ಶಿಕ್ಷಕರ ಕೈ ತಪ್ಪಲಿರುವ ಮೊಟ್ಟೆ, ಬಾಳೆಹಣ್ಣು ಪೂರೈಕೆ!

KannadaprabhaNewsNetwork | Published : Jul 2, 2025 11:52 PM
2ಡಿಡಬ್ಲೂಡಿ4ಬಿಸಿಯೂಟ ಪೂರೈಸುವ ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಅಧಿಕಾರಿಗಳೊಂದಿಗೆ ಸಚಿವ ಸಂತೋಷ ಲಾಡ್‌ ಸಭೆ ನಡೆಸಿದರು.  | Kannada Prabha

ಸಾರಾಂಶ

ಈಗಿರುವ ಸರ್ಕಾರೇತರ ಸಂಸ್ಥೆಗಳು ಬಿಸಿಯೂಟದೊಂದಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುವ ಕುರಿತು ತುರ್ತಾಗಿ ತಮ್ಮ ಅಭಿಪ್ರಾಯ ಅಥವಾ ಒಪ್ಪಿಗೆ ಬಗ್ಗೆ ತಿಳಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿ, ಪರ್ಯಾಯ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲಾಗುತ್ತದೆ.

ಧಾರವಾಡ: ಅಂತೂ ಇಂತೂ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕರುಗಳು ಮೊಟ್ಟೆ, ಬಾಳೆಹಣ್ಣು ವಿತರಿಸುವ ಹಾಗೂ ಇವುಗಳ ಲೆಕ್ಕ ಇಡುವ ದೊಡ್ಡ ತಲೆನೋವಿನಿಂದ ಪಾರಾಗುವ ಸಮಯ ಬಂದಿದೆ.

ಜಿಲ್ಲೆಯಲ್ಲಿ ಬಿಸಿಯೂಟ ವಿತರಿಸುತ್ತಿರುವ ಸರ್ಕಾರೇತರ ಸಂಸ್ಥೆಗಳೇ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು ಪೂರೈಸಲು ಕ್ರಮವಹಿಸಬೇಕು. ಇಲ್ಲದಿದ್ದಲ್ಲಿ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಅಂತಿಮವಾಗಿ ಶಿಕ್ಷಕರಿಗೆ ಆಗುತ್ತಿರುವ ಶೈಕ್ಷಣಿಕೇತರ ಕಾರ್ಯ, ಒತ್ತಡಗಳನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.

ಜಿಲ್ಲಾಧಿಕಾರಿ, ಜಿಪಂ ಸಿಇಓ, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಬಿಸಿಯೂಟ ಪೂರೈಸುವ ಸರ್ಕಾರೇತರ ಸಂಸ್ಥೆಗಳೊಂದಿಗೆ ಮಂಗಳವಾರ ಸಂಜೆ ಸಭೆ ಜರುಗಿಸಿದ ಅವರು, ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಪ್ರತಿದಿನ ಬಿಸಿಯೂಟ ಸರಬರಾಜು ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳು, ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸಬೇಕು. ಪ್ರಸ್ತುತ ಶಿಕ್ಷಕರೇ ಮಾರುಕಟ್ಟೆಯಿಂದ ಮೊಟ್ಟೆ, ಬಾಳೆಹಣ್ಣು ತಂದು ವಿದ್ಯಾರ್ಥಿಗಳಿಗೆ ವಿತರಿಸುವ ಕಾರ್ಯದಿಂದ ಬೋಧನೆಗೆ ಸಮಯದ ಅಭಾವ, ಒತ್ತಡ ಉಂಟಾಗುತ್ತಿದೆ ಎಂದರು.

