ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ 5ನೇ ದಿನಕ್ಕೆ

KannadaprabhaNewsNetwork |  
Published : Feb 15, 2025, 12:32 AM IST
14ಎಚ್ಎಸ್ಎನ್20 : ಹಾಸನ ನಗರದ ಎಂಜಿ ರಸ್ತೆಯಲ್ಲಿರುವ ತಹಸೀಲ್ದಾರ್‌ ಕಚೇರಿ ಎದುರು ಗ್ರಾಮ ಆಡಳಿತಾಧಿಕಾರಿಗಳು ನಡೆಸುತ್ತಿರುವ ಪ್ರತಿಭಟನೆ. | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಎಂ.ಜಿ. ರಸ್ತೆ ಬಳಿ ಇರುವ ತಹಸೀಲ್ದಾರ್ ಕಚೇರಿ ಮುಂದೆ ತಮ್ಮ ಕೆಲಸ ಸ್ಥಗಿತಗೊಳಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದ 5ನೇ ದಿನವಾದ ಶುಕ್ರವಾರ ರೈತ ಸಂಘ, ಕರವೇ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಭಾಗವಹಿಸಿ ಸಾಥ್‌ ನೀಡಿದವು. ಕಚೇರಿ ಸೇರಿದಂತೆ ಕನಿಷ್ಠ ಕುರ್ಚಿ ಅಗತ್ಯ ಸಲಕರಣೆಗಳನ್ನು ಸಹ ನೀಡುತ್ತಿಲ್ಲ. ಕಳೆದ ೧೦ -೧೫ ವರ್ಷಗಳಿಂದ ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮ ಆಡಳಿತ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಎಂ.ಜಿ. ರಸ್ತೆ ಬಳಿ ಇರುವ ತಹಸೀಲ್ದಾರ್ ಕಚೇರಿ ಮುಂದೆ ತಮ್ಮ ಕೆಲಸ ಸ್ಥಗಿತಗೊಳಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದ 5ನೇ ದಿನವಾದ ಶುಕ್ರವಾರ ರೈತ ಸಂಘ, ಕರವೇ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಭಾಗವಹಿಸಿ ಸಾಥ್‌ ನೀಡಿದವು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ್ ಮಾಧ್ಯಮದೊಂದಿಗೆ ಮಾತನಾಡಿ, ಕೆಲಸ ನಿರ್ವಹಿಸುವ ಕಚೇರಿ, ಮೂಲಸೌಕರ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಲ ತಿಂಗಳ ಹಿಂದೆ ಮುಷ್ಕರ ಹಮ್ಮಿಕೊಳ್ಳಲಾಗಿತ್ತು. ಇದುವರೆಗೂ ಸರ್ಕಾರ ನಮ್ಮ ಸಮಸ್ಯೆಗೆ ಸಮರ್ಪಕವಾಗಿ ಸ್ಪಂದಿಸದ ಕಾರಣ ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಗ್ರಾಮ ಲೆಕ್ಕಾಧಿಕಾರಿಗಳಿಗೆ ಸರ್ಕಾರ ಯಾವುದೇ ಮೂಲಸೌಕರ್ಯ ನೀಡದೆ ಹಲವಾರು ವರ್ಷದಿಂದ ಸರ್ಕಾರ ಕೆಲಸ ಮಾಡಿಸಿಕೊಳ್ಳುತ್ತಿದೆ. ಕಚೇರಿ ಸೇರಿದಂತೆ ಕನಿಷ್ಠ ಕುರ್ಚಿ ಅಗತ್ಯ ಸಲಕರಣೆಗಳನ್ನು ಸಹ ನೀಡುತ್ತಿಲ್ಲ. ಕಳೆದ ೧೦ -೧೫ ವರ್ಷಗಳಿಂದ ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹತ್ತಾರು ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಡಿಜಿಟಲ್ ವೆಬ್ ಅಪ್ಲಿಕೇಶನ್ ಮೂಲಕ ಸೇವೆಯನ್ನು ಒದಗಿಸಲಾಗುತ್ತಿದೆ. ಇದಕ್ಕಾಗಿ ನಮ್ಮದೇ ಮೊಬೈಲ್, ಸಿಮ್, ಲ್ಯಾಪ್ ಟಾಪ್ ಬಳಸಿಕೊಳ್ಳಲಾಗುತ್ತಿದ್ದು ಸರ್ಕಾರ ಅತ್ಯಂತ ನಿಕೃಷ್ಟವಾಗಿ ನಮ್ಮನ್ನು ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಸಂಯೋಜನೆ ಗರುಡ ಆ್ಯಪ್, ಭೂಮಿ, ಇ -ಆಫೀಸ್, ಆಧಾರ್ ಸೀಡ್ ಲ್ಯಾಂಡ್ ಬಿಟ್, ಹಕ್ಕುಪತ್ರ, ಪೌತಿ ಆಂದೋಲನ ಆಪ್ ,ಸಂರಕ್ಷಣೆ, ಬೆಳೆ ಸಮೀಕ್ಷೆ ಸೇರಿದಂತೆ ೨೧ ಮೊಬೈಲ್ ಆಫ್ ಮೂಲಕ ತಂತ್ರಾಂಶ ಬಳಕೆ ಮಾಡಿಕೊಂಡು ಸೇವೆಯನ್ನು ಒದಗಿಸಲಾಗುತ್ತಿದೆ. ಈ ಎಲ್ಲಾ ಸೇವೆಯನ್ನು ಪ್ರತಿದಿನವೂ ಅಪ್‌ಡೇಟ್ ಮಾಡಬೇಕಾಗುತ್ತದೆ. ಬೆಳಗ್ಗೆ ೬ ಗಂಟೆಗೆ ಕರ್ತವ್ಯಕ್ಕೆ ಹಾಜರಾದರೆ ರಾತ್ರಿ ೧೦ ಆದರೂ ಮುಗಿಯುವುದಿಲ್ಲ, ಈ ನಡುವೆ ಗೂಗಲ್ ಮೀಟ್ ಇತರೆ ಕಾರಣ ಒತ್ತಡಗಳು ಹೆಚ್ಚುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಕಾರ್ಯ ಒತ್ತಡದಿಂದ ಹಲವು ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಕೆಲ ಅಧಿಕಾರಿಗಳು ಡೆತ್ ನೋಟ್ ಬರೆದಿಟ್ಟು ಮೃತರಾದರೆ ಇನ್ನೂ ಕೆಲವರು ಹೃದಯಘಾತದಿಂದ ಸಾವಿಗೀಡಾಗಿದ್ದಾರೆ. ಶನಿವಾರ- ಭಾನುವಾರ ರಜೆ ಇದ್ದರೆ ಶುಕ್ರವಾರವೇ ರಜೆ ಪಡೆಯದೆ ಕೆಲಸ ಮಾಡುವಂತೆ ಆದೇಶ ಹೊರಡಿಸುತ್ತಾರೆ ಎಂದು ಆರೋಪಿಸಿದರು. ಕಳೆದ ಎರಡು ವರ್ಷದಿಂದ ಯಾವುದೇ ಮುಂಬಡ್ತಿ ನೀಡಲಾಗಿಲ್ಲ. ಆಂತರಿಕ ಜಿಲ್ಲಾ ವರ್ಗಾವಣೆ, ಸೇರಿದಂತೆ ಯಾವುದೇ ಸೌಲಭ್ಯವನ್ನು ನೀಡದೆ ನಮ್ಮನ್ನು ವಂಚಿಸಲಾಗುತ್ತಿದೆ. ಸರ್ಕಾರ ಕೂಡಲೇ ನಮಗೆ ಮೂಲ ಸೌಕರ್ಯ ಒದಗಿಸಬೇಕು. ಮೊಬೈಲ್, ಸಿಮ್, ಲ್ಯಾಪ್‌ಟಾಪ್‌ ಸೇರಿದಂತೆ ಅಗತ್ಯ ಸಲಕರಣೆಗಳನ್ನು ನೀಡಬೇಕು. ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಸೋಮವಾರ ರಾಜ್ಯ ಸಂಘದೊಂದಿಗೆ ಚರ್ಚಿಸಿ ಮುಷ್ಕರ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.

ಧರಣಿಯಲ್ಲಿ ಮಂಜುನಾಥ್, ಮಣಿಕಂಠ, ಬಸವರಾಜ್, ಸುಹಾಸ್, ವಸಂತಕುಮಾರ್, ಕೃಷ್ಣಪ್ಪ, ಭರತೇಶ್, ಅರ್ಪಿತ, ಕಾವ್ಯ, ಸಾಹಿತ್ಯ, ಭವ್ಯಶ್ರೀ, ಸಾಹಿತ್ಯ, ಪೂಜಾ, ಶೇಖರ್, ಮಂಜು, ಮನು, ರವಿಕುಮಾರ್, ಪುಟ್ಟಸ್ವಾಮಿ, ಬೋರೇಗೌಡ, ಕಾಂತರಾಜು, ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಾಬು, ಕರ್ನಾಟಕ ರಕ್ಷಣಾ ವೇದಿಕೆಯ ಸತೀಶ್ ಪಟೇಲ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!