ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಂಗೇರಿರುವ ಅಖಾಡ, ಅಖಾಡದಲ್ಲಿ ಗೆಲುವು ನಂದೇ ಅಂತ ಗುದ್ದಾಡುತ್ತಿರುವ ಟಗರುಗಳು, ಹಿಂದೆ ಹೆಜ್ಜೆಯಿಟ್ಟು ಮರುಕ್ಷಣವೇ ಮುಂದೆ ನುಗ್ಗಿ ಡಿಕ್ಕಿ ಹೊಡೆಯುತ್ತಾ ಎದುರಾಳಿಯನ್ನು ಮಣ್ಣು ಮುಕ್ಕಿಸಲು ಹೋರಾಟ, ಕೊಬ್ಬಿದ ಟಗರುಗಳ ಅಬ್ಬರದ ಕಾಳಗ ಕಂಡು ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸುತ್ತಿದ್ದ ಪ್ರೇಕ್ಷಕರು..ಈ ರೋಚಕ ದೃಶ್ಯ ನಗರದ ಎನ್‌ಇಎಸ್ ಮೈದಾನದಲ್ಲಿ ಭಾನುವಾರ ಮಾರಿಕಾಂಬ ಜಾತ್ರೆ ಅಂಗವಾಗಿ ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗದಿಂದ ಆಯೋಜಿಸಿದ್ದ ಟಗರು ಕಾಳಗದಲ್ಲಿ ಕಂಡುಬಂದವು.
ದಷ್ಟಪುಷ್ಟವಾಗಿ ಸೊಕ್ಕಿನಿಂದ ಕೊಬ್ಬಿದ ಟಗರುಗಳ ಕಾಳಗ ಜಗಜಟ್ಟಿಗಳ ಸೆಣಸಾಟವನ್ನು ನೆನಪಿಸುವಂತಿತ್ತು. ಕಾಳಗ ವೀಕ್ಷಿಸಲು ಯುವಜನರು, ರೈತರು ಆಗಮಿಸಿ,ಈ ಜಾನಪದ ಕ್ರೀಡೆಯನ್ನು ಎಂಜಾಯ್ ಮಾಡಿದರು. ಟಗರುಗಳ ರೋಚಕ ಗುದ್ದಾಟ ಮೈದಾನದ ಸುತ್ತಲೂ ನೆರದಿದ್ದ ನೋಡಿಗರ ಮೈ ಜುಮ್ಮೆನ್ನಿಸುತ್ತಿತ್ತು.ಬಹುಮಾನಗಳೇನು?:
8 ಹಲ್ಲಿನ ಕುರಿಗೆ ಪ್ರಥಮ ಬಹುಮಾನ ₹1 ಲಕ್ಷ, ದ್ವಿತೀಯ ಬಹುಮಾನ ₹50 ಸಾವಿರ, 3ನೇ ಬಹುಮಾನ ಬೆಳ್ಳಿಗದೆ, 4ನೇ ಬಹುಮಾನ ಟ್ರೋಫಿ ಇದೆ, ₹2,500 ಪ್ರವೇಶ ದರ ನಿದಿಪಡಿಸಲಾಗಿತ್ತು. 6 ಹಲ್ಲಿನ ಕುರಿಗೆ ಪ್ರಥಮ ಬಹುಮಾನ ₹50 ಸಾವಿರ, ದ್ವಿತೀಯ ಬಹುಮಾನ ₹25 ಸಾವಿರ, ತೃತೀಯ ಬಹುಮಾನ ಬೆಳ್ಳಿಗದೆ, 4ನೇ ಬಹುಮಾನ ಟ್ರೋಫಿ ಇದ್ದು, ₹2 ಸಾವಿರ ಪ್ರವೇಶ ದರ ನಿಗದಿಪಡಿಸಲಾಗಿತ್ತು.ಇನ್ನು 4 ಹಲ್ಲಿನ ಕುರಿಗೆ ಪ್ರಥಮ ಬಹುಮಾನ ₹40 ಸಾವಿರ, ದ್ವಿತೀಯ ಬಹುಮಾನ ₹20 ಸಾವಿರ, ತೃತೀಯ ಬಹುಮಾನ ಬೆಳ್ಳಿಗದೆ, 4ನೇ ಬಹುಮಾನ ಟ್ರೋಫಿ ಇದ್ದು, ₹1,500 ಪ್ರವೇಶ ದರ ಇತ್ತು. 2 ಹಲ್ಲಿನ ಕುರಿಗೆ ಪ್ರಥಮ ಬಹುಮಾನ ₹30 ಸಾವಿರ, 2ನೇ ಬಹುಮಾನ ₹15 ಸಾವಿರ, 3ನೇ ಬಹುಮಾನ ಬೆಳ್ಳಿಗದೆ, 4ನೇ ಬಹುಮಾನ ಟ್ರೋಫಿ ಇದ್ದು, ₹1000 ಪ್ರವೇಶ ದರ ನಿಗದಿಪಡಿಸಲಾಗಿತ್ತು. ಮರಿಕುರಿಗೆ ಪ್ರಥಮ ಬಹುಮಾನ ₹15 ಸಾವಿರ, ದ್ವಿತೀಯ ಬಹುಮಾನ ₹7,500, ತೃತೀಯ ಬಹುಮಾನ ಬೆಳ್ಳಿಗದೆ, 4ನೇ ಬಹುಮಾನ ಟ್ರೋಫಿ ಇದ್ದು, ₹800 ಪ್ರವೇಶ ದರ ನಿಗದಿಪಡಿಸಲಾಗಿತ್ತು.
- - - (-ಫೋಟೋಗಳಿವೆ).