ಕನ್ನಡಪ್ರಭ ವಾರ್ತೆ ಹೊಸನಗರ
ಸಮಾಜದಲ್ಲಿ ಬೋಧನಾ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಒಂದು ಎಂಬುದನ್ನು ಪರಿಗಣಿಸಿರುವ ದೇಶ ನಮ್ಮದು. ಬದುಕಿಗೆ ಗುರಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಶಿಕ್ಷಣ ವ್ಯವಸ್ಥೆಯು ಬಲಗೊಂಡಷ್ಟು ದೇಶದ ಪ್ರಗತಿಯ ವೇಗ ಹೆಚ್ಚುತ್ತದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.ಇಲ್ಲಿನ ಈಡಿಗರ ಭವನದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೌಲ್ಯಯುತ ಸಮಾಜ ರೂಪಿಸುವ ಶಿಕ್ಷಕರಿಗೆ ತಮ್ಮದೇ ಆದ ದಿನವೊಂದನ್ನು ಸಂಭ್ರಮಿಸುವ ಅವಕಾಶ ಇದು. ಶಿಕ್ಷಕರ ಮೇಲಿನ ಜವಾಬ್ದಾರಿ ಗಳು, ಅವರನ್ನು ವಿದ್ಯಾರ್ಥಿಗಳು ಮತ್ತು ಜನರು ನೋಡುವ ಬಗೆ ಹಾಗೂ ಶಿಕ್ಷಕರ ಮನೋಭಾವಗಳು ಕೂಡ ಈ ಕಾಲಘಟ್ಟ ದಲ್ಲಿ ಬದಲಾಗಿದೆ. ಆದರೆ ಅವರ ಹೊಣೆಗಾರಿಕೆಗಳು ಬದಲಾಗಿಲ್ಲ. ಅವರ ಜವಾಬ್ದಾರಿ ಮತ್ತು ಒತ್ತಡಗಳು ಇನ್ನಷ್ಟು ಹೆಚ್ಚಾಗಿವೆ. ಇಂತಹ ಅನೇಕ ಕಾರಣಗಳಿಂದಾಗಿ ‘ಶಿಕ್ಷಕರ ದಿನಾಚರಣೆ’ ಮಹತ್ವ ಪಡೆದುಕೊಳ್ಳುತ್ತದೆ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಶಿಕ್ಷಕ ವೃತ್ತಿಯೆಂದರೆ ಅತ್ಯಂತ ಪರಿಶ್ರಮದಿಂದ ಕೂಡಿದ ವೃತ್ತಿಯಾಗಿದ್ದು, ತರಗತಿ ಯಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಹಾಗೂ ಯಶಸ್ವಿಯಾಗಿ ತರಗತಿಯನ್ನು ನಿರ್ವಹಿಸುವ ಬಗ್ಗೆ ನಿತ್ಯ ಚಿಂತನೆಗೈಯುವ, ಅಧ್ಯಯನಶೀಲತೆಯನ್ನು ಅವಲಂಬಿಸಿದ ಈ ವೃತ್ತಿಯಿಂದಾಗಿ ಶಿಕ್ಷಕರು ನಿವೃತ್ತಿಯ ಬಳಿಕವೂ ಸಮಾಜದಲ್ಲಿ ಆದರಣೀಯರಾಗಿರುತ್ತಾರೆ ವೃತ್ತಿಯ ಮೇಲೆ ನಿಷ್ಠೆ ಹಾಗೂ ಪ್ರೀತಿ, ದುಡಿಯುವ ಸಂಸ್ಥೆಯೊಂದಿಗೆ ತಾದಾತ್ಮ್ಯ, ಸತತ ಅಧ್ಯಯನ ಶೀಲತೆ, ವಿದ್ಯಾರ್ಥಿಗಳ ಜತೆ ಅತ್ಯಂತ ಪ್ರೀತಿಯ ಹಾಗೂ ಸ್ನೇಹಪೂರ್ಣ ನಡವಳಿಕೆ ಎಂಬ ಪಂಚಾಂಗದ ಆಧಾರದ ಮೇಲೆ ಶಿಕ್ಷಕ ವೃತ್ತಿಯ ಯಶಸ್ಸು ಅವಲಂಭಿಸಿದೆ. ಇದರ ಜತೆ ರಾಷ್ಟ್ರ ಚಿಂತನೆ ಹಾಗೂ ಸೇವಾ ಭಾವನೆಗೆ ವಿದ್ಯಾರ್ಥಿಗಳನ್ನು ಪ್ರಚೋದಿಸುವುದು ಕೂಡ ಶಿಕ್ಷಕನ ಕರ್ತವ್ಯವಾಗಿದೆ. ವಿದ್ಯಾರ್ಥಿಗಳ ಜೀವನ ಮತ್ತು ವೃತ್ತಿಗೆ ಸೂಕ್ತ ರೂಪು ನೀಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವವರು ಶಿಕ್ಷಕರು. ಹೀಗಾಗಿ ಶಿಕ್ಷಕರನ್ನು ನೆನಪಿಸಿಕೊಳ್ಳುವುದು ಮತ್ತು ಗೌರವಿಸುವುದು ಈ ಆಚರಣೆಯ ಉದ್ದೇಶ. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಘೋಷ ವಾಕ್ಯಗಳನ್ನು ಕೇಳಿರು ತ್ತೇವೆ. ಅಂತಹ ಭವಿಷ್ಯದ ಪ್ರಜೆಗಳನ್ನು ಸಿದ್ಧಪಡಿಸುವ ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಹೊಣೆ ಶಿಕ್ಷಕರ ಮೇಲಿರುತ್ತದೆ. ಎಸ್.ರಾಧಾಕೃಷ್ಣನ್ ಅವರಂತಹ ಮೇರು ವ್ಯಕ್ತಿತ್ವ ಹೊಂದಿದವರು ನಮ್ಮ ದೇಶದಲ್ಲಿದ್ದರು ಎನ್ನುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ.ಉತ್ತಮ ಶಿಕ್ಷಕ ಪ್ರಶಸ್ತಿ, ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ, ಸೇವಾವಧಿಯಲ್ಲಿ ಮೃತರಾದ ಶಿಕ್ಷಕರ ಕುಟುಂಬಕ್ಕೆ ಸ್ಮರಣಿಕೆ, ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಪೋಷಕರಿಗೆ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಇಓ ಎಚ್.ಆರ್.ಕೃಷ್ಣಮೂರ್ತಿ, ತಹಸೀಲ್ದಾರ್ ಎಚ್.ಜೆ.ರಶ್ಮಿ, ತಾ.ಪಂ. ಇಓ ನರೇಂದ್ರಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವಣ್ಯಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್. ಸುರೇಶ್, ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಧರ್ಮಪ್ಪ, ಕುಬೇಂದ್ರಪ್ಪ, ತಿರುಪತಿ ನಾಯ್ಕ್, ರೇಣುಕೇಶ್, ಕಾರ್ಯದರ್ಶಿ ಕೆ.ಜಿ.ಪುಟ್ಟಸ್ವಾಮಿ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.