ದಾಬಸ್‍ಪೇಟೆ: ಉದ್ಯೋಗ ಸೇರಿದಂತೆ ಎಲ್ಲ ವಲಯದಲ್ಲಿ ಒಳ ಮೀಸಲು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲವೆಂದು ಆದಿಜಾಂಬವ ಗುರುಪೀಠದ ಷಡಕ್ಷರಮುನಿ ಸ್ವಾಮೀಜಿ ಹೇಳಿದರು
ದಾಬಸ್‍ಪೇಟೆ: ಉದ್ಯೋಗ ಸೇರಿದಂತೆ ಎಲ್ಲ ವಲಯದಲ್ಲಿ ಒಳ ಮೀಸಲು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲವೆಂದು ಆದಿಜಾಂಬವ ಗುರುಪೀಠದ ಷಡಕ್ಷರಮುನಿ ಸ್ವಾಮೀಜಿ ಹೇಳಿದರು.
ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಹರಿಹರದ ಪ್ರೋ.ಬಿ.ಕೃಷ್ಣಪ್ಪ ಅವರ ಸಮಾಧಿ ಮೈತ್ರಿವನದಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ಮಂಗಳವಾರ ದಾಬಸ್‍ಪೇಟೆಗೆ ಪ್ರವೇಶಿಸಿದ ಸಂದರ್ಭದಲ್ಲಿ ಸಮುದಾಯ ಜಾಗೃತಿ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಕೊಟ್ಟ ಭರವಸೆ ಉಳಿಸಿಕೊಳ್ಳುವಲ್ಲಿ ತನ್ನ ಬದ್ಧತೆ ಪ್ರದರ್ಶಿಸಿಲ್ಲ. ಮೂರು ದಶಕಗಳ ಹೋರಾಟವನ್ನು ಗಣನೆಗೆ ತೆಗೆದುಕೊಳ್ಳದಿರುವುದು ವಿಷಾದನೀಯ. ಸರ್ಕಾರ ಮಾದಿಗ ಸಮುದಾಯದ ನೋವನ್ನು ಕೇಳಿಯೂ ಬುಗುರಿ ರೀತಿ ಆಟ ಆಡಿಸುತ್ತಿದೆ. ಇದಕ್ಕಾಗಿ ಪಾದಯಾತ್ರೆ ಕೈಗೊಂಡಿರುವೆ. ಬೆಂಗಳೂರು ತಲುಪಿ ಫ್ರೀಡಂ ಪಾರ್ಕಿನಲ್ಲಿ ಒಳಮೀಸಲಾತಿ ಜಾರಿ ಆಗುವವರೆಗೂ ಅನಿದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ತಿಳಿಸಿದರು.
ಮೂಗಿದೆ ತುಪ್ಪ ಸವರುವ ಕೆಲಸ : ರಾಜ್ಯ ಸರ್ಕಾರ ಚುನಾವಣೆ ಸಮಯದಲ್ಲಿ ಭರವಸೆ ನೀಡಿ ಇದೀಗ ಮೂರು ವರ್ಷಗಳೇ ಉರುಳುತ್ತಾ ಬಂದರೂ ಕೊಟ್ಟ ಮಾತು ಉಳಿಸಿಕೊಳ್ಳದೇ ಬರೀ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಆಳುವ ಸರ್ಕಾರಗಳು ನೊಂದ ಸಮುದಾಯಗಳ ಹಿತ ಕಾಯಬೇಕೇ ಹೊರತು ಯಾವುದೋ ಒಂದು ಸಮುದಾಯದ ಗೊಡ್ಡು ಬೆದರಿಕೆಗಳಿಗೆ ಬಲಿಯಾಗಿ ಬೇಕಾಬಿಟ್ಟಿ ನಡೆಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಸಿಎಂ ರಾಜೀನಾಮೆ ನೀಡಬೇಕು: ಒಳಮೀಸಲಾತಿಗೆ ಸಂಬಂಧಿಸಿದಂತೆ ಮಾ.27ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಸಂಪೂರ್ಣ ಒಳಮೀಸಲಾತಿ ಜಾರಿಯಾಗಬೇಕು. ಒಳ ಮೀಸಲಾತಿ ಅನುಸಾರ ಸುಮಾರು 56432 ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಬಡ್ತಿ ಮೀಸಲಾತಿ ನೀಡಬೇಕು. ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿ ಮಾಡದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಎಲ್ಲ 31 ಡೀಸಿ ಕಚೇರಿ ಮುಂದೆ ಹೋರಾಟ:
