ನ್ಯಾಯ ಕಲ್ಪಿಸುವಂತೆ ಹಣ ಕಳೆದುಕೊಂಡ ಸಂತ್ರಸ್ತರ ಹೋರಾಟ

KannadaprabhaNewsNetwork |  
Published : Oct 08, 2024, 01:00 AM IST
೭ಎಚ್‌ವಿಆರ್2- | Kannada Prabha

ಸಾರಾಂಶ

ಹಣ ಡಬಲ್ ಮಾಡುತ್ತೇವೆ ಎಂದು ನಂಬಿಸಿ ಹಣ ತುಂಬಿಸಿಕೊಂಡು ಸಾವಿರಾರು ಜನರಿಗೆ ಕೋಟ್ಯಂತರ ರು. ವಂಚಿಸಿರುವ ವಿವಿಧ ಕಂಪನಿಗಳಿಂದ ನ್ಯಾಯ ಕೊಡಿಸುವಂತೆ ಆಗ್ರಹಿಸಿ ವಂಚನೆ ಸಂತ್ರಸ್ತ ಠೇವಣಿದಾರರು ಕುಟುಂಬದವರ ಸಂಸ್ಥೆ (ತಗಿ ಪೀಡಿತ ಜಮಾಕರ್ತ ಪರಿವಾರ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ಒಂದು ತಿಂಗಳಿನಿಂದ ಅನಿರ್ದಿಷ್ಟಾವಧಿ ಚಳವಳಿ ಮುಂದುವರಿಸಿದ್ದಾರೆ.

