ಕೆನಾಲ್‌ ವಿರುದ್ಧ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಲ್ಲ: ಶಾಸಕ ಸುರೇಶಗೌಡ

KannadaprabhaNewsNetwork | Published : Dec 7, 2024 12:32 AM

ಸಾರಾಂಶ

ಬೇಕಾದರೆ ರಕ್ತ ಕೊಡುತ್ತೇವೆ. ಆದರೆ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ವಿರುದ್ಧ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ. ನಮ್ಮ ಹಕ್ಕನ್ನು ರಾಜಕೀಯಕ್ಕೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಗ್ರಾಮಾಂತರ ಶಾಸಕ ಸುರೇಶಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಬೇಕಾದರೆ ರಕ್ತ ಕೊಡುತ್ತೇವೆ. ಆದರೆ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ವಿರುದ್ಧ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ. ನಮ್ಮ ಹಕ್ಕನ್ನು ರಾಜಕೀಯಕ್ಕೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಗ್ರಾಮಾಂತರ ಶಾಸಕ ಸುರೇಶಗೌಡ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲಿಂಕ್ ಕೆನಾಲ್ ಯೋಜನೆ ವಾಪಸ್ ತೆಗೆದುಕೊಳ್ಳದಿದ್ದರೆ ಹೋರಾಟ ನಿಲ್ಲುವುದಿಲ್ಲ. ಸದನದಲ್ಲೂ ಕೆನಾಲ್‌ ಯೋಜನೆ ಬಗ್ಗೆ ಜಿಲ್ಲೆಯ ಬಿಜೆಪಿ-ಜೆಡಿಎಸ್ ಶಾಸಕರು ಹೋರಾಟ ಮಾಡುತ್ತೇವೆ. ಅಧಿಕಾರ ಇದೆ ಅಂತ ಪೊಲೀಸ್ ಬಲ ಪ್ರಯೋಗ ನಡೆಸಿದರೆ ರೈತರು ಸುಮ್ಮನೆ ಇರುವುದಿಲ್ಲ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವುಕುಮಾರ್‌ ಕಾರಣ ಆಗುತ್ತಾರೆ ಎಂದರು.ಕ್ಷೇತ್ರದ ಜನರನ್ನು ಬಿಟ್ಟು ಬೇರೆ ಯಾರಿಗೂ ಹೆದರುವುದಿಲ್ಲ. ವಿದ್ಯಾರ್ಥಿಯಾದಾಗಿನಿಂದ ನಾನು ಹೋರಾಟ ಮಾಡಿಕೊಂಡು ಬಂದವನು. 16 ವರ್ಷ ಇದ್ದಾಗಲೇ ಬೆಂಗಳೂರಿನಲ್ಲಿ ಗೋವಾ ಬಸ್‌ಗೆ ಕಲ್ಲು ಹೊಡೆದು ಜೈಲಿಗೆ ಹೋಗಿದ್ದೇ. ಹೆದರುವುದು, ಜಗ್ಗುವುದು, ಬಗ್ಗುವುದು ಸುರೇಶ್ ಗೌಡ ಜಾಯಮಾನದಲ್ಲೇ ಇಲ್ಲ ಎಂದರು.ಪರಂ ಸಿಎಂ ಆಗುವೆ ಆಸೆ ಇಟ್ಟುಕೊಂಡಿದ್ದಾರೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗಬೇಕು ಅಂತಾ ತುಂಬಾ ಆಸೆ ಇಟ್ಟುಕೊಂಡಿದ್ದಾರೆ. ವೈಯಕ್ತಿಕವಾಗಿ ಪರಮೇಶ್ ಜೊತೆ ಮಾತನಾಡುವಾಗ ಮುಖ್ಯಮಂತ್ರಿ ಆಸೆ ಬಗ್ಗೆ ಅವರು ಹೇಳಿಕೊಂಡಿದ್ದರು. ಮಾಜಿ ಪ್ರಧಾನಿ ಎಚ್‌. ಡಿ ದೇವೇಗೌಡರನ್ನು ಸೋಲಿಸಿದರೂ ಜಿ.ಎಸ್.ಬಸವರಾಜು ಸಚಿವರಾಗಲಿಲ್ಲ. ಆದರೆ ತುಮಕೂರಿಗೆ ಬಂದು ಗೆದ್ದ ವಿ. ಸೋಮಣ್ಣ ಅವರಿಗೆ ಸಚಿವ ಸ್ಥಾನದ ಅದೃಷ್ಠ ಒಲಿದಿದೆ ಎಂದರು.ಹಾಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೂ ಅದೃಷ್ಟ ಒಲಿಯಬಹುದು. ಕ್ಷೇತ್ರದ ಅನುದಾನ ವಿಚಾರದಲ್ಲಿ ಕಪ್ಪುಪಟ್ಟಿ, ಘೋಷಣೆ ಕೂಗೋ ವಿಚಾರದ ಬಗ್ಗೆ ಹೆದರಿ ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ. ಅನುದಾನ ಕೊಡುವ ಭರವಸೆಯಿಂದ ಹಿಂದೆ ಸರಿದಿದ್ದಾಗಿ ತಿಳಿಸಿದರು.

Share this article