ಬಿಸಿಲಿಗೆ ಬೇಯುತ್ತಿದೆ ಮಲೆನಾಡು ಸೆರಗು ಕಲಘಟಗಿ!

KannadaprabhaNewsNetwork |  
Published : Mar 29, 2025, 12:33 AM IST
26ಡಿಡಬ್ಲೂಡಿ1ಕಲಘಟಗಿ ತಾಲೂಕಿನ ಕೆ. ಹುಣಸಿಕಟ್ಟಿ ಗ್ರಾಮಸ್ಥರಿಗೆ ದಿನಬಳಕೆಗೆ ಮತ್ತು ಜಾನುವಾರುಗಳಿಗೆ ನೀರಿನ ಆಸರೆಯಾಗಿದ್ದ ತುಂಬಹೊಂಡ ನೀರಿಲ್ಲದೆ ಬತ್ತಿ ಹೋಗಿರುವುದು.  | Kannada Prabha

ಸಾರಾಂಶ

ಕಲಘಟಗಿಯಲ್ಲಿ ಎರಡು ತಿಂಗಳಿಂದ ಬಿಸಿಲಿನ ತಾಪಕ್ಕೆ ಜನರು ತತ್ತರಿಸಿದ್ದು, ಎಳನೀರು, ಮಜ್ಜಿಗೆ ಹಾಗೂ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ.

ರಮೇಶ್ ಸೋಲಾರಗೊಪ್ಪ

ಕಲಘಟಗಿ: ಮಲೆನಾಡು ಸೆರಗು ಕಲಘಟಗಿ ಸಹ ಬಿಸಿಲಿನ ಬೇಗೆಯಿಂದ ಬೇಯುತ್ತಿದೆ. ಇತ್ತೀಚಿಗೆ ಸುರಿದ ಸ್ವಲ್ಪ ಮಳೆಯಿಂದ ಜನತೆಯಲ್ಲಿ ಮಂದಹಾಸ ಮೂಡಿದರೂ ಮತ್ತೆ ಎಂದಿನಂತೆ ಬಿಸಿಲಿನ ತಾಪ ಊರಿನ ಜನರ ನಿದ್ದೆಗೆಡಿಸಿದೆ.

ಎರಡು ತಿಂಗಳಿಂದ ಬಿಸಿಲಿನ ತಾಪಕ್ಕೆ ಜನರು ತತ್ತರಿಸಿದ್ದು, ಎಳನೀರು, ಮಜ್ಜಿಗೆ ಹಾಗೂ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಮನೆ ಹಾಗೂ ಕಚೇರಿಗಳಲ್ಲಿ ನಿತ್ಯದ ಕೆಲಸ ನಿರ್ವಹಿಸುವರು ಬಿಸಿಲಿನ ಝಳದ ಪರಿಣಾಮ ನಿತ್ಯ ಉಸಿರುಗಟ್ಟುವಂತಾಗಿದೆ.

ತೀವ್ರ ಬಿಸಿಲಿನ ವಾತಾವರಣದಿಂದ ಜಾನುವಾರುಗಳಿಗೆ ದಿನನಿತ್ಯ ಕುಡಿಯಲು ಬಹತೇಕ ಕೆರೆಗಳಲ್ಲಿ ನೀರಿಲ್ಲ. ಇಷ್ಟು ದಿನಗಳ ಕಾಲ ದನಕರುಗಳಿಗೆ ದಿನನಿತ್ಯ ನೀರು ಕುಡಿಸುವುದು ಮೈ ತೊಳೆಯುವುದು ಮಾಡುತ್ತಿದ್ದ ರೈತರು ಈಗ ಕೆರೆಗಳಲ್ಲಿ ನೀರಿಲ್ಲದ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ಜೊತೆಗೆ ಒಂದೆಡೆ ಮೇವಿನ ಹುಡುಕಾಟವಾದರೆ ಬಿಸಿಲಿನ ಬೇಗೆ ಕಳೆಯಲು ಇಲ್ಲಿನ ಜಾನುವಾರುಗಳು ಕಲುಷಿತಗೊಂಡಿರುವ ಹಳ್ಳ, ಕೆರೆ, ಚರಂಡಿ ನೀರಿನಲ್ಲಿ ಮಲಗುತ್ತಿದ್ದು, ಅದೇ ನೀರನ್ನು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುವ ಭಯದಲ್ಲೂ ಇದ್ದಾರೆ.

