ಹೊಸಪೇಟೆ: ಸಹಕಾರ ಸಂಸ್ಥೆಗಳು ಗ್ರಾಮೀಣ ಆರ್ಥಿಕತೆ ಬಲಪಡಿಸಿ, ಲಕ್ಷಾಂತರ ಕುಟುಂಬಗಳಿಗೆ ಸ್ವಾವಲಂಬನೆ ಬದುಕು ನೀಡುವಲ್ಲಿ ಪೂರಕವಾಗಿವೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕಿ, ಶಾಸಕಿ ಎಂ.ಪಿ. ಲತಾ ಹೇಳಿದರು.
ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಗೆ ಸಹಕಾರ ಸಂಸ್ಥೆಗಳು ಬಹುಮುಖ್ಯ ಪಾತ್ರ ವಹಿಸಲಿವೆ. ಈಗಾಗಲೇ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ. ಜೊತೆಗೆ ಸಹಕಾರ ಸಂಸ್ಥೆಗಳಲ್ಲಿ ಭಾಗವಹಿಸುವ ಮೂಲಕ ಇನ್ನಷ್ಟು ಸದೃಢಗೊಳ್ಳಬಹುದಾಗಿದೆ. ಈ ಬಾರಿಯ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಧ್ಯೇಯ ‘ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಘಗಳು’ ಎಂಬುದಾಗಿದೆ. ಸಹಕಾರ ಸಂಸ್ಥೆಗಳು ದೇಶವನ್ನು ಆರ್ಥಿಕವಾಗಿ ಸದೃಢವಾಗಿಸುವುದರ ಜೊತೆಗೆ ಕೃಷಿ, ಹಾಲು, ವಸತಿ, ಕೈಗಾರಿಕೆ, ಬ್ಯಾಂಕಿಂಗ್ ಮತ್ತು ಸೇವಾ ವಲಯದಲ್ಲಿ ಕ್ಷಿಪ್ರ ಸಾಧನೆಯನ್ನು ಮಾಡುತ್ತಿವೆ. ಸಂಸ್ಥೆಗಳು ಪಾರದರ್ಶಕತೆ ಮತ್ತು ನಿಷ್ಠೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವಾದುದು. ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಿದ್ದರಿಂದ ಪ್ರಸ್ತುತದಲ್ಲಿ ಸಹಕಾರ ಸಂಸ್ಥೆಗಳು ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು.
ಹೊಸಪೇಟೆ ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಮಾತನಾಡಿ, ಆರ್ಥಿಕವಾಗಿ ಮಹಿಳೆಯರನ್ನು ಸಬಲೀಕರಣ ಮಾಡುವ ಸದುದ್ದೇಶದಿಂದ ಸಾಲ ಸೌಲಭ್ಯಕ್ಕಾಗಿ ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ₹100 ಕೋಟಿ ಘೋಷಣೆ ಮಾಡಲಾಗಿದೆ. ಸಹಕಾರ ಸಂಸ್ಥೆಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡಬೇಕಿದೆ. ಸಾರ್ವತ್ರಿಕ ಅಭಿವೃದ್ದಿಗೆ ಮಹಿಳೆಯರ ಅಭಿವೃದ್ಧಿ ಬಹಳ ಮುಖ್ಯ. ಹೆಚ್ಚೆಚ್ಚು ಮಹಿಳೆಯರು ಸಹಕಾರ ಸಂಘಗಳಲ್ಲಿ ಭಾಗವಹಿಸಬೇಕಿದೆ. ಈ ಸಂಸ್ಥೆಗಳು ನಿಸ್ವಾರ್ಥ ಸೇವೆಯನ್ನು ಮಾಡುವವರಿಗೆ ಒಂದು ಉತ್ತಮ ವೇದಿಕೆಯಾಗಿದೆ. ನಂಬಿಕೆ ಮತ್ತು ವಿಶ್ವಾಸದ ಮೇಲೆ ಎಲ್ಲ ಸಹಕಾರ ಸಂಸ್ಥೆಗಳ ಭವಿಷ್ಯ ನಿಂತಿದೆ. ಸಹಕಾರಿ ಸಂಸ್ಥೆಗಳಲ್ಲಿನ ನೌಕರರು ಸಾರ್ವಜನಿಕರ ಜೊತೆಗೆ ಅತ್ಯುತ್ತಮವಾಗಿ ನಡೆದುಕೊಡು ಹೋಗುವ ಹೊಣೆಗಾರಿಕೆ ಪ್ರತಿಯೊಬ್ಬ ಸಹಕಾರಿಗಳ ಮೇಲಿದೆ. ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.ಸಹಕಾರ ಸಪ್ತಾಹದ ನಿಮಿತ್ತ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ‘ಸಹಕಾರ ಪತ್ರಿಕೆ’ಯ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸಹಕಾರ ಕ್ಷೇತ್ರದಲ್ಲಿ ಸಾಧನೆಗೈದ ವಿವಿಧ ಸಾಧಕರಿಗೆ ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತರಿಗೆ ಗೌರವಿಸಿ ಸನ್ಮಾನಿಸಲಾಯಿತು.