ನನ್ನ ಮೇಲೆ ಹಲ್ಲೆ ನಡೆಸಿದ ವೃತ್ತ ನಿರೀಕ್ಷಕ ಮಹೇಶ್‌ಗೌಡ ವಿರುದ್ಧ ಬಳ್ಳಾರಿ ಎಸ್‌ಪಿ ಕೇಸು ದಾಖಲಿಸಬೇಕು.
ಸಂಡೂರು: ನನ್ನ ಮೇಲೆ ಹಲ್ಲೆ ನಡೆಸಿದ ವೃತ್ತ ನಿರೀಕ್ಷಕ ಮಹೇಶ್‌ಗೌಡ ವಿರುದ್ಧ ಬಳ್ಳಾರಿ ಎಸ್‌ಪಿ ಕೇಸು ದಾಖಲಿಸಬೇಕು. ನ್ಯಾಯಯುತ ವಿಚಾರಣೆ ನಡೆಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅ. 30ರಂದು ಆದೇಶ ಮಾಡಿದ್ದಾರೆ ಎಂದು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರು ನಿವಾಸಿ ವಿವೇಕಾನಂದ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಂಡೂರಿನಲ್ಲಿ ಆ. 24ರಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ವೈಯಕ್ತಿಕ ಕೆಲಸದ ನಿಮಿತ್ತ ಭೇಟಿಯಾಗಲು ಬಂದಾಗ ಸಂಡೂರು ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್‌ಗೌಡ ನನಗೆ ಸಚಿವರನ್ನು ಭೇಟಿಯಾಗಲು ಬಿಡದೇ ಸಾರ್ವಜನಿಕರ ಎದುರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದಿದ್ದಾರೆ. ಕೈಗೆ ತೀವ್ರ ಗಾಯವಾಗಿತ್ತು. ಹಲ್ಲೆ ನಡೆಸಿರುವ ವೃತ್ತ ನಿರೀಕ್ಷಕ ಮಹೇಶ್‌ಗೌಡ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿವೈಎಸ್‌ಪಿ, ಎಸ್‌ಪಿ, ಗೃಹ ಸಚಿವ, ರಾಜ್ಯಪಾಲರಿಗೆ ಮನವಿ ಸಲ್ಲಿಸಿದರೂ ಇದುವರೆಗೂ ವೃತ್ತ ನಿರೀಕ್ಷಕರ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ. ಅದಕ್ಕೆ ಬದಲಾಗಿ ಪೊಲೀಸ್ ಉಪ ಅಧೀಕ್ಷಕರು ನಾನು ನೀಡಿದ ದೂರು ಅರ್ಜಿ ಸುಳ್ಳೆಂದು ಹಿಂಬರಹ ನೀಡಿದ್ದಾರೆ ಎಂದು ಹೇಳಿದರು.
ಕೇಸ್ ದಾಖಲಿಸಲು ಹೈಕೋರ್ಟ್ ಸೂಚನೆ:
ಈ ಹಿನ್ನೆಲೆಯಲ್ಲಿ ನಾನು ಧಾರವಾಡದ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಕೇಸ್ ದಾಖಲಿಸಲು ಆದೇಶ ಮಾಡಿದೆ. ವಿನಾಕಾರಣ ನನ್ನ ಮೇಲೆ ಹಲ್ಲೆ ಮಾಡಿದ ವೃತ್ತ ನಿರೀಕ್ಷಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ನನಗೆ ನ್ಯಾಯ ಒದಗಿಸಬೇಕು ಎಂಬುದು ನನ್ನ ಬೇಡಿಕೆಯಾಗಿದೆ ಎಂದರು.
ಅಮಾನತು ಮಾಡಿ:
ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಕಾರ್ಮಿಕ ಸಚಿವರನ್ನು ಕಾಣಲು ಬಂದ ವಿವೇಕಾನಂದ ಅವರಿಗೆ ವೃತ್ತ ನಿರೀಕ್ಷಕ ಮಹೇಶ್‌ಗೌಡ ಹಲ್ಲೆಗೈದು ದುಂಡಾವರ್ತನೆ ತೋರಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಎಸ್‌ಪಿ, ಐಜಿಪಿ, ಗೃಹ ಮಂತ್ರಿ, ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದರೂ ಕ್ರಮವಾಗಿಲ್ಲ. ಗೃಹಮಂತ್ರಿಗೆ ಏನು ಕೇಳಿದರೂ ಗೊತ್ತಿಲ್ಲ ಎಂಬ ಉತ್ತರ ಬರುತ್ತದೆ. ಹಲ್ಲೆಗೈದ ವೃತ್ತ ನಿರೀಕ್ಷಕ ಅವರನ್ನು ಕೂಡಲೇ ಅಮಾನತು ಮಾಡಿ, ವಿವೇಕಾನಂದಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ವಸಂತಕುಮಾರ್ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಡೇದ್ ಸುರೇಶ್, ಸಂಡೂರು ಮಂಡಲ ಅಧ್ಯಕ್ಷ ಅಶೋಕಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹ ಎನ್‌ಟಿಆರ್, ಕೆ. ಪ್ರವೀಣ್, ಕಾರ್ಯಾಲಯ ಕಾರ್ಯದರ್ಶಿ ಎನ್.ಎಚ್. ರಮೇಶ್, ಉಪಾಧ್ಯಕ್ಷರಾದ ತಾಯಪ್ಪ, ಯಶೋದಾ, ಮುಖಂಡರಾದ ರವಿಕುಮಾರ್, ಅಡಿವೆಪ್ಪ, ಪ್ರಭುಗೌಡ, ವಿಜಯಕುಮಾರ್, ವಿಶ್ವನಾಥ ರೆಡ್ಡಿ, ಅಬ್ದುಲ್ ವಹಾಬ್, ವಿ.ಎಸ್. ಶಂಕರ್, ಬಾಬು ನಾಯ್ಕ್, ಅಂಜಿನಿ, ಪುರುಷೋತ್ತಮ, ವಾಮದೇವ, ಸುಬ್ಬಯ್ಯ, ರಾಮಾಂಜಿನಿ, ಸುಶೀಲಾ, ಓಬಳೇಶ್, ವೆಂಕಟಸುಬ್ಬಯ್ಯ, ಪ್ರವೀಣ್‌ಕುಮಾರ್, ಮಹಾಂತೇಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.