ಹಾವೇರಿ: ಹಣ ಡಬಲ್ ಮಾಡುತ್ತೇವೆ ಎಂದು ನಂಬಿಸಿ ಹಣ ತುಂಬಿಸಿಕೊಂಡು ಸಾವಿರಾರು ಜನರಿಗೆ ಕೋಟ್ಯಂತರ ರು. ವಂಚಿಸಿರುವ ವಿವಿಧ ಕಂಪನಿಗಳಿಂದ ನ್ಯಾಯ ಕೊಡಿಸುವಂತೆ ಆಗ್ರಹಿಸಿ ವಂಚನೆ ಸಂತ್ರಸ್ತ ಠೇವಣಿದಾರರು ಕುಟುಂಬದವರ ಸಂಸ್ಥೆ (ತಗಿ ಪೀಡಿತ ಜಮಾಕರ್ತ ಪರಿವಾರ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ಒಂದು ತಿಂಗಳಿನಿಂದ ಅನಿರ್ದಿಷ್ಟಾವಧಿ ಚಳವಳಿ ಮುಂದುವರಿಸಿದ್ದಾರೆ. ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಬಳಿ ಸೆ.೨ರಿಂದ ಧರಣಿ ಆರಂಭಿಸಿದ್ದು, ಕಳೆದ ಒಂದು ತಿಂಗಳಿನಿಂದ ಧರಣಿ ನಡೆಸುತ್ತಿದ್ದರೂ ನಮ್ಮ ಬೇಡಿಕೆಗಳಿಗೆ ಸರ್ಕಾರ ಹಾಗೂ ಅಧಿಕಾರಿಗಳು ಇವರೆಗೂ ಸ್ಪಂದಿಸುತ್ತಿಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದಿರುವ ಪ್ರತಿಭಟನಾಕಾರರು ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ೩೦೦ಕ್ಕೂ ಹೆಚ್ಚು ಕಂಪನಿಗಳು ಜಿಲ್ಲೆ ಸೇರಿದಂತೆ ದೇಶಾದ್ಯಂತ ಒಂದು ಸಲ ಹಣ ಠೇವಣಿ ಇಟ್ಟರೆ ಐದು, ಆರು ವರ್ಷಗಳಲ್ಲಿ ದುಪ್ಪಟ್ಟು ಮಾಡಿಕೊಡುತ್ತೇವೆ. ಷೇರು ಹಣ ಪಾವತಿಸಿದರೆ, ಹತ್ತಾರು ಪಟ್ಟು ಲಾಭ ದೊರೆಯುತ್ತದೆ ಎಂದೆಲ್ಲ ನಂಬಿಸಿ ಕೋಟ್ಯಂತರ ರು. ಪಾವತಿಸಿಕೊಂಡು ಕಚೇರಿಗಳನ್ನು ಬಂದ್ ಮಾಡಿಕೊಂಡು ಪರಾರಿಯಾಗಿವೆ. ಹಣದ ಆಸೆ ತೋರಿಸಿ ಮುಗ್ದ ಜನರಿಗೆ ಹಾವೇರಿ ಜಿಲ್ಲೆಯೊಂದರಲ್ಲೇ ಒಂದು ಕಂಪನಿ ೪೦ ಕೋಟಿ ರು. ವಂಚಿಸಿದೆ. ಇಂತಹ ಅನೇಕ ಸಂಸ್ಥೆಗಳು ವಂಚನೆ ಮಾಡಿವೆ. ವಂಚನೆಗೀಡಾದವರಿಗೆ ಬಡ್ಸ್ ಕಾಯ್ದೆಯಡಿ ಅರ್ಜಿ ಸ್ವೀಕರಿಸಿ, ಎಲ್ಲ ಅರ್ಜಿದಾರರಿಗೆ ಹಣ ಕೊಡಿಸಬೇಕೆಂದು ಒತ್ತಾಯಿಸಿದರು. ಈ ಕೂಡಲೇ ರಾಜ್ಯದಲ್ಲಿ ಪಾವತಿ ಶಿಬಿರಗಳನ್ನು ಆಯೋಜಿಸುವ ಮೂಲಕ ವಂಚನೆಗೊಳಗಾದ ಸಂತ್ರಸ್ತರ ಠೇವಣಿಗಳನ್ನು ತಕ್ಷಣವೇ ಪಾವತಿಸುವಂತೆ ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಪಾವತಿ ಖಾತರಿ ಹಕ್ಕುಗಳ ಕಾನೂನು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ(ಬಡ್ಸ್) ೨೦೧೯ ಅಡಿಯಲ್ಲಿ ಪ್ರತಿಯೊಬ್ಬ ವಂಚನೆಗೊಳಗಾದ ಹೂಡಿಕೆದಾರರ ಠೇವಣಿಯ ಎರಡರಿಂದ ಮೂರು ಪಟ್ಟು ತಕ್ಷಣವೇ ಪಾವತಿಸಬೇಕು. ನಿರುದ್ಯೋಗಿ ಮುಗ್ದ ಏಜೆಂಟರಿಗೆ ಭದ್ರತೆ, ಗೌರವ, ಉದ್ಯೋಗ ಮತ್ತು ಪುನರ್ವಸತಿ ಹಕ್ಕನ್ನು ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಂಚನೆಗೆ ಒಳಗಾದ ಸಂಸ್ಥೆಯ ರಾಜ್ಯಾಧ್ಯಕ್ಷ ಅಪ್ಪಾಸಾಹೇಬ ಬುಗಡೆ, ಜಿಲ್ಲಾಧ್ಯಕ್ಷ ಸೋಮಶೇಖರರಡ್ಡಿ ಮೈದೂರ, ತಾಲೂಕಾಧ್ಯಕ್ಷ ವೈ.ಎಸ್. ಬಡ್ನಿ, ಸೈಯದ್ ಸಾಬ ಹುಲಗೂರ, ಎಸ್.ಬಿ.ವನಹಳ್ಳಿ, ಎಸ್.ಬಿ. ಜಾಡರ್, ವಿರುಪಾಕ್ಷ ಡವಗಿ, ರಮೇಶ ಹರಿಜನ ಸೇರಿದಂತೆ ಇತರರು ಇದ್ದರು. ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿವೆ: ಸರ್ಕಾರ ವ್ಯವಸ್ಥಿತವಾಗಿ ಕಾನೂನು ಕೆಲಸ ಆರಂಭಿಸಿದ್ದರೆ ಇಷ್ಟೊತ್ತಿಗೆ ಸಂತ್ರಸ್ತರಿಗೆ ಹಣ ಸಂದಾಯವಾಗುತ್ತಿತ್ತು. ಅಲ್ಲದೇ ಲಕ್ಷಾಂತರ ಹೂಡಿಕೆದಾರರು, ಏಜೆಂಟರ ವಲನೆ ಮತ್ತು ಕಿರುಕುಳದಿಂದ ಪಾರಾಗುತ್ತಿದ್ದರು. ೨೦೨೪ರ ಲೋಕಸಭಾ ಚುನಾವಣೆ ವೇಳೆ ವಂಚನೆಯ ಸಂತ್ರಸ್ತರ ಹಣವನ್ನು ಹಿಂದಿರುಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಸಾರ್ವಜನಿಕ ಸಭೆಗಳಲ್ಲಿ ದೇಶಕ್ಕೆ ಭರವಸೆ ನೀಡಿದ್ದರು. ಅದನ್ನು ಈಗ ಅವರು ಮರೆತಿದ್ದಾರೆ. ಕಷ್ಟಪಟ್ಟು ಸಂಪಾದಿಸಿದ ಬಂಡವಾಳ ಸರ್ಕಾರಿ ಸಂಸ್ಥೆಗಳು ಮತ್ತು ದರೋಡೆಕೋರರ ಕೈಯಲ್ಲಿದೆ. ಈ ಕುರಿತು ಅರ್ಜಿ ಸಲ್ಲಿಸಿದರು ಹಿಂದಿರುಗಿಸುತ್ತಿಲ್ಲ. ಇದರಿಂದಾಗಿ ಲಕ್ಷಾಂತರ ಕುಟುಂಬಗಳು ಬೀದಿಗೆ ಬರುವಂತಾಗಿದ್ದು, ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದೆ ಎಂದು ದೂರಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