ಶಿಗ್ಗಾಂವಿ: ಮಠಗಳು ಅನ್ನ ಕೊಡುವ ರೈತನಿಂದ ಬದುಕಿವೆ. ಹೀಗಾಗಿ ರೈತ ಗುಡುಗಿದರೆ ವಿಧಾನಸೌಧವೇ ನಡುಗಬೇಕು, ರೈತರು ಒಗ್ಗಟ್ಟಾಗುವ ಕಾಲ ಬಂದಿದೆ. ರೈತನ ಬೇಡಿಕೆ ಈಡೇರುವವರೆಗೂ ನಮ್ಮ ಮಠಾಧೀಶರ ಬೆಂಬಲ ಇರುತ್ತದೆ ಎಂದು ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.
ಗಂಜೀಗಟ್ಟಿ ಮಠದ ವೈಜಿನಾಥ ಶಿವಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ದೇಶವನ್ನು ಪ್ರೀತಿಸುವವರು ಈ ಮಣ್ಣನ್ನೂ ಪ್ರೀತಿಸಬೇಕು, ರೈತರು ಬೆಳೆದ ಎಲ್ಲ ಧಾನ್ಯಗಳನ್ನ ಊಟ ಮಾಡುವಂತಹ ಈ ದೇಶದ ಆಡಳಿತದವರಿರಲಿ, ಪ್ರಜೆಗಳಿರಲಿ, ಪ್ರಭುಗಳಿರಲಿ ಎಲ್ಲರೂ ರೈತರನ್ನ ಪ್ರೀತಿಸಬೇಕು, ನಮ್ಮನ್ನು ಆಳುವವರೇ ಸಂವಿಧಾನವನ್ನು ಅನುಸರಿಸುತ್ತಿಲ್ಲ, ರಾಜ್ಯ ಸರಕಾರವೇ ಇರಲಿ, ಕೇಂದ್ರ ಸರಕಾರವೇ ಇರಲಿ ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡಿದರೆ ರೈತರು ಒಗ್ಗಟ್ಟಾಗುವುದನ್ನು ಮರೆಯಬಾರದು. ಆ ಒಗ್ಗಟ್ಟು ಈಗ ಬಂದಿದೆ. ರೈತನಿಗೆ ನ್ಯಾಯಸಿಗಬೇಕು ಎಂದು ಆಶೀರ್ವದಿಸಿದರು.
ಹಿರೇಮಣಕಟ್ಟಿಯ ವಿಶ್ವಾರಾಧ್ಯ ಶಿವಾಚಾರ್ಯರು ಭಾಗವಹಿಸಿ ಮಾತನಾಡಿದರು. ಪಾದಯಾತ್ರೆಯಲ್ಲಿ ಜಿಲ್ಲೆ ಹಾಗೂ ವಿವಿಧ ತಾಲೂಕಿನ ರೈತರು ಭಾಗವಹಿಸಿದ್ದರು.ಹಾವೇರಿ ತಾಲೂಕಿನ ಗುತ್ತಲ ಗ್ರಾಮದ ಸಂಗನಬಸವ ಕಲ್ಮಠ ದೇವಸ್ಥಾನದಿಂದ ಧಾರವಾಡಕ್ಕೆ ಪಾದಯಾತ್ರೆ ಮೂಲಕ ಹಾವೇರಿ ಮಾರ್ಗವಾಗಿ ಆರಂಭವಾಗಿರುವ ರೈತ ಪಾದಯಾತ್ರೆಯು ಶನಿವಾರ ಶಿಗ್ಗಾಂವಿ ತಾಲೂಕಿನ ಬಿಸನಳ್ಳಿ ಗ್ರಾಮದ ಕಾಶಿ ಶಾಖಾ ಮಠಕ್ಕೆ ರಾತ್ರಿ ಆಗಮಿಸಿ ವಾಸ್ತವ್ಯ ಮಾಡಿದರು. ಭಾನುವಾರ ಕಾಶಿ ಗುರುಪೀಠ ಮಠದಿಂದ ಪ್ರಾರಂಭವಾಗಿ ಶಿಗ್ಗಾಂವಿ ಚನ್ನಮ್ಮ ಸರ್ಕಲ್ ಆಗಮಿಸಿ ಪಟ್ಟಣದ ವೀರರಾಣಿ ಕಿತ್ತೂರ ಚೆನ್ನಮ್ಮ ವೃತ್ತಕ್ಕೆ ಬಂದು ಚೆನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಪಾದಯಾತ್ರೆಯು ಕಾಮನಹಳ್ಳಿ ಗ್ರಾಮದ ಮುಖಾಂತರ ಮಡ್ಲಿ ಗ್ರಾಮದ ಕ್ರಾಸ್ ಕಡೆಗೆ ತೆರಳಿದರು.