ಮಹೇಶ ಛಬ್ಬಿ ಮುಳಗುಂದ
ಪಟ್ಟಣದ ಭೋಗೇರಿ ಓಣಿಯ ಸುಂಕಾಪುರ ಮನೆತನದಲ್ಲಿ ಅನಾದಿ ಕಾಲದಿಂದಲೂ ವಾಸವಾಗಿರುವ ಶ್ರೀದೇವಿಗೆ ಇಲ್ಲಿ ಪೂಜ್ಯನೀಯ ಸ್ಥಾನವಿದೆ. ಭಕ್ತರ ಕಷ್ಟ ಕಾರ್ಪಣ್ಯ ಕಳೆಯುತ್ತಾಳೆ ಎಂಬ ಅಚಲವಾದ ನಂಬಿಕೆ ಈ ಮನೆತನ ಹಾಗೂ ಜನರಲ್ಲಿ ನೆಲೆಯೂರಿದೆ.
ಶಕ್ತಿ ಸ್ವರೂಪಿಣಿ, ಜಗನ್ಮಾತೆ, ನಂಬಿ ನಡೆದುಕೊಂಡ ಸಕಲ ಸದ್ಭಕ್ತರ ಕಾಮನೆ ಈಡೇರಿಸುವ, ಕಾಲಕಾಲಕ್ಕೆ ವಿವಿಧ ಅವತಾರಗಳನ್ನು ತಾಳಿ ಜಗದ್ರಕ್ಷಕಿಯಾಗಿರುವ ಆದಿಶಕ್ತಿ ಶ್ರೀಗ್ರಾಮ ದೇವತೆಯ ಟೋಪ ಜಾತ್ರಾ ಮಹೋತ್ಸವ ಜೂ.3 ರಿಂದ ಪ್ರಾರಂಭವಾಗಿದ್ದು, ಜಾತ್ರೆಯ ಮೊದಲ ದಿನ ಭಕ್ತರ ಮನೆಗಳಿಗೆ (ಕಟ್ಟಿ ಮನೆಗಳಿಗೆ) ಭೇಟಿ ನೀಡುವ ಪೂರ್ವದಲ್ಲಿ ಗ್ರಾಮದೇವತೆಯರ ಮೂರ್ತಿಗಳು ಸುಂಕಾಪುರ ಮನೆಗೆ ಬಂದು ಇಲ್ಲಿ ಪೂಜಾ ಕೈಂಕರ್ಯಗಳು ನಡೆದು ಶ್ರೀದೇವಿಯರಿಗೆ ಉಡಿ ತುಂಬಿದ ನಂತರ ಮುಂದಿನ ಕಟ್ಟೆ ಮನೆಗಳಿಗೆ (ಗ್ರಾಮದ ಪ್ರಮುಖರ) ಭೇಟಿ ನೀಡಿ ನಂತರ ಚೌತಮನೆಯ ಕಟ್ಟೆಗೆ ಆಗಮಿಸಿ ವಾಸ್ತವ್ಯ ಹೂಡುವದು, ಜತೆಗೆ ಭಕ್ತರ ಮನೆ ಮನೆಗೆ ತೆರಳಿ ಉಡಿ ತುಂಬಿಸಿಕೊಳ್ಳುವ ಕಾರ್ಯ ಜರಗುವುದು ಸಂಪ್ರದಾಯ.ಸುಂಕಾಪುರ ಮನೆಗೆ ಮೊದಲು ಭೇಟಿ ನೀಡುವ ಕಾರಣದಿಂದ ಗ್ರಾಮದೇವತೆಯ ತವರು ಮನೆ ಸುಂಕಾಪುರ ಮನೆತನ ಎನ್ನಲಾಗುತ್ತದೆ.
ಸುಂಕಾಪುರ ಮನೆಯಲ್ಲಿ ನವರಾತ್ರಿಯ 9 ದಿನಗಳ ಕಾಲ ಮನೆತನದ ಸರ್ವ ಸದಸ್ಯರು ಮಡಿ ಉಡಿಯಿಂದ ವಿಶೇಷವಾಗಿ ಶ್ರೀದೇವಿ ಆರಾಧನೆ ಮಾಡಿ ಕೊನೆ ದಿನ ದಾಸೋಹದ ಸೇವೆ ಮಾಡುತ್ತಾರೆ.
ಕಾರಹುಣ್ಣಿಮೆ ಸಮಯದಲ್ಲಿ ಗ್ರಾಮ ದೇವತೆಯಿಂದ ಈ ಮನೆತನದ ದೇವಿಗೆ ಬಾಸಿಂಗ್, ಉಲುಪಿ ಮೊದಲು ನೀಡಿ ನಂತರ ಊರಿನ 4 ಮನೆತನಕ್ಕೆ ನೀಡಿ ಕರಿ ಹರಿಯುವ ಪದ್ಧತಿ ಇದೆ. ರೈತರು ಹೊಲ ಬಿತ್ತನೆ ಸಮಯದಲ್ಲಿ ದೇವಿಗೆ ಬಿತ್ತನೆ ಬೀಜಗಳನ್ನು ನೈವೇದ್ಯ ಮಾಡಿದ ನಂತರ ಬಿತ್ತನೆ ಮಾಡುವುದು ಸಹ ವಿಶೇಷವಾಗಿದೆ.