ಅರಣ್ಯ ಭಾಗದಲ್ಲಿರುವ ಪ್ರಾಣಿ-ಪಕ್ಷಿಗಳು, ವನ್ಯಜೀವಿಗಳು ಬಿಸಿಲಿನ ತಾಪ ತಾಳಲಾರದೆ ಪಟ್ಟಣದತ್ತ ನುಗ್ಗುವ ಸಾಧ್ಯತೆಗಳೂ ಇವೆ. ರೈತರ ಹೊಲಗಳಲ್ಲಿ ಕೊಳವೆ ಬಾವಿಗಳ ಅಂತರ್ಜಲ ಕುಸಿದ ಪರಿಣಾಮ ಬೆಳೆಗಳು ಒಣಗುತ್ತಿವೆ.

ಕಲಘಟಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 17 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ವಾರಕ್ಕೊಮ್ಮೆ ಅದು ಕೇವಲ ಒಂದೂವರೆ ಗಂಟೆ ಕುಡಿಯುವ ನೀರನ್ನು ಬಿಡಲಾಗುತ್ತಿದೆ. ಎರಡು ಕಿಮೀ ದೂರದ ಬೆಣಚಿ ಕೆರೆಯಿಂದ ಈ ನೀರು ಸರಬರಾಜು ಮಾಡಲಾಗುತ್ತಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನೀರಿನ ಟ್ಯಾಂಕ್ ತುಂಬಲು ಗಂಟೆಗಟ್ಟಲೆ ಬೇಕಾಗುತ್ತದೆ. ಹೀಗಾಗಿ, ಪ್ರತಿದಿನ ಎಲ್ಲ ವಾರ್ಡ್‌ಗಳಿಗೆ ನೀರಿನ ಹಂಚಿಕೆ ಮಾಡುವುದು ತಲೆನೋವಾಗಿದೆ.

ಪಟ್ಟಣದಲ್ಲಿ ಜೆಜೆಎಂ ಕಾಮಗಾರಿ ನಡೆದಿರುವುದರಿಂದ ಅಲ್ಲಲ್ಲಿ ಪೈಪ್ ಲೈನ್ ಗಳು ಒಡೆದು ಹೋಗಿವೆ. ಇದರಿಂದ ಕಲುಷಿತ ನೀರು ಮಿಶ್ರಣವಾಗಿ ಪಟ್ಟಣದ ಜನರಿಗೆ ಅಲರ್ಜಿ, ಅನಾರೋಗ್ಯದ ಸಮಸ್ಯೆಗಳಾಗುತ್ತಿವೆ. ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಹತ್ತು ಘಟಕಗಳಿದ್ದು, ಕೇವಲ ಎರಡು ಮಾತ್ರ ಕಾರ್ಯನಿರ್ವಹಿಸಿಸುತ್ತಿವೆ. ಉಳಿದ ಎಂಟು ನಿರ್ವಹಣೆ ಕೊರತೆಯಿಂದ ಬಂದ್‌ ಆಗಿವೆ. ಈ ಕುರಿತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕಾಂತ್ ಕುಲಕರ್ಣಿ ಅವರನ್ನು ಕೇಳಿದಾಗ ಸ್ಪಷ್ಟ ಉತ್ತರ ಬರುತ್ತಿಲ್ಲ.

ಪ್ರತಿ ಬಾರಿ ಪಂಚಾಯಿತಿಯಲ್ಲಿ ಸಭೆ ಸೇರಿದಾಗ ಕುಡಿಯುವ ನೀರಿನ ಬಗ್ಗೆ ಚರ್ಚಿಸುವ ಯೋಜನೆಗಳನ್ನು ತಯಾರಿಸುತ್ತಿದ್ದಾರೆಯೇ ಹೊರತು, ಅವುಗಳನ್ನು ಕಾರ್ಯರೂಪಕ್ಕೆ ತರುತ್ತಿಲ್ಲ. ಪಟ್ಟಣದ ಜನತೆ ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎನ್ನುತ್ತಾರೆ ಪಟ್ಟಣದ ನಿವಾಸಿ ಶಶಿಕುಮಾರ ಕಟ್ಟಿಮನಿ.

ತಾಲೂಕಿನ 28 ಗ್ರಾಪಂಗಳ ವ್ಯಾಪ್ತಿಯಲ್ಲಿ ಬಮ್ಮಿಗಟ್ಟಿ ಮತ್ತು ಶೀಗಿಗಟ್ಟಿ ತಾಂಡಾಗಳಲ್ಲಿ ಮಾತ್ರ ಇತ್ತೀಚಿಗೆ ತೀವ್ರ ನೀರಿನ ಅಭಾವ ಉಂಟಾಗಿತ್ತು. ಈಗಾಗಲೇ ಖಾಸಗಿ ಕೊಳವೆ ಬಾವಿಗಳ ಮೂಲಕ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನ ಆಯಾ ಗ್ರಾಮ ಅಭಿವೃದ್ಧಿ ಅಧಿಕಾರಿಗಳಿಗೆ ನೀರಿನ ಅಭಾವ ಎದುರಾಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ವೈ. ಸಾವಂತ್ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