
ಒತ್ತುವರಿ ತೆರವುಗೊಳಿಸಿ
-ಗೋರ್ ಸೇನೆ ರಾಷ್ಟ್ರೀಯ ಅಖಿಲ ಭಾರತ ಉಪಾಧ್ಯಕ್ಷ ಶಂಕರ್ ಪವಾರ್ ಮಾಹಿತಿ
----ಕನ್ನಡಪ್ರಭ ವಾರ್ತೆ ಚಿಂಚೋಳಿತಾಲೂಕಿನ ಶಾದಿಪೂರ ಗ್ರಾಮದ ಸರ್ವೆ ನಂಬರ್ 126 ಮತ್ತು 127 ರ 188 ಎಕರೆ ಸರ್ಕಾರಿ ಜಮೀನಿನಲ್ಲಿ ತೆಲಂಗಾಣ ರಾಜ್ಯದ ಪ್ರಭಾವಿಗಳು ನಡೆಸುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಒತ್ತುವರಿ ತೆರವುಗೊಳಿಸಿ, ಗಡಿ ಕಲ್ಲು ನೆಡಲು ಆಗ್ರಹಿಸಿ 58 ದಲಿತ ರೈತ ಕುಟುಂಬಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಜುಲೈ 25ಕ್ಕೆ 100ನೇ ದಿನಕ್ಕೆ ಕಾಲಿಟ್ಟಿದೆ ಎಂದು ಗೋರ್ ಸೇನೆ ರಾಷ್ಟ್ರೀಯ ಅಖಿಲ ಭಾರತ ಉಪಾಧ್ಯಕ್ಷ ಶಂಕರ್ ಪವಾರ್ ತಿಳಿಸಿದ್ದಾರೆ.
ಆಘಾತಕಾರಿ ಸತ್ಯಗಳು: ಭೂದಾಖಲೆಗಳ ಇಲಾಖೆ (ADLR/DDLR) ತಯಾರಿಸಿರುವ ಇತ್ತೀಚಿನ ಸ್ಥಳ ನಕಾಶೆ ಮತ್ತು ವರದಿ ಪರಿಶೀಲಿಸಿದಾಗ ಅಧಿಕಾರಿಗಳ ಧೋರಣೆ ಸ್ಪಷ್ಟವಾಗಿ ಬಯಲಾಗಿದೆ. 1961ರ ಅಂತರರಾಜ್ಯ ಗಡಿ ಒಪ್ಪಂದ ಮರೆಮಾಚುವಿಕೆ 1961-62 ರ ಜಂಟಿ ಪರಿಶೀಲನಾ ವರದಿ (File No: HBC. 1/16/59-60) ಮತ್ತು 1962 ರ ಮೈಸೂರು ಸರ್ಕಾರಿ ಆದೇಶದ ಪ್ರಕಾರ ಕರ್ನಾಟಕ-ತೆಲಂಗಾಣ ಗಡಿಯಲ್ಲಿ ನೆಡಲಾಗಿರುವ ಅಧಿಕೃತ ಗಡಿ ಕಲ್ಲುಗಳ ಉಲ್ಲೇಖವನ್ನೇ ನಕಾಶೆಯಲ್ಲಿ ಅಧಿಕಾರಿಗಳು ಸಂಪೂರ್ಣ ಕೈಬಿಟ್ಟಿದ್ದಾರೆ.
ಸ್ಥಳದಲ್ಲಿ ಅಕ್ರಮ ಕೆಂಪು ಮಣ್ಣಿನ ಗಣಿಗಾರಿಕೆ ನಡೆಯುತ್ತಿರುವುದು ತಹಸೀಲ್ದಾರ್ ಮತ್ತು ADLR ತಪಾಸಣೆಯಲ್ಲಿ ದೃಢಪಟ್ಟಿದ್ದರೂ, ಗಣಿ ಇಲಾಖೆ ಮತ್ತು ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆಯನ್ನು ಬಂದ್ ಮಾಡಿಲ್ಲ, ಮುಖ್ಯ ಕಾರ್ಯದರ್ಶಿಗಳ ಆದೇಶವಿದ್ದರೂ ಜಂಟಿ ಸರ್ವೆ ಮಾಡುತ್ತಿಲ್ಲ. ಬೆಂಗಳೂರಿನ ಸಚಿವಾಲಯದಿಂದ ರಾಜ್ಯ ಮುಖ್ಯ ಕಾರ್ಯದರ್ಶಿಗಳು, ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಆಯುಕ್ತರು ಸಾಲು ಸಾಲು ಆದೇಶಗಳನ್ನು ರವಾನಿಸಿದ್ದಾರೆ. ಜೂನ್ 22 ರಂದೇ DDLR ಕಲಬುರಗಿ ಅವರು ಇದು ಅಂತರರಾಜ್ಯದ ಗಡಿವಿವಾದವಾದ್ದರಿಂದ ಜಂಟಿ ಸರ್ವೆ ಅಗತ್ಯ ಎಂದು ವರದಿ ಸಲ್ಲಿಸಿದ್ದಾರೆ.
ಅಕ್ರಮ ಗಣಿಗಾರಿಕೆ ತಕ್ಷಣ ಬಂದ್ ಮಾಡಿ: ಸ.ನಂ. 126 ಮತ್ತು 127 ರಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಇಂದೇ ಸ್ಥಗಿತಗೊಳಿಸಿ ಯಂತ್ರೋಪಕರಣ ಜಪ್ತಿ ಮಾಡಬೇಕೆಂದು ಗೋರ್ ಸೇನಾ ರಾಷ್ಟ್ರೀಯ ಸಂಘಟನೆ ಉಪಾಧ್ಯಕ್ಷರು ಶಂಕರ್ ಪವಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಚಿಂಚೋಳಿ ತಾಲೂಕಿನ ಶಾದಿಪುರ ಗ್ರಾಮದಲ್ಲಿ ದಲಿತ ಕುಟುಂಬಗಳು 100 ದಿನಗಳಿಂದ ಜಮೀನಿಗಾಗಿ ಹೋರಾಟ ನಡೆಸುತ್ತಿದ್ದಾರೆ.