ನಮ್ಮ ಭಾಷೆ, ಸಾಹಿತ್ಯಕ್ಕೆ ಇರುವ ಆತಂಕದ ಬಗ್ಗೆ ನಾವೆಲ್ಲರೂ ಆಲೋಚಿಸಬೇಕಿದೆ. ನಾವು ಅಖಂಡ ಕರ್ನಾಟಕದ ಕನ್ನಡದ ಮಕ್ಕಳು. ನಮ್ಮೆಲ್ಲರಿಗೂ ಕನ್ನಡದ ಅನ್ನ, ಗಾಳಿ, ಬೆಳಕು, ಧ್ವನಿ ಕನ್ನಡವಾಗಿದೆ. ಇಷ್ಟಾದರೂ ಬೆಂಗಳೂರಿನಲ್ಲಿ ಕನ್ನಡದ ಅಸ್ತಿತ್ವ ಉಳಿಸಿಕೊಳ್ಳಲು ನಮ್ಮಿಂದಾಗುತ್ತಿಲ್ಲ.
ಹುಬ್ಬಳ್ಳಿ:
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತರೂ ಕನ್ನಡಕ್ಕೆ ಬೇಕಿರುವ ಸೌಲಭ್ಯಗಳಿಗಾಗಿ ಇಂದಿಗೂ ಹೋರಾಟ ಮಾಡುವ ಅನಿವಾರ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ ಎಂದು ಕಲಬುರಗಿ ಹಿರಿಯ ಸಾಹಿತಿ ಡಾ. ಜಯಶ್ರೀ ದಂಡೆ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಲಿಂಗರಾಜ ನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹುಬ್ಬಳ್ಳಿ ನಗರ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ನಮ್ಮ ಭಾಷೆ, ಸಾಹಿತ್ಯಕ್ಕೆ ಇರುವ ಆತಂಕದ ಬಗ್ಗೆ ನಾವೆಲ್ಲರೂ ಆಲೋಚಿಸಬೇಕಿದೆ. ನಾವು ಅಖಂಡ ಕರ್ನಾಟಕದ ಕನ್ನಡದ ಮಕ್ಕಳು. ನಮ್ಮೆಲ್ಲರಿಗೂ ಕನ್ನಡದ ಅನ್ನ, ಗಾಳಿ, ಬೆಳಕು, ಧ್ವನಿ ಕನ್ನಡವಾಗಿದೆ. ಇಷ್ಟಾದರೂ ಬೆಂಗಳೂರಿನಲ್ಲಿ ಕನ್ನಡದ ಅಸ್ತಿತ್ವ ಉಳಿಸಿಕೊಳ್ಳಲು ನಮ್ಮಿಂದಾಗುತ್ತಿಲ್ಲ. ಸ್ವಲ್ಪವಾದರೂ ಬೆಂಗಳೂರಿನಲ್ಲಿ ಕನ್ನಡ ಭಾಷೆ ಇದೆ ಎಂದರೆ ಅದು ಸಾಮಾನ್ಯ ಕೆಲಸ ಮಾಡುವ ಮಹಿಳೆಯರಿಂದ. ಇನ್ನಾದರೂ ಕನ್ನಡದ ಮನಸ್ಸುಗಳು ಒಂದಾಗಿ ಕನ್ನಡ ತೇರನ್ನು ಎಳೆಯುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡದ ಪ್ರತಿಭೆಗಳನ್ನು ನಮ್ಮಲ್ಲಿಯೇ ಉಳಿಸಿಕೊಂಡರೆ ಕನ್ನಡ ನಾಡನ್ನು ಸುಸಂಸ್ಕೃತ ನಾಡನ್ನಾಗಿ ಉಳಿಸಿಕೊಳ್ಳಬಹುದಾಗಿದೆ ಎಂದರು.
ಸಮ್ಮೇಳನಾಧ್ಯಕ್ಷೆ ಡಾ. ಸ್ನೇಹಾ ಭೂಸನೂರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಸಾಹಿತ್ಯ, ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಉದಯದೊಂದಿಗೆ ಕನ್ನಡ ಸಾಹಿತ್ಯ ಆನ್‌ಲೈನ್‌ಗೆ ಸಾಗಿ ಬರುತ್ತಿದೆ. ಬ್ಲಾಗ್, ಫೇಸ್‌ಬುಕ್ ಪುಟ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳು ಕನ್ನಡ ಬರಹಗಾರರಿಗೆ ತಮ್ಮ ಕೃತಿ ಪ್ರಕಟಿಸಲು ಹೊಸ ಅವಕಾಶಗಳನ್ನು ಒದಗಿಸಿವೆ. ಈ ಮೂಲಕ ಸಾಹಿತ್ಯದ ಪ್ರಸಾರಕ್ರಮದಲ್ಲಿ ಸಂವೇದನಾಶೀಲ ಬದಲಾವಣೆಗಳು ಉಂಟಾಗಿವೆ ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿದರು. ಈ ವೇಳೆ ಶಂಕರ ಕೋಳಿವಾಡ, ಲತಾ ಉಮರಾಣಿ, ಡಾ. ಎಂ.ಜಿ. ಸಜ್ಜನರ, ಡಾ. ಜಿ.ಬಿ. ಕಲಕೋಟಿ, ಗಣಪತಿ ಗಂಗೊಳ್ಳಿ, ಹುಬ್ಬಳ್ಳಿ ನಗರ ತಾಲೂಕು ಕಸಾಪ ಅಧ್ಯಕ್ಷೆ ವಿದ್ಯಾ ವಂಟಮುರಿ, ಸುನೀಲ ಪತ್ರಿ, ಚನ್ನಬಸಪ್ಪ ಧಾರವಾಡ ಶೆಟ್ಟರ್ ಸೇರಿದಂತೆ ಹಲವರಿದ್ದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಇದಕ್ಕೂ ಪೂರ್ವದಲ್ಲಿ ಲಿಂಗರಾಜ ನಗರದ ದಕ್ಷಿಣ ಸಮುದಾಯ ಭವನದಿಂದ ಸಭಾಂಗಣದ ವರೆಗೆ ಸಮ್ಮೇಳನಾಧ್ಯಕ್ಷೆ ಡಾ. ಸ್ನೇಹಾ ಭೂಸನೂರ ಅವರ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ನೋವಲ್ಲರಳಿದ ಹೂ ನಗು, ಬಿಸಿಲುಂಡ ಅರಿಶಿನ ಸೇರಿದಂತೆ ಹಲವು ಕೃತಿ ಬಿಡುಗಡೆಗೊಳಿಸಲಾಯಿತು. ನಂತರ ಆಲೋಚವೆ-ವಿವೇಚನೆ, ಕಿವಿಯಾಗೋಣ ಬನ್ನಿ ಗೋಷ್ಠಿ ಹಾಗೂ ಹಲವು ಯುವಕವಿಗಳಿಂದ ಕವಿಗೋಷ್ಠಿ ನೆರವೇರಿತು. ಬಳಿಕ ಸಮಾರೋಪ ಸಮಾರಂಭ ನೆರವೇರಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.