ದಾವಣಗೆರೆ: ಸಿಎಂ ಕುರ್ಚಿ ವಿಚಾರಕ್ಕೆ ಬ್ರೇಕ್ ಪಾಸ್ಟ್ ಪಾರ್ಟಿ, ಡಿನ್ನರ್ ಪಾರ್ಟಿ, ಪಿಕ್‌ನಿಕ್ ಅಂತೆಲ್ಲಾ ಸಮಯವ್ಯರ್ಥ ಮಾಡದೇ, ದಾವಣಗೆರೆ ಸೇರಿದಂತೆ ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸುವ ಮೂಲಕ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿ ಮತ್ತೆ ಹೋರಾಟ ನಡೆಸಬೇಕಾದೀತು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.
ಅಧಿವೇಶನದಲ್ಲಿ ಹಿಂದೆಲ್ಲಾ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರು ಸಮರ್ಥ ವಿರೋಧ ಪಕ್ಷವಾಗಿ ಸರ್ಕಾರವನ್ನು ಪ್ರಶ್ನಿಸುತ್ತಿದ್ದರು. ಆದರೆ, ರಾಜ್ಯದ ಜನತೆ ಈಗ ಅಂತಹ ಜನಪರ, ರೈತಪರ ಪ್ರಾಮಾಣಿಕ ಕಾಳಜಿ ಹೊಂದಿದ್ದ ವಿಪಕ್ಷ ನಾಯಕರು, ಜನ ಪ್ರತಿನಿಧಿಗಳನ್ನೇ ಕಾಣದಂತಾಗಿದೆ ಎಂದು ಬೇಸರ ಹೊರಹಾಕಿದರು.
ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ರಾಜ್ಯದಲ್ಲಿ ಎಥೆನಾಲ್ ಉತ್ಪಾದಿಸುವ ಕಂಪನಿಗಳು ರೈತರಿಂದ ನೇರವಾಗಿ ಕಡಿಮೆ ಬೆಲೆಗೆ ಕೃಷಿ ಉತ್ಪನ್ನ ಖರೀದಿಸುವಂತಿಲ್ಲ. ಆದರೂ, ಕಂಪನಿಗಳು ನೇರವಾಗಿ ಕಡಿಮೆ ಬೆಲೆಗೆ ರೈತರಿಂದ ಖರೀದಿ ಮಾಡುತ್ತಿವೆ ಎಂದು ದೂರಿದರು.ಸಂಘಟನೆ ಮುಖಂಡರಾದ ಹೂವಿನಮಡು ನಾಗರಾಜ, ಚಿನ್ನಸಮುದ್ರ ದಾವಲ್ ನಾಯ್ಕ, ಬುಳ್ಳಾಪುರ ರಾಜಪ್ಪ, ಕುರ್ಕಿ ಹನುಮಂತಪ್ಪ, ಹೊಸಹಳ್ಳಿ ಮೋಹನ ನಾಯ್ಕ ಇತರರು ಇದ್ದರು.