ಕನ್ನಡಪ್ರಭ ವಾರ್ತೆ ಹಾಸನ
ಹಾಸನ ವಿವಿ ಕುಲಪತಿಗಳಾದ ಪ್ರೊ. ಟಿ ಸಿ ತಾರಾನಾಥ್ ಮತ್ತು ಕುಲಸಚಿವರಾದ ಬಿ.ಎ ಜಗದೀಶ್ ಅವರು ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಕುಲಸಚಿವರು, ಐದು ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು 1956ರ ನವೆಂಬರ್ 1ರಂದು ಒಗ್ಗೂಡಿಸಿ ವಿಶಾಲ ಮೈಸೂರು ರಾಜ್ಯವನ್ನು ರಚಿಸಲಾಯಿತು. ಮುಂದೆ 1973ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಈ ಐತಿಹಾಸಿಕ ದಿನವನ್ನು ನಾವು ಪ್ರತಿವರ್ಷ ಕನ್ನಡ ರಾಜ್ಯೋತ್ಸವವಾಗಿ ಆಚರಿಸುತ್ತೇವೆ. ಕನ್ನಡ ಭಾಷೆಯು ಉಳಿಯಲು ಬೆಳೆಯಲು ನಿರಂತರ ಬಳಕೆಯಿಂದ ಮಾತ್ರ ಸಾಧ್ಯ. ಮಾತೃಭಾಷೆಯ ಬಗ್ಗೆ ಅಭಿಮಾನ ರೂಢಿಸಿಕೊಳ್ಳುವುದರ ಜೊತೆಗೆ ಸೋದರ ಭಾಷೆಗಳ ಜೊತೆಗೆ ಸಹಿಷ್ಣತೆ ಇರಬೇಕು ಆಗ ಮಾತ್ರ ಒಂದು ಭಾಷೆ ಹೆಚ್ಚು ಕಾಲ ಜೀವಂತಿಕೆಯಿಂದ ಇರಲು ಸಾಧ್ಯ, ಕನ್ನಡದಲ್ಲಿರುವ ಭಾಷಿಕ ವೈಶಿಷ್ಟ್ಯತೆ ನಮ್ಮ ಭಾಷೆಯ ಸೊಬಗನ್ನು ಇಮ್ಮಡಿಗೊಳಿಸಿದೆ. ಇಂದಿನ ಜಾಗತೀಕರಣ ಮತ್ತು ತಂತ್ರಜ್ಞಾನದ ಯುಗದಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚಾಗಬೇಕಾಗಿದೆ. ನಮ್ಮ ಮನೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಆಡಳಿತದಲ್ಲಿ ಹಾಗೂ ದೈನಂದಿನ ವ್ಯವಹಾರಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಉಪನ್ಯಾಸಕ ಡಾ. ನಟರಾಜು ಮಾತನಾಡಿ, ಕರ್ನಾಟಕ ಏಕೀಕರಣದ ಚರಿತ್ರೆಯ ಸ್ಮರಿಸುತ್ತಾ ಬ್ರಿಟೀಷರು ಭಾರತದಲ್ಲಿ ತಮ್ಮ ಎರಡು ನೂರು ವರ್ಷಗಳ ಆಡಳಿತದಲ್ಲಿ ಅನೇಕ ಯುದ್ಧಗಳನ್ನು ಮಾಡಿದ್ದು ಸೋಲಿನ ರುಚಿ ಕಂಡಿದ್ದು ಮಾತ್ರ ಕನ್ನಡಿಗರಿಂದ ಒಂದು ಮತ್ತು ಎರಡನೆ ಆಂಗ್ಲೋ ಮೈಸೂರು ಯುದ್ಧದಲ್ಲಿ. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡ ಪುಸ್ತಕಗಳು, ಪತ್ರಿಕೆಗಳು ಮತ್ತು ಜನಪದ ಕಲೆಗಳನ್ನು ಪ್ರೋತ್ಸಾಹಿಸಬೇಕು ಎಂದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಪ್ರೊ.ಟಿ ಸಿ ತಾರಾನಾಥ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸುತ್ತಾ ಕನ್ನಡ ರಾಚನಿಕವಾಗಿ ಅತ್ಯಂತ ಸುಂದರವಾದ ಭಾಷೆ ಇದನ್ನು ಬರೆಯಲು ಮತ್ತು ಬಳಸಲು ಸೊಗಸಾದುದು. ಅಷ್ಟೇ ಅಲ್ಲ ಕರ್ನಾಟಕ ಪ್ರದೇಶ ಕೂಡ ಪ್ರಾಕೃತಿಕವಾಗಿ ಸಂಪದ್ಭರಿತವಾದುದು. ಇಲ್ಲಿನ ಮೈಸೂರು ಸಂಸ್ಥಾನದ ಕೊಡುಗೆಗಳು ಇಡೀ ದೇಶಕ್ಕೆ ಮಾದರಿಯಾದುದು ಇವತ್ತಿಗೂ ದೇಶದ ದಿಕ್ಸೂಚಿಯನ್ನು ನಿರ್ಧರಿಸುವುದು ಕರ್ನಾಟಕದಿಂದ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದೇವೆ. ಏಕೀಕರಣದ ವೇಳೆ ಕನ್ನಡದ ವಿವಿಧ ಪ್ರಾಂತ್ಯಗಳನ್ನು ಒಗ್ಗೂಡಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಧಾರವಾಡದ ವಿಧ್ಯಾವರ್ಧಕ ಸಂಘದ ಶ್ರಮ ಮಹತ್ವದಾದುದು. ಯಾವ ವ್ಯಕ್ತಿಗೆ ಮಾತೃಭಾಷೆಯಲ್ಲಿ ಹಿಡಿತವಿರುತ್ತದೊ ಆತ ಮಾತ್ರ ಜಗತ್ತಿನ ಇತರೆ ಭಾಷೆಗಳ ಜೊತೆ ಸ್ಪರ್ಧಿಸಲು ಸಾಧ್ಯ ಎನ್ನುತ್ತಾ ಕನ್ನಡ ಕೇವಲ ಒಂದು ಭಾಷೆಯಲ್ಲ; ಅದು ನಮ್ಮ ಬದುಕಿನ ಸಂಸ್ಕೃತಿ, ನಮ್ಮ ಇತಿಹಾಸ, ನಮ್ಮ ಭಾವನೆ ಮತ್ತು ನಮ್ಮ ಅಸ್ಮಿತೆಯಾಗಿದೆ. ಯುವಜನರು ಕನ್ನಡ ಭಾಷೆಯ ಭವಿಷ್ಯದ ಆಶಾಕಿರಣಗಳಾಗಿದ್ದಾರೆ. ಸಾಮಾಜಿಕ ಜಾಲತಾಣಗಳು, ವಿಜ್ಞಾನ, ತಂತ್ರಜ್ಞಾನ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಬೇಕು. ಕನ್ನಡ ನಾಡಿನ ಇತಿಹಾಸ, ಪರಂಪರೆ, ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು.ನಾಡು ಕಟ್ಟುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯೂ ಆಗಿದೆ ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಸಹಾಯಕ ಕಲಸಚಿವರಾದ ವಸಂತ್ ಕುಮಾರ್, ಕ್ರೀಡಾ ಸಹಾಯಕ ನಿರ್ದೇಶಕ ಚಂದ್ರ ನಾಯಕ್ ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.