ಯಳಂದೂರು ತಹಸೀಲ್ದಾರ್ ಕಚೇರಿ ಮುಂಭಾಗ ರಾಜ್ಯ ಗ್ರಾಮ ಅಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ನೀಡಲಾಗಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ತಾಲೂಕು ಸಂಘದ ಪದಾಧಿಕಾರಿಗಳು ಕರ್ತವ್ಯದಿಂದ ಹೊರಗುಳಿದು ಮೌನ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಯಳಂದೂರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಧರಣಿ 11ನೇ ದಿನಕ್ಕೆ ಕಾಲಿಟ್ಟಿದ್ದು ಹಲವು ಸೇವೆಗಳು ಸಾರ್ವಜನಿಕರಿಗೆ ಲಭಿಸದ ಕಾರಣ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು, ಆದಾಯ, ಜಾತಿ ಪ್ರಮಾಣ ಪತ್ರ, ರೈತರು ಸಾಲ ಪಡೆದುಕೊಳ್ಳಲು ಬೇಕಾದ ದಾಖಲಾತಿಗಳು, ಖಾತೆ ಬದಲಾವಣೆ, ಸಾಮಾಜಿಕ ಭದ್ರತೆ ಸೇರಿದಂತೆ ೪೦ಕ್ಕೂ ಹೆಚ್ಚು ಸಕಾಲ ಸೇವೆಗಳನ್ನು ಸುಲಭವಾಗಿ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಸಂಘದ ತಾಲೂಕು ಅಧ್ಯಕ್ಷ ನಂದಕುಮಾರ್ ಮಾತನಾಡಿ, ನಮ್ಮ ಪ್ರತಿಭಟನೆ ರಾಜ್ಯಾದ್ಯಂತ ಕಳೆದ ೧೦ ದಿನಗಳಿಂದ ನಡೆಸುತ್ತಿದ್ದು ಇದು ಮುಂದುವರಿದಿದೆ. ಕಳೆದ ವರ್ಷ ಸೆ.೨೬ ರಿಂದ ಅ.೦೩ರವರೆಗೆ ನಮ್ಮ ಸಂಘದ ವತಿಯಿಂದ ಬೇಡಿಕೆಗಳಿಗೆ ರಾಜ್ಯಾದ್ಯಂತ ಮುಷ್ಕರ ನಡೆಸಿತ್ತು. ಆಗ ಕಂದಾಯ ಇಲಾಖೆಯ ಸರ್ಕಾರ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಲಾಗಿತ್ತು. ಆದರೆ ಅದು ಇಂದಿಗೂ ಜಾರಿಗೆ ತಂದಿಲ್ಲ. ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ೫೧.೫ ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರಿಗೆ ಪೌತಿ ಖಾತೆ ದಾಖಲಿಸುವ ಇ-ಪೌತಿ ಖಾತಾ ಆಂದೋಲನ ಕೈ ಬಿಡಬೇಕು, ಅಂತರ ಜಿಲ್ಲಾ ವರ್ಗಾವಣೆಯಲ್ಲಿ ಇತರೆ ಇಲಾಖೆಯಲ್ಲಿರುವಂತೆ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿಯನ್ನು ರಚಿಸಬೇಕು, ಸುಸಜ್ಜಿತ ಕಚೇರಿ ಸೇರಿದಂತೆ ಮೂಲ ಸೌಲಭ್ಯಗಳನ್ನು ನೀಡಬೇಕು.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡಬೇಕು, ಕಂದಾಯ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಎಲ್ಲಾ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆಯ ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಾಡಬೇಕು. ಪ್ರಯಾಣ ಭತ್ಯೆ ದರವನ್ನು ೫೦೦ ರು.. ನಿಂದ ೫,೦೦೦ ರು.ಗೆ ಏರಿಸಬೇಕು. ಜಿಲ್ಲಾ ಮಟ್ಟದ ಜೇಷ್ಟತೆಯನ್ನಾಗಿ ಪರಿವರ್ತಿಸುವುದೂ ಸೇರಿದಂತೆ ೨೩ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಅನಿರ್ದಿಷ್ಟಾವಧಿಗೆ ನಮ್ಮ ಮುಷ್ಕರ ಮುಂದುವರೆಯಲಿದೆ ಎಂದರು.ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ: ತಹಸೀಲ್ದಾರ್
ಸಾರ್ವಜನಿಕರ ಸೇವೆಗಳನ್ನು ಪಡೆದುಕೊಳ್ಳಲು ಜಿಲ್ಲಾಧಿಕಾರಿ ನಿರ್ದೇಶನದಂತೆ ರಾಜಸ್ವ ನಿರೀಕ್ಷಕರೇ ನೇರವಾಗಿ ಜಾತಿ, ಆದಾಯ ಪ್ರಮಾಣಪತ್ರವನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಇತರೆ ಸೇವೆಗಳನ್ನು ಇವರ ಮೂಲಕವೇ ನೀಡಲಾಗುತ್ತಿದ್ದು ನಮ್ಮ ತಾಲೂಕಿನಲ್ಲಿ ಈ ಬಗ್ಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ತಹಸೀಲ್ದಾರ್ ಜಯಪ್ರಕಾಶ್ ಮಾಹಿತಿ ನೀಡಿದರು. ಜಿಲ್ಲಾ ಗೌರವಾಧ್ಯಕ್ಷ ಮಹೇಶ್, ಪ್ರವೀಣ್‌ಕುಮಾರ್, ಕೆ.ಆರ್. ಶರತ್‌ಗೌಡ, ಸುಹಾಸ್, ಲೀಲಾವತಿ, ಚೈತ್ರಾ, ಕಾಳಮ್ಮ, ಸುಕನ್ಯ, ಸುನೀತಾ, ಮಹದೇವಸ್ವಾಮಿ ಸೇರಿದಂತೆ ಅನೇಕರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.