ನೆತ್ತಿ ಸುಡುತಾನೆ ಸೂರ್ಯ.. ಜನರೇ ಎಚ್ಚರ...

KannadaprabhaNewsNetwork |  
Published : Mar 04, 2026, 02:00 AM IST
ಕ್ಯಾಪ್ಷನ1ಕೆಡಿವಿಜಿ31 ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಸೂರ್ಯನ ತಾಪಮಾನವು ದಿನೇದಿನೇ ಏರುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಮಾರ್ಗಸೂಚಿಗಳನ್ನು ಜನತೆ ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

- ಬಿಸಿಗಾಳಿ ತೀವ್ರತೆ ಹಿನ್ನೆಲೆ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ, ಮಾರ್ಗಸೂಚಿ ಪ್ರಕಟ । ಆರೋಗ್ಯ ರಕ್ಷಣೆ ಕಾಳಜಿಗೆ ಡಿಸಿ ಮನವಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲಿ ಸೂರ್ಯನ ತಾಪಮಾನವು ದಿನೇದಿನೇ ಏರುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಮಾರ್ಗಸೂಚಿಗಳನ್ನು ಜನತೆ ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ 2026ರ ಫೆಬ್ರವರಿ ಕೊನೆ ವಾರದಲ್ಲಿ ತಾಪಮಾನ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್‌ನಿಂದ 36 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ. ಫೆ. 28ರಂದು ಗರಿಷ್ಠ ತಾಪಮಾನ 33.9 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 20.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಅಂತೆಯೇ, ಫೆ.27ರಂದು ಗರಿಷ್ಠ 33, ಕನಿಷ್ಠ 19, ಫೆ.26ರಂದು ಗರಿಷ್ಠ 34.4 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿತ್ತು. ಫೆ.25ರಂದು ಜಿಲ್ಲೆಯಲ್ಲಿ ಗರಿಷ್ಠ 35.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಕಂಡುಬಂದಿತ್ತು. ಒಟ್ಟಾರೆಯಾಗಿ ಫೆಬ್ರವರಿ ತಿಂಗಳ ಉದ್ದಕ್ಕೂ ತಾಪಮಾನ ಸರಾಸರಿ 25 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು, ತಿಂಗಳ ಅಂತ್ಯದ ವೇಳೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದು ಕಂಡುಬಂದಿದೆ.

ಜನರು ಏನು ಮಾಡಬೇಕು?:

- ಹೆಚ್ಚು ನೀರು ಕುಡಿಯಿರಿ, ಬಾಯಾರಿಕೆ ಇಲ್ಲದಿದ್ದರೂ ನಿಯಮಿತವಾಗಿ ನೀರು, ಒಆರ್‌ಎಸ್, ಮಜ್ಜಿಗೆ, ಲಿಂಬೆ ಪಾನಕ ಅಥವಾ ಎಳನೀರನ್ನು ಸೇವಿಸಬೇಕು.

- ಸೂಕ್ತವಾದ, ಸಡಿಲವಾದ, ತಿಳಿಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಹೊರಗೆ ಸಂಚರಿಸುವಾಗ ಛತ್ರಿ, ಟೋಪಿ ಅಥವಾ ಕನ್ನಡಕ ಬಳಸಬೇಕು.

- ಮಕ್ಕಳಿಗೆ ಚೆನ್ನಾಗಿ ಕುದಿಸಿ ಆರಿಸಿದ ನೀರು ಮತ್ತು ತಾಜಾ ಆಹಾರಗಳನ್ನು ನೀಡಬೇಕು. ಮಧ್ಯಾಹ್ನದ ಸಮಯದಲ್ಲಿ ಮಕ್ಕಳನ್ನು ಬಿಸಿಲಿನಲ್ಲಿರಲು ಬಿಡಬಾರದು.

- ಕೆಲಸದ ನಡುವೆ ಆಗಾಗ್ಗೆ ನೆರಳಿನಲ್ಲಿ ವಿಶ್ರಾಂತಿ ಪಡೆಯಬೇಕು. ಮನೆಗಳನ್ನು ತಂಪಾಗಿರಿಸಲು ಕಿಟಕಿಗಳಿಗೆ ಪರದೆ ಬಳಸಿ. ಸಾಕುಪ್ರಾಣಿಗಳನ್ನು ನೆರಳಿನಲ್ಲಿ ಕಟ್ಟಿ ಹಾಕಿ ಮತ್ತು ಅವುಗಳಿಗೆ ಸಾಕಷ್ಟು ಕುಡಿಯುವ ನೀರು ನೀಡಬೇಕು.