ಪಾಲನಹಳ್ಳಿ ಮಠದ ಡಾ.ಶ್ರೀ ಸಿದ್ದರಾಜು ಸ್ವಾಮೀಜಿ ಮಾತನಾಡಿ, ಕಳೆದ 35 ವರ್ಷಗಳಿಂದ ರಾಜ್ಯಾದ್ಯಂತ ನಿರಂತರ ಹೋರಾಟ ನಡೆಸಿದ್ದೇವೆ. ಸುಪ್ರೀಂಕೋರ್ಟ್ ಪರಿಶಿಷ್ಟ ಮೀಸಲಾತಿ ವರ್ಗೀಕರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಹಾಗೂ ಸರ್ಕಾರ ದತ್ತಾಂಶ ಸಂಗ್ರಹಿಸಿ ವರ್ಗೀಕರಿಸಲಿ ಎಂದು ಐತಿಹಾಸಿಕ ತೀರ್ಪು ನೀಡಿತು. ರಾಜ್ಯ ಸರ್ಕಾರ ನಿವೃತ್ತ ನ್ಯಾ.ನಾಗಮೋಹನ್ ದಾಸ್ ಆಯೋಗ ರಚಿಸಿ ವರದಿ ಪಡೆದು ಸಚಿವ ಸಂಪುಟದಲ್ಲಿ ಅನುಮೋದಿಸಿತು. ಆ ನಂತರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಸೂದೆ ಅಂಗೀಕರಿಸಿ ರಾಜ್ಯಪಾಲರ ಸಹಿ ನಂತರ ಕಾನೂನಾಗಿದೆ. ಆದರೆ ಸರ್ಕಾರ ಯಾರೋ ಕೆಲವರು ಮಾಡುವ ವಿರೋಧವನ್ನು ಪರಿಗಣಿಸಿ, ಬಹುಸಂಖ್ಯಾತರಾಗಿರುವ ಮಾದಿಗರ ಹಿತವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ ಶ್ರೀಗಳು, ಸರ್ಕಾರದ ನಡೆಯನ್ನು ವಿರೋಧಿಸಿ ಮಾ.25ರಂದು ರಾಜ್ಯದ ಎಲ್ಲಾ ಈ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಜೊತೆಗೆ, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮನೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಹೋರಾಟ ಅನಿವಾರ್ಯ:
ಅಂಬೇಡ್ಕರ್ ಸೇನೆ ಬೆಂ.ಗ್ರಾ ಜಿಲ್ಲಾಧ್ಯಕ್ಷ ಟಗರು ಶಿವು ಮಾತನಾಡಿ, ಸಾಮಾಜಿಕ ನ್ಯಾಯದ ಪರವಾಗಿರುವ ಸಿದ್ದರಾಮಯ್ಯನವರ ಬಗ್ಗೆ ಮಾದಿಗ ಸಮುದಾಯಕ್ಕೆ ಅಪಾರವಾದ ಗೌರವವಿದೆ. ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳಮಿಸಲಾತಿಯನ್ನು ಜಾರಿ ಮಾಡುತ್ತದೆ ಎಂಬ ನಂಬಿದೆ ಇದೆ. ಇಲ್ಲದಿದ್ದರೆ ಶ್ರೀಗಳ ನೇತೃತ್ವದಲ್ಲಿ ಹೋರಾಟ ಅನಿವಾರ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲ ದೊಡ್ಡೇರಿ ವೆಂಕಟೇಶ್, ಮುಖಂಡರಾದ ರಾಮಾಂಜಿನೇಯ, ವೀರಣ್ಣ, ನಿಡವಂದ ಕಾಂತರಾಜು, ಅಂಬೇಡ್ಕರ್ ಸೇನೆ ಬೆಂ.ಗ್ರಾ. ಜಿಲ್ಲಾಧ್ಯಕ್ಷ ಟಗರು ಶಿವು, ಹೊನ್ನೇನಹಳ್ಳಿ ನರಸಿಂಹಮೂರ್ತಿ, ಗೊಟ್ಟಿಗೆರೆ ಹನುಮಂತರಾಜು, ರಾಮಕೃಷ್ಣಪ್ಪ, ಮಾರುತಿ, ಅಂಜನಮೂರ್ತಿ, ವೀರಸಾಗರ ಹನುಮಂತರಾಜು, ಭಾರತೀಪುರ ಮನು, ವಸಂತ್ ಕುಮಾರ್ ಸೇರಿದಂತೆ ನೂರಾರು ದಲಿತ ಮುಖಂಡರು, ಕಾರ್ಯಕರ್ತರು ಸ್ವಾಮೀಜಿಗಳ ಪಾದಯಾತ್ರೆಗೆ ಜೊತೆಯಾದರು.
ಪೋಟೋ 4 : ದಾಬಸ್‍ಪೇಟೆಯಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಹಮ್ಮಿಕೊಂಡಿರುವ ಪಾದೆಯಾತ್ರೆಗೆ ಆದಿಜಾಂಬವ ಗುರುಪೀಠದ ಷಡಕ್ಷರ ಮುನಿಸ್ವಾಮೀಜಿ, ಪಾಲನಹಳ್ಳಿ ಮಠದ ಡಾ.ಶ್ರೀ ಸಿದ್ದರಾಜು ಸ್ವಾಮೀಜಿಯವರನ್ನು ದಲಿತ ಮುಖಂಡರು ಸ್ವಾಗತಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.