ಕಾರಟಗಿ: ತಾಲೂಕಿನ ಉಳೇನೂರು ಗ್ರಾಪಂ ಆಡಳಿತದ ನಿರ್ಲಕ್ಷ್ಯ ನೀತಿ ವಿರೋಧಿಸಿ ಗ್ರಾಮದ ಸರ್ಕಾರಿ ಶಾಲೆ ಆವರಣದ ಕಸವನ್ನು ಸಂಗ್ರಹಿಸಿದ ವಿದ್ಯಾರ್ಥಿಗಳು ಪಂಚಾಯಿತಿ ಕಚೇರಿ ಮುಂದೆ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆದಿದೆ.
ಪತ್ರ ಬರೆದು ತಿಂಗಳು ಕಳೆದರೂ ಪಿಡಿಒ, ಅಧ್ಯಕ್ಷ ಮತ್ತು ಸದಸ್ಯರು ಶಾಲೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಪಂಚಾಯಿತಿ ಅಡಳಿತದ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಶಾಲಾ ವಿದ್ಯಾರ್ಥಿಗಳೇ ಆವರಣದಲ್ಲಿ ಸೇರಿದ್ದ ಕಸ ಗುಡಿಸಿ, ಅವುಗಳನ್ನು ಚೀಲದಲ್ಲಿ ತುಂಬಿ ಎತ್ತಿಕೊಂಡು ಗ್ರಾಪಂ ಕಚೇರಿ ಮುಂದೆ ಸುರಿದಿದ್ದಾರೆ. ನಿಮಗೆ ಎಷ್ಟು ಬಾರಿ ಹೇಳಿದರೂ ಅಷ್ಟೇ, ಕೆಲಸವಾಗಲ್ಲ. ಇನ್ನೂ ಮುಂದಿನ ದಿನಗಳಲ್ಲಾದರೂ ಸರಿಯಾಗಿ ಕೆಲಸ ನಿರ್ವಹಿಸುವಂತೆ ಒತ್ತಾಯಿಸಿ ಪಂಚಾಯಿತಿ ಮುಂದೆ ಒಂದು ಕಡೆ ಕಸ ಸುರಿದಿದ್ದಾರೆ. ಶಾಲೆಯ ಬಗ್ಗೆ ಅಸಡ್ಡೆ ತೋರಿದರೆ ಇನ್ನು ಮುಂದೆ ಕಸವನ್ನು ಪಂಚಾಯಿತಿ ಕಚೇರಿ ತುಂಬೆಲ್ಲ ಹರಡುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ. ಮಕ್ಕಳ ಆಕ್ರೋಶದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ತಾಪಂ ಸಿಬ್ಬಂದಿ ಕೂಡಲೇ ಪಿಡಿಒ ಸಂಪರ್ಕಿಸಿ, ಶಾಲೆಯ ಕಸ ವಿಲೇವಾರಿ ಮಾಡಿದ್ದಾರೆ.ಸಮಸ್ಯೆ ಬಗೆಹರಿಸಲು ಸೂಚಿಸಿದ್ದೇನೆ: ಉಳೇನೂರು ಗ್ರಾಪಂ ಮುಂದೆ ವಿದ್ಯಾರ್ಥಿಗಳು ಕಸ ಸುರಿದ ವಿಡಿಯೋ ನೋಡಿರುವೆ. ಪಿಡಿಒಗೆ ಕರೆ ಮಾಡಿ ಸಮಸ್ಯೆ ಪರಿಹರಿಸಲು ಸೂಚಿಸಿದ್ದೇನೆ. ಅಲ್ಲದೇ, ಬಿಇಒ ಅವರಿಗೆ ಶಾಲೆಗೆ ಭೇಟಿ ನೀಡಿ, ಸಮಸ್ಯೆ ಆಲಿಸಲು ತಿಳಿಸಿದ್ದೇನೆ. ಉಳೇನೂರು ಪಿಡಿಒ ಕರ್ತವ್ಯ ಲೋಪದ ಬಗ್ಗೆ ಪರಿಶೀಲಿಸಿ, ಮೇಲಿನ ಅಧಿಕಾರಿಗಳಿಗೆ ವರದಿ ಮಾಡುತ್ತೇನೆ ಎಂದು ಕಾರಟಗಿ ತಾಪಂ ಇಒ ಲಕ್ಷ್ಮೀದೇವಿ ಹೇಳಿದರು.