ಏನು ಮಾಡಬಾರದು?:

ಮಧ್ಯಾಹ್ನ 12 ಗಂಟೆಯಿಂದ 3 ಗಂಟೆವರೆಗೆ ಅತಿ ಹೆಚ್ಚು ಬಿಸಿಲಿರುವ ಸಮಯವಾಗಿರುತ್ತದೆ. ಆದ್ದರಿಂದ ಈ ವೇಳೆ ಅನಗತ್ಯವಾಗಿ ಹೊರಗೆ ತಿರುಗಾಡುವುದು, ಆಟವಾಡುವ ಚಟುವಟಿಕೆಗಳನ್ನು ತಪ್ಪಿಸಬೇಕು.

ಮದ್ಯಪಾನ, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸಬಾರದು. ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ. ಅತಿ ಹೆಚ್ಚು ತಾಪಮಾನ ಇರುವಾಗ ಕಠಿಣ ದೈಹಿಕ ಶ್ರಮದ ಕೆಲಸಗಳನ್ನು ಮಾಡಬೇಡಿ. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಒಬ್ಬಂಟಿಯಾಗಿ ಬಿಡಬಾರದು.

ಶಾಖಾಘಾತದ ಲಕ್ಷಣಗಳು- ತುರ್ತು ಚಿಕಿತ್ಸೆ:

ದೇಹದ ಉಷ್ಣತೆ 40 ಡಿಗ್ರಿಗಿಂತ ಹೆಚ್ಚಾಗುವುದು, ತಲೆಸುತ್ತು, ವಾಂತಿ, ತೀವ್ರ ತಲೆನೋವು ಅಥವಾ ಪ್ರಜ್ಞೆ ತಪ್ಪುವುದು ಶಾಖಾಘಾತದ (ಹೀಟ್ ಸ್ಟ್ರೋಕ್) ಲಕ್ಷಣಗಳಾಗಿವೆ. ಅಂತಹ ಸಂದರ್ಭದಲ್ಲಿ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಿ. ತಣ್ಣೀರಿನಿಂದ ಮೈ ಒರೆಸಿ ಅಥವಾ ನೀರಿನಲ್ಲಿ ಅದ್ದಿದ ಸ್ಪಂಜಿನಿಂದ ಸ್ನಾನ ಮಾಡಿಸಬೇಕು. ತಕ್ಷಣವೇ 108 ಅಥವಾ 104 ಸಹಾಯವಾಣಿಗೆ ಕರೆ ಮಾಡಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಸೌಲಭ್ಯ ಕಲ್ಪಿಸಬೇಕು.

- - -

(ಬಾಕ್ಸ್‌) * ಜಿಲ್ಲಾಧಿಕಾರಿ ಆದೇಶ

ಶಾಲಾ- ಕಾಲೇಜುಗಳ ಸಮಯವನ್ನು ಬಿಸಿಲಿಗೆ ತಕ್ಕಂತೆ ಬದಲಾಯಿಸಲು ಮತ್ತು ಕಾರ್ಮಿಕರಿಗೆ ಮಧ್ಯಾಹ್ನದ ಸಮಯದಲ್ಲಿ ಕಡ್ಡಾಯ ವಿಶ್ರಾಂತಿ ನೀಡಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಈ ಮಾರ್ಗಸೂಚಿಗಳನ್ನು ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸೂಚಿಸಿದ್ದಾರೆ.

- - -

-1ಕೆಡಿವಿಜಿ31: ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜ್ಞಾನ ಮಾನವನ ಏಳಿಗೆಯ ರಹದಾರಿ: ಎಸ್‌ಪಿ ಶೇಖರ್
ಎಸ್‌ಸಿ, ಎಸ್‌ಟಿಗೆ ವರ್ಗಕ್ಕೆ ಸರ್ಕಾರ ಘೋರ ಅನ್ಯಾಯ