ನಿರ್ಭೀತಿಯಿಂದ ಮತ ಚಲಾಯಿಸಿ, ನಿಮ್ಮಿಷ್ಟದ ಸರ್ಕಾರ ರಚಿಸಿ

KannadaprabhaNewsNetwork |  
Published : Jan 26, 2025, 01:33 AM IST
ಕಾರ್ಯಕ್ರಮವನ್ನು ನ್ಯಾಯಾಧೀಶ ಬಸವರಾಜ ಉದ್ಘಾಟಿಸಿದರು.  | Kannada Prabha

ಸಾರಾಂಶ

ಮತದಾನದ ದಿನದಂದು ಮತ ಹಾಕದಿರಲು ವಿನಾಕಾರಣ ಕುಂಟು ನೆಪ ಹೇಳದೇ ಮತದಾನ ಮಾಡಬೇಕು.

ಗದಗ: ಅರ್ಹ ಮತದಾರರೆಲ್ಲರೂ ಮತದಾನದ ದಿನದಂದು ತಪ್ಪದೇ ಮತಗಟ್ಟೆಗೆ ತೆರಳಿ ನಿರ್ಭೀತಿಯಿಂದ ಮತ ಚಲಾಯಿಸುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಹೇಳಿದರು.

ಅವರು ಶನಿವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಗದಗ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆಯ ಜಿಲ್ಲಾಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮತದಾನದ ದಿನದಂದು ಮತ ಹಾಕದಿರಲು ವಿನಾಕಾರಣ ಕುಂಟು ನೆಪ ಹೇಳದೇ ಮತದಾನ ಮಾಡಬೇಕು. ಮತದಾನದ ದಿನದಂದು ಮತ ಚಲಾವಣೆಗಾಗಿಯೇ ಅವಕಾಶ ಮಾಡಿಕೊಡಲಾಗುತ್ತದೆ. ಅದನ್ನು ಚಲಾಯಿಸಿ ತಮ್ಮಿಷ್ಟದ ವ್ಯಕ್ತಿಗಳ ಆಯ್ಕೆ ಮಾಡುವ ಹಕ್ಕನ್ನು ಮತದಾನದ ಮೂಲಕ ಮಾಡುವಂತೆ ತಿಳಿಸಿದರು. ಮತದಾನದ ದಿನದಂದು ಮತ ಚಲಾಯಿಸದೇ ಪಿಕ್ನಿಕ್ ಹೋಗುವುದು, ಮತದಾನ ಬಹಿಷ್ಕಾರ ಮಾಡುವುದು ಸರಿಯಾದ ಕ್ರಮ ಅಲ್ಲ ಎಂದರು.

ಮತದಾನದ ಚೀಟಿ ಹೊಂದಿರುವವರು ಮತದಾನದ ಮಹತ್ವದ ಬಗ್ಗೆ ಜಾಗೃತರಾಗಬೇಕು ಮತ್ತು ಹೊಸದಾಗಿ 18 ವರ್ಷ ತುಂಬಿದವರು ತಮ್ಮ ಮತದಾರರ ಪಟ್ಟಿ ನೋಂದಾಯಿಸಬೇಕು. ಭಾರತ ಚುನಾವಣಾ ಆಯೋಗದ ಸಂಸ್ಥಾಪನಾ ದಿನವಾದ ಜ. 25,2011 ರಿಂದ ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬಂದಿದೆ. ರಾಷ್ಟ್ರವನ್ನು ಮುನ್ನಡೆಸಲು ಮತ್ತು ಜನರ ಸಮಸ್ಯೆಗೆ ಸ್ಪಂದಿಸುವ ನಾಯಕರನ್ನು ಚುನಾಯಿಸಿ ನಮಗೆ ಬೇಕಾದ ಸರ್ಕಾರ ಆಯ್ಕೆ ಮಾಡಿಕೊಳ್ಳುವುದರಲ್ಲಿ ಮತದಾನವು ಭದ್ರಬುನಾದಿಯಾಗಿದೆ ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧ್ಯಕ್ಷತೆ ವಹಿಸಿ, ಪ್ರತಿಜ್ಞಾ ವಿಧಿ ಬೋಧಿಸಿ‌ ಮಾತನಾಡಿ, ಮತದಾರರಿಗೆ ತಮ್ಮ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲು ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರೇರಣೆ ನೀಡಲಿದೆ ಎಂದರು.

ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ.ಪಲ್ಲೇದ ಮುಂತಾದವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಚುನಾವಣಾ ಕಾರ್ಯ ನಿರ್ವಹಿಸಿದ ಐ.ಎಲ್.ಒ.ಗಳಿಗೆ ಸನ್ಮಾನಿಸಲಾಯಿತು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಸ್ವೀಪ್ ಸಮಿತಿಯು ಏರ್ಪಡಿಸಿದ ಪ್ರಬಂಧ, ಭಿತ್ತಿಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಯುವ ಮತದಾರರಿಗೆ ಸಂಕೇತಿಕವಾಗಿ ಮತದಾರರ ಚೀಟಿ ವಿತರಿಸಲಾಯಿತು.

ಜಿಪಂ ಸಿಇಓ ಭರತ್ ಎಸ್, ಎಸ್ಪಿ ಬಿ.ಎಸ್.ನೇಮಗೌಡ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ, ಜಿಪಂ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಮುದುಕಮ್ಮನವರ ಸ್ವಾಗತಿಸಿದರು. ಉಪವಿಭಾಗಾಧಿಕಾರಿ ಗಂಗಪ್ಪ ಎಂ ವಂದಿಸಿದರು. ಪ್ರಾಚಾರ್ಯ ಬಸವರಾಜ ಗಿರಿತಿಮ್ಮಣ್ಣನವರ ನಿರೂಪಿಸಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