ಚುನಾವಣಾ ಪ್ರಚಾರಕ್ಕೂ ತಟ್ಟಿದ ಬಿಸಿಲಿನ ಝಳ

KannadaprabhaNewsNetwork |  
Published : Apr 09, 2024, 12:48 AM ISTUpdated : Apr 09, 2024, 11:22 AM IST
ಫೋಟೊ | Kannada Prabha

ಸಾರಾಂಶ

ಈ ಬಾರಿ ಎಲ್ಲ ಕಡೆ ಬಿಸಿಲಿನ ಝಳ ಹೆಚ್ಚಿದೆ. ಕರಾವಳಿಯಲ್ಲಿ ಬಿಸಿಲಿಗೆ ಬೆವರು ಹರಿಯುತ್ತಿದ್ದರೆ, ಉಳಿದೆಡೆ ಮೈಸುಡುತ್ತಿದೆ.

ಕಾರವಾರ: ಚುನಾವಣೆ ಪ್ರಚಾರಕ್ಕೆ ಹೋಗುತ್ತಿರುವವರು ಸುಡುಬಿಸಿಲು, ಹರಿಯುತ್ತಿರುವ ಬೆವರಿನಿಂದ ಹೈರಾಣಾಗಿದ್ದಾರೆ. ಸದ್ಯಕ್ಕೆ ಚುನಾವಣಾ ಕಾವಿಗಿಂತ ಬಿಸಿಲಿನ ಝಳ ಹೆಚ್ಚಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಭೌಗೋಳಿಕವಾಗಿ ವಿಶೇಷವಾಗಿದೆ. ಏಕೆಂದರೆ ಇಲ್ಲಿ ಕರಾವಳಿ, ಮಲೆನಾಡು, ಅರೆಬಯಲುಸೀಮೆ ಹಾಗೂ ಬಯಲುಸೀಮೆ ಎಲ್ಲವೂ ಇವೆ. ಈ ಬಾರಿ ಎಲ್ಲ ಕಡೆ ಬಿಸಿಲಿನ ಝಳ ಹೆಚ್ಚಿದೆ. ಕರಾವಳಿಯಲ್ಲಿ ಬಿಸಿಲಿಗೆ ಬೆವರು ಹರಿಯುತ್ತಿದ್ದರೆ, ಉಳಿದೆಡೆ ಮೈಸುಡುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಆಗಿದೆ. ಹೀಗಾಗಿ ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾಂಗ್ರೆಸ್‌ನಿಂದ ಡಾ. ಅಂಜಲಿ ನಿಂಬಾಳ್ಕರ್ ನಡುವೆ ಈ ಕ್ಷೇತ್ರದಲ್ಲಿ ನೇರವಾದ ಪೈಪೋಟಿ ಇದ್ದು, ಈ ಎರಡು ಪಕ್ಷಗಳ ಕಾರ್ಯಕರ್ತರು, ಮುಖಂಡರು ಹಾಗೂ ಅಭ್ಯರ್ಥಿಗಳು ಬಿಸಿಲ ಬೇಗೆಯಲ್ಲೇ ಪ್ರಚಾರ ನಡೆಸಬೇಕಾದ ಅನಿವಾರ್ಯತೆ ಇದೆ.

ಈ ಕ್ಷೇತ್ರದಲ್ಲಿ ಎರಡನೇ ಹಂತದಲ್ಲಿ ಅಂದರೆ ಮೇ 7ರಂದು ಚುನಾವಣೆ ನಡೆಯುತ್ತಿರುವುದರಿಂದ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ನಾಯಕರ ಬಹಿರಂಗ ಪ್ರಚಾರ ಸಭೆಗಳು ಇನ್ನೂ ಆರಂಭವಾಗಿಲ್ಲ. ಕೇವಲ ಅಭ್ಯರ್ಥಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಬಿಸಿಲ ಬೇಗೆಯಿಂದ ಬಚಾವಾಗಲು ಆದಷ್ಟೂ ಹೆಚ್ಚು ಬೆಳಗ್ಗೆ ಹಾಗೂ ಸಂಜೆಯ ವೇಳಯಲ್ಲಿ ಪ್ರಚಾರದಲ್ಲಿ ನಿರತರಾಗುತ್ತಿದ್ದಾರೆ. ಜತೆಗೆ ಬೃಹತ್ ಬಹಿರಂಗ ಸಭೆಗಿಂತ ಹಾಲ್‌ಗಳಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳ ಸಭೆ ಸಂಘಟಿಸುತ್ತಿದ್ದಾರೆ. ವಿವಿಧ ಸಮಾಜಗಳ ಮುಖಂಡರ ಮನೆಗೆ ಭೇಟಿ ನೀಡಿ ಅಲ್ಲೇ ಸಭೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಅಥವಾ ರಾಜ್ಯ ನಾಯಕರು ಪ್ರಚಾರಕ್ಕೆ ಆಗಮಿಸಿದಾಗ ಬೃಹತ್ ಸಭೆಗಳನ್ನು ಬಯಲು ಪ್ರದೇಶದಲ್ಲಿ ನಡೆಸಬೇಕಾದ ಅನಿವಾರ್ಯತೆ ಇದೆ. ಈ ಸುಡುಬಿಸಿಲಿನಲ್ಲಿ ಸಭೆಗಳಿಗೆ ಜನರನ್ನು ಸೇರಿಸುವುದು, ಸಭೆ ನಡೆಸುವುದು ರಾಜಕೀಯ ಪಕ್ಷಗಳಿಗೆ ಒಂದು ಸವಾಲಾಗಿದೆ. ಜನತೆ ಸಹ ಉರಿ ಬಿಸಿಲಿನಲ್ಲಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಪ್ರಚಾರ ಸಭೆಗಳನ್ನು ಸಹ ಮಧ್ಯಾಹ್ನ ಏರ್ಪಡಿಸುವುದಕ್ಕಿಂತ ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ಏರ್ಪಡಿಸುವ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರು ಯೋಚಿಸುತ್ತಿದ್ದಾರೆ. ಬಿರುಬಿಸಿಲಿನಲ್ಲಿ ಸಭೆ ನಡೆಸಿದರೆ ಜನರು ಬರುವುದು ಕಷ್ಟ ಎಂಬ ಮಾತುಗಳೂ ಕೇಳಿಬರುತ್ತಿವೆ. ಬಿಸಿಲಿನಿಂದಾಗಿ ರಾಜಕೀಯ ಪಕ್ಷಗಳ ಮುಖಂಡರಿಗೆ ಓಡಾಟವೂ ಕಷ್ಟಕರವಾಗಿದೆ.

ಪ್ರಚಾರದ ಭರಾಟೆ ಆರಂಭವಾಗುವ ಸಮಯದಲ್ಲಿ ಬಿಸಿಲಿನ ಭರಾಟೆಯೂ ಜೋರಾಗಿರಲಿದೆ. ಉರಿ ಬಿಸಿಲಿನ ನಡುವೆಯೂ ಪ್ರಚಾರಕಾರ್ಯ ನಡೆಸುವುದು ಅಭ್ಯರ್ಥಿಗಳಿಗೆ ಸವಾಲಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