ಕನ್ನಡಪ್ರಭ ವಾರ್ತೆ ಮಂಗಳೂರು
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕಪ್ಪ ಕೊಂಡೊಯ್ಯಲು ರಾಜ್ಯಕ್ಕೆ ಆಗಮಿಸಿದ್ದಾಗಿ ಎಂಎಲ್ಸಿ ಸಿ.ಟಿ. ರವಿ ಆರೋಸಿದ್ದಾರೆ. ಸಿಟಿ ರವಿ ಈ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಕಪ್ಪ ಕೊಂಡೊಯ್ಯುತ್ತಿದ್ರಾ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ತಿರುಗೇಟು ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಟಿ ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾತ್ರವಲ್ಲದೆ, ತಮಿಳುನಾಡು ಮತ್ತು ಗೋವಾ ರಾಜ್ಯಗಳ ಬಿಜೆಪಿ ಉಸ್ತುವಾರಿಯೂ ಆಗಿದ್ದರು. ಆಗ ಕಪ್ಪ ತೆಗೆದುಕೊಂಡು ಬರಲು ಆ ರಾಜ್ಯಗಳಿಗೆ ಹೋಗುತ್ತಿದ್ದರೋ ಎಂದು ಟೀಕಿಸಿದರು.
ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಧರ್ಮೇಂದ್ರ ಪ್ರಧಾನ್, ಈಗ ರಾಧಾಮೋಹನ್ ರಾಜ್ಯಕ್ಕೆ ಆಗಾಗ ಬರುತ್ತಿರುತ್ತಾರೆ. ಅವರು ಬರುತ್ತಿರೋದು ಕಪ್ಪ ಕೊಂಡೊಯ್ಯಲು ಎನ್ನುವುದು ಸಿ.ಟಿ. ರವಿ ಮಾತಿಯಿಂದ ಸಂಶಯ ಉಂಟಾಗಿದೆ ಎಂದು ಪದ್ಮರಾಜ್ ಹೇಳಿದರು.ದಿಢೀರ್ ಸಾವು- ಬಿಜೆಪಿ ಏನು ಮಾಡಿತ್ತು?: ಕೊರೋನಾ ಆರಂಭವಾದಾಗಿನಿಂದ ದಿಢೀರ್ ಹೃದಯಾಘಾತದಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಈಗ ಆರೋಗ್ಯ ಸಚಿವರ ಬಗ್ಗೆ ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದಾರೆ. 2021-22ರಲ್ಲೇ ಹಠಾತ್ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದ ಬಗ್ಗೆ ಆಗಲೇ ನಾನು ಗಮನ ಸೆಳೆದಿದ್ದೆ. ಆಗ ಕೇಂದ್ರದಲ್ಲೂ, ರಾಜ್ಯದಲ್ಲೂ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಇಂಥ ಸಾವಿನ ಪ್ರಕರಣಗಳಿಗೆ ಕಾರಣ ಹುಡುಕಲು ಏನನ್ನೂ ಮಾಡಲಿಲ್ಲ, ಆಗ ಏನೂ ಕ್ರಮ ಕೈಗೊಳ್ಳದೆ ಈಗ ಆರೋಪ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಸಲೀಂ, ಚೇತನ್, ಶಬೀರ್ ಸಿದ್ದಕಟ್ಟೆ, ಗಿರೀಶ್ ಶೆಟ್ಟಿ, ನಝೀರ್ ಬಜಾಲ್ ಇದ್ದರು.