ಈಗಿರುವ ಸರ್ಕಾರೇತರ ಸಂಸ್ಥೆಗಳು ಬಿಸಿಯೂಟದೊಂದಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುವ ಕುರಿತು ತುರ್ತಾಗಿ ತಮ್ಮ ಅಭಿಪ್ರಾಯ ಅಥವಾ ಒಪ್ಪಿಗೆ ಬಗ್ಗೆ ತಿಳಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿ, ಪರ್ಯಾಯ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಸಚಿವ ಲಾಡ್‌ ತಿಳಿಸಿದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಈಗಾಗಲೇ ಸರ್ಕಾರೇತರ ಸಂಸ್ಥೆಗಳು ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಬಿಸಿಯೂಟ ನೀಡುತ್ತಿರುವದರಿಂದ ಮೊಟ್ಟೆ, ಬಾಳೆಹಣ್ಣುಗಳನ್ನು ವಿದ್ಯಾರ್ಥಿಗಳಿಗೆ ಅವರೇ ವಿತರಿಸದರೆ ಹೆಚ್ಚು ಸೂಕ್ತ. ಶಿಕ್ಷಕರಿಗೆ ಇದರಿಂದ ಆಗುತ್ತಿರುವ ಒತ್ತಡ ಕಡೆಮೆ ಆಗಲಿದೆ ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಹಾಗೂ ವಿತರಿಸಿದ ಬಗ್ಗೆ ದತ್ತಾಂಶ ದಾಖಲೀಕರಣದ ಕಾರಣದಿಂದಾಗಿ ಶಿಕ್ಷಕರಿಗೆ ಬಹಳಷ್ಟು ಸಮಯ ವ್ಯಯವಾಗುತ್ತಿದೆ. ಯೋಜನೆ ಅನುಷ್ಠಾನದಲ್ಲಿ ಆಕಸ್ಮಿಕ ವಿಳಂಬ, ಸಣ್ಣಪುಟ್ಟ ತೊಂದರೆಗಳಾದರೂ ಶಿಕ್ಷಕರನ್ನೇ ಹೊಣೆ ಮಾಡುತ್ತಿರುವುದರಿಂದ ಶಿಕ್ಷಕರು ಅನಗತ್ಯ ಒತ್ತಡಗಳಿಗೆ ಒಳಗಾಗುತ್ತಿದ್ದಾರೆ. ಪಠ್ಯೇತರ ಇಂತಹ ಕಾರ್ಯಗಳಿಂದ ಶಿಕ್ಷಕರಿಗೆ ಬಿಡುಗಡೆಗೊಳಿಸಿ, ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಒತ್ತು ನೀಡುವಂತೆ ಆಗಬೇಕಿದೆ ಎಂದರು.

ಜಿಲ್ಲೆಯಲ್ಲಿ ಪ್ರಸ್ತುತವಾಗಿ ಶಾಲೆಗಳಿಗೆ ಬಿಸಿಯೂಟ ಸರಬರಾಜು ಮಾಡುತ್ತಿರುವ ಇಸ್ಕಾನ್ ಮತ್ತು ಅದಮ್ಯಚೇತನ ಸಂಸ್ಥೆಯ ಪ್ರತಿನಿಧಿಗಳು ತಮ್ಮ ಟ್ರಸ್ಟ್ ಮುಖ್ಯಸ್ಥರೊಂದಿಗೆ ಚರ್ಚಿಸಿ, ಶೀಘ್ರವಾಗಿ ಸಚಿವರ ನಿರ್ದೇಶನದ ಕುರಿತು ತಮ್ಮ ತೀರ್ಮಾನವನ್ನು ಸಲ್ಲಿಸುವುದಾಗಿಯೂ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಸಚಿವರಿಗೆ ತಿಳಿಸಿದರು.

ಡಿಡಿಪಿಐ ಎಸ್.ಎಸ್. ಕೆಳದಿಮಠ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ, ಉಮೇಶ ಬೊಮ್ಮಕ್ಕನವರ, ಶಿವಾನಂದ ಮಲ್ಲಾಡದ, ಅಶೋಕ ಸಿಂದಗಿ, ಮಹಾದೇವಿ ಮಾಡಲಗೇರಿ, ಉಮಾದೇವಿ ಬಸಾಪುರ, ಯೋಜನಾಧಿಕಾರಿ ಎಸ್.ಎಂ. ಹುಡೇದಮನಿ, ವಿಜಯಲಕ್ಷ್ಮಿ ಹಂಚನಾಳ, ಡಾ. ರೇಣುಕಾ ಅಮಲಝೆರಿ, ಪ್ರಕಾಶ ಬೂತಾಳೆ, ಅಕ್ಷರದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿ ರೂಪಾ ಪುರಂಕರ ಇದ್ದರು.

PREV