡ್ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಜಿಲ್ಲಾ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ದಾವಣಗೆರೆ ಪಾಲಿಕೆಗೆ ಮುತ್ತಿಗೆ ಹಾಕಿರುವ ಬೀದಿ ಬದಿ ವ್ಯಾಪಾರಸ್ಥರು. | Kannada Prabha

ಸಾರಾಂಶ

ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದಂತೆ ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜಿಲ್ಲಾ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಬುಧವಾರ ವ್ಯಾಪಾರಸ್ಥರು ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೀದಿಬದಿ ವ್ಯಾಪಾರಿಗಳನ್ನು ಏಕಾಏಕಿ ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು, ಎಲ್ಲಾ ನೈಜ ಬೀದಿಬದಿ ವ್ಯಾಪಾರಸ್ಥರಿಗೆ ಸ್ಮಾರ್ಟ್‌ ಕಾರ್ಡ್ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರದಲ್ಲಿ ಬುಧವಾರ ಜಿಲ್ಲಾ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಸ್ಥರು ಪ್ರತಿಭಟಿಸಿದರು.

ನಗರದ ಚಾಮರಾಜ ಪೇಟೆ ವೃತ್ತದ ಬಳಿಯಿಂದ ಮಹಾನಗರ ಪಾಲಿಕೆ ಕಚೇರಿವರೆಗೆ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗುತ್ತಾ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ನಂತರ ಆಯುಕ್ತರಾದ ರೇಣುಕಾ ಅವರಿಗೆ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಪತ್ರ ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಸಂಘಟನೆ ಮುಖಂಡರು, ಬೀದಿಬದಿ ವ್ಯಾಪಾರಿಗಳನ್ನು ಏಕಾಏಕಿ ಒಕ್ಕಲೆಬ್ಬಿಸುವುದನ್ನು ತಕ್ಷಣ ನಿಲ್ಲಿಸಬೇಕು. ಎಲ್ಲಾ ನೈಜ ಬೀದಿಬದಿ ವ್ಯಾಪಾರಸ್ಥರಿಗೆ ತಕ್ಷಣ ಸ್ಮಾರ್ಟ್ ಕಾರ್ಡ್ ವಿತರಿಸಬೇಕು. ಜೀವನ ರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ-2014ನ್ನು ಸಮರ್ಪಕ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಸ್ಮಾರ್ಟ್ ಸಿಟಿ ಯೋಜನೆ ನೆಪದಲ್ಲಿ ಮರಗಳನ್ನು ಕಡಿದಿದ್ದರ ಪರಿಣಾಮ ಬೇಸಿಗೆಯಲ್ಲಿ ವಿಪರೀತ ತಾಪದಿಂದಾಗಿ ಸೊಪ್ಪು, ತರಕಾರಿ, ಹಣ್ಣು ಹಂಪಲು, ಆಹಾರ ಪದಾರ್ಥ ಕೆಲವೇ ಗಂಟೆಗಳಲ್ಲಿ ಒಣಗಿ ಹೋಗುತ್ತಿವೆ. ಮಳೆಗಾಲದಲ್ಲಿ ನೀರು ಬಿದ್ದು ಕೊಳೆತು ಹೋಗುತ್ತಿರುವುದರಿಂದ ಶಾಶ್ವತ ನೆರಳಿನ ವ್ಯವಸ್ಥೆ ಆಗಬೇಕು. ಅಲ್ಲಿವರೆಗೆ ತಾತ್ಕಾಲಿಕ ಹೊದಿಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ವ್ಯಾಪಾರಸ್ಥರ ಕಲ್ಯಾಣ ಮಂಡಳಿ ನಿಧಿ ಹೆಚ್ಚಿಸಿ, ಅದರಿಂದ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿ ಗುದ್ದಲಿ ಪೂಜೆ ಮಾಡಿ, ತಿಂಗಳುಗಳೇ ಆದರೂ ಈವರೆಗೆ ಕಾಮಗಾರಿ ಕೈಗೊಂಡಿಲ್ಲ. ತಕ್ಷಣ ಕಾಮಗಾರಿ ಆರಂಭಿಸಬೇಕು. ಹೊಸ ಮಾಲ್‌ಗಳಿಗೆ ಇನ್ನು ಮುಂದೆ ಅನುಮತಿನೀಡಬಾರದು. ಈಗಿರುವ ಮಾಲ್‌ಗಳಲ್ಲಿ ಚಿಲ್ಲರೆ ವ್ಯಾಪಾರ ನಿಷೇಧಿಸಲು ಆದೇಶಿಸಬೇಕು ಎಂದು ಮನವಿ ಮಾಡಿದರು.

