ವಿಶೇಷ ವರದಿ
ಪಟ್ಟಣದಲ್ಲಿ ಪಾದಚಾರಿಗಳಿಗೆಂದು ನಿರ್ಮಾಣ ಮಾಡಲಾಗಿರುವ ಫುಟ್‌ಪಾಟ್‌ಗಳು ಅತಿಕ್ರಮಣವಾಗಿವೆ. ಫುಟ್‌ಪಾತ್‌ಗಳಲ್ಲಿ ಅಂಗಡಿಗಳು ಓಪನ್ ಆಗಿದ್ದು, ಕೆಲವೆಡೆ ವಾಹನಗಳ ಪಾರ್ಕಿಂಗ್ ಸ್ಥಳಗಳಾಗಿವೆ. ಇದರಿಂದ ಸಾರ್ವಜನಿಕರು ಮುಖ್ಯ ರಸ್ತೆಯಲ್ಲಿ ಕೈಯಲ್ಲಿ ಜೀವ ಹಿಡಿದು ಓಡಾಡುವಂತಾಗಿದ್ದು, ಇದನ್ನು ಗಮನಿಸದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.
ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿಂದ ಮಾರುಕಟ್ಟೆ ಪ್ರದೇಶ ಹಾಗೂ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್ ಅತಿಕ್ರಮಣಗೊಂಡಿದೆ. ಅಲ್ಲಿ ಓಡಾಡಬೇಕಿದ್ದ ಪಾದಚಾರಿಗಳು ನಿತ್ಯವೂ ಪರದಾಡುವಂತಾಗಿದೆ. ಶಾಲೆ-ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು ಹೋಗಲು ಮುಖ್ಯ ರಸ್ತೆಯನ್ನೇ ಅವಲಂಬಿಸಬೇಕಾಗಿದೆ.ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ (ಫಂಡರಪೂರ- ಗಾಣಗಾಪೂರ, ಶಿರಾಡೋಣ-ಲಿಂಗಸೂರು ರಸ್ತೆ) ಹಾದು ಹೋಗಿದೆ. ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣ ಎದುರಿನ ದೂರಸಂಪರ್ಕ ಇಲಾಖೆ, ಸಂಗೊಳ್ಳಿ ರಾಯಣ್ಣ ವೃತ್ತ, ಅಗರಖೇಡ ರಸ್ತೆ, ಸ್ಟೇಷನ್ ರಸ್ತೆಯ ಮಹಾವೀರ ವೃತ್ತದೊಂದಿಗೆ ಹಂಜಗಿ ನಾಕಾದವರಿಗೂ, ವಿಜಯಪುರ ರಸ್ತೆಯ ಡಿಸಿಸಿ ಬ್ಯಾಂಕ್‌ವರೆಗೆ ನಿರ್ಮಿಸಿರುವ ಫುಟ್‌ಪಾತ್ ಸಂಪೂರ್ಣ ಅತಿಕ್ರಮಣವಾಗಿದ್ದು, ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.
ಇಂಥವರ ಮೇಲೆ ಪುರಸಭೆ ಹಾಗೂ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವ ಆರೋಪ ಕೂಡ ಕೇಳಿಬಂದಿದೆ. ಅತಿಕ್ರಮಣ ತೆರವುಗೊಳಿಸಿ ಪಾದಚಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ವಿಫಲವಾಗಿದ್ದು, ಫುಟ್‌ಪಾತ್ ಒತ್ತುವರಿಯಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ತರಕಾರಿ ಮಾರುಕಟ್ಟೆ ದೂರಸಂಪರ್ಕ ಕಚೇರಿ ಬಳಿ, ಬಸವೇಶ್ವರ ವೃತ್ತದ ಸುತ್ತಲೂ ವಾಹನಗಳು ರಸ್ತೆಯ ಮೇಲೆ ನಿಲ್ಲಿಸುತ್ತಿದ್ದು, ರಸ್ತೆಯಲ್ಲಿ ಓಡಾಡುವವರು ಹೈರಾಣಾಗಿದ್ದಾರೆ.
ಬಸವೇಶ್ವರ ವೃತ್ತದಿಂದ ಸ್ಟೇಷನ್ ರಸ್ತೆ, ವಿಜಯಪುರ ರಸ್ತೆ, ಅಗರಖೇಡ ರಸ್ತೆ, ಸಿಂದಗಿ ರಸ್ತೆಯ ಕೆಎಸ್ಆರ್ಟಿಸಿ ಮಳಿಗೆಗಳು ಸೇರಿದಂತೆ ಸುಮಾರು 400 ರಿಂದ 500 ವ್ಯಾಪಾರಸ್ಥರು ಫುಟ್‌ಪಾತ್ ಅನ್ನೇ ಅತಿಕ್ರಮಣ ಮಾಡಿ ಓಡಾಡದಂತೆ ಮಾಡಿದ್ದಾರೆ. ಮೇಲಾಗಿ ಫುಟ್‌ಪಾತ್ ಮೇಲೆ ಜನರು ಹಾದು ಹೋದರೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಮುಖ್ಯ ರಸ್ತೆಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಕೋಟ್........
ಧರ್ಮರಾಜ ಸಾಲೋಟಗಿ, ಸ್ಥಳೀಯ ಮುಖಂಡರಸ್ತೆ ಅತಿಕ್ರಮಣ, ಪಾದಚಾರಿ ರಸ್ತೆ, ಸಿಗ್ನಲ್ ದೀಪದ ಕುರಿತು ಕೆಡಿಪಿ ಸಭೆಯಲ್ಲಿ ಚರ್ಚೆಯಾಗಿದೆ. ಫುಟ್‌ಪಾತ್ ಅತಿಕ್ರಮಣ ತೆರವಿಗಾಗಿ ಯೋಜನೆ ರೂಪಿಸಲಾಗಿದೆ. ಪೊಲೀಸ್ ಇಲಾಖೆ ಸಹಕಾರದೊಂದಿಗೆ ಸದ್ಯದಲ್ಲೇ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯ ಸಿಪಿಐ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ.
- ಪ್ರದೀಪ ಭೀಸೆ, ಸಿಪಿಐ