ಆಶ್ರಯ ಮನೆಗಳನ್ನು ಬೀದಿಬದಿ ವ್ಯಾಪಾರಸ್ಥರಿಗೆ ನೀಡಬೇಕು. ನಕಲಿ ಬೀದಿಬದಿ ವ್ಯಾಪಾರಸ್ಥರ ಕಾರ್ಡ್‌ ನೀಡುತ್ತಿರುವ ಅಧಿಕಾರಿಗಳು ಮತ್ತು ಪಡೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಗರದ ವಾಯು ಮಾಲಿನ್ಯದಿಂದ ಅನೇಕ ಮಾರಕ ಕಾಯಿಲೆಗಳಿಗೆ ವ್ಯಾಪಾರಸ್ಥರು ತುತ್ತಾಗುತ್ತಿದ್ದು, ಅಂತಹವರಿಗೆ ಪ್ರತ್ಯೇಕ ವಿಮೆ ಮಾಡಿಸಬೇಕು. ಆಕಸ್ಮಾತ್ ಮರಣ ಹೊಂದಿದ ವ್ಯಾಪಾರಸ್ಥರ ಅವಲಂಬಿತ ಕುಟುಂಬಕ್ಕೆ ಕನಿಷ್ಠ ₹2 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರಮುಖ ಮಾರುಕಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ಕಲ್ಪಿಸಬೇಕು. ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಪಾಲಿಕೆ ವಾಹನಗಳಿಗೆ ಸಹಕರಿಸಲು ಸೂಚಿಸಬೇಕು. ಫುಟ್‌ಪಾತ್‌ ವ್ಯಾಪಾರಿ ಸ್ನೇಹಿ ರಸ್ತೆ ನಿರ್ಮಿಸಬೇಕು. ಜಕಾತಿ ವಸೂಲಾತಿ ಖಾಸಗಿಯವರಿಗೆ ನೀಡಬಾರದು. ಖಾಸಗಿಯವರು ಜಕಾತಿ ವಸೂಲಿ ಹೆಸರಿನಲ್ಲಿ ದೌರ್ಜನ್ಯ, ಶೋಷಣೆ ಮಾಡುವುದನ್ನು ಮೊದಲು ನಿಲ್ಲಬೇಕು ಎಂದು ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷ ಎಸ್.ಕೆ.ರಹಮತ್ತುಲ್ಲಾ, ಅಧ್ಯಕ್ಷ ಎಸ್‌.ಇಸ್ಮಾಯಿಲ್‌, ಕಾರ್ಯದರ್ಶಿ ದುಗ್ಗಪ್ಪ, ಉಪಾಧ್ಯಕ್ಷ ಎಚ್.ಸಿ.ಮಲ್ಲಪ್ಪ, ಮಹಿಳಾ ಅಧ್ಯಕ್ಷೆ ಶೀಲಾ ಶ್ರೀನಿವಾಸ, ಕಾರ್ಯದರ್ಶಿ ಕೆ.ಭಾರತಿ, ಎಸ್.ಈರಣ್ಣ, ರಿಯಾಜ್ ಅಹಮ್ಮದ್‌, ರವಿ, ಅಣಬೇರು ತಿಪ್ಪೇಸ್ವಾಮಿ, ಮಂಜುನಾಥ ಕುಕ್ಕವಾಡ, ಮಂಜುನಾಥ ಕೈದಾಳೆ, ಅನಿಲ್‌ ಇತರರು ಇದ್ದರು.

ಕೇಂದ್ರದ ಕಾಯ್ದೆ ಪಾಲಿಕೆ ಅರಿಯಲು ಸಲಹೆ!

ಕೇಂದ್ರ ಸರ್ಕಾರ ಬೀದಿ ಬದಿ ವ್ಯಾಪಾರಸ್ಥರ ಜೀವನ ಸಂರಕ್ಷಣೆ ಹಾಗೂ ನಿಯಂತ್ರಣ ಕಾಯ್ದೆ-2014ರ ಅನುಸಾರ 2-3 ದಶಕಕ್ಕೂ ಹೆಚ್ಚು ಅವಧಿಯ ದಾವಣಗೆರೆಯ ಕೆಆರ್‌ ಮಾರುಕಟ್ಟೆ ಗಡಿಯಾರ ಕಂಬ, ಬಾಪೂಜಿ ಆಸ್ಪತ್ರೆ ಸುತ್ತಮುತ್ತ, ಬೆಣ್ಣೆ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಬೀದಿಬದಿ ಮಾರುಕಟ್ಟೆಗಳನ್ನು ಪಾರಂಪರಿಕ ಮಾರುಕಟ್ಟೆಗಳಾಗಿ ಘೋಷಿಸಿ, ಅಭಿವೃದ್ಧಿಪಡಿಸಬೇಕು. ಯಾವುದೇ ಕಾರಣಕ್ಕೂ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಬಾರದು. ಒಕ್ಕಲೆಬ್ಬಿಸುವ ಮುನ್ನ ಕಾಯ್ದೆಯನುಸಾರ ಟಿವಿಸಿ ಸಮಿತಿ ಸಭೆಯಲ್ಲಿ ಪರಸ್ಪರ ಒಪ್ಪಿಗೆಯಾಗುವಂತೆ ಸುದೀರ್ಘವಾಗಿ ಚರ್ಚಿಸಿ, ವೆಂಡಿಂಗ್ ಝೋನ್ ಮಾಡಬೇಕು. ಅವೂ ಸಹ ಜನನಿಬಿಡ ಪ್ರದೇಶವಾಗಿದ್ದು, ವ್ಯಾಪಾರಕ್ಕೆ ಸೂಕ್ತವಾಗಿರಬೇಕು ಎಂಬುದಾದಿ ಕಾಯ್ದೆಯಲ್ಲಿ ಸ್ಪಷ್ಟವಾಗಿದೆ. ಇದನ್ನು ಪಾಲಿಕೆ ಗಮನಿಸಬೇಕು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